Wednesday, October 18, 2023

ಬಿ.ಸಿ.ರೋಡಿನ ಫ್ಲೆಓವರ್‌ಗೆ ಬಣ್ಣ ಬಳಿದು ಸುಂದರಗೊಳಿಸುವ ಕಾರ್ಯ ಆರಂಭ

Must read

ಬಂಟ್ವಾಳ: ನಿರ್ಮಾಣ ಹಂತದಲ್ಲೇ ಸಾಕಷ್ಟು ಟೀಕೆಗಳಿಗೆ ಗುರಿಯಾಗಿ ಪ್ರಸ್ತುತ ಬಣ್ಣ ಮಾಸಿ ಸಂಪೂರ್ಣ ಕಳೆಗುಂಡಿದ್ದ ಬಿ.ಸಿ.ರೋಡಿನ ಫ್ಲೆಓವರ್‌ಗೆ ಇದೀಗ ಬಣ್ಣ ಬಳಿದು ಸುಂದರಗೊಳಿಸುವ ಕಾರ್ಯ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಫ್ಲೆಓವರ್‌ಗೆ ವಿವಿಧ ಚಿತ್ತಾರಗಳಿಂದ ಮಿಂಚಲಿದೆ.
ಬಿ.ಸಿ.ರೋಡು ಸುಂದರೀಕರಣದ ಭಾಗವಾಗಿ ಈ ಕಾಮಗಾರಿ ನಡೆಯುತ್ತಿದ್ದು, ಇದೀಗ ಫ್ಲೆಓವರ್ ಮೇಲ್ಭಾಗದಲ್ಲಿ ಸಾರಿಗೆ ನಿಯದಂತೆ ಎರಡೂ ಬದಿಯ ತಡೆಗೋಡೆಗಳಿಗೆ ಕಪ್ಪು ಹಾಗೂ ಹಳದಿ ಬಣ್ಣ ಬಳಿಯುವ ಕಾರ್ಯ ನಡೆಯುತ್ತಿದೆ. ಉಳಿದಂತೆ ಅದರ ಬದಿಯನ್ನು ತೊಳೆಯುವ ಕಾಮಗಾರಿ ಕೂಡ ಪ್ರಗತಿಯಲ್ಲಿದೆ. ತಳಭಾಗದಲ್ಲಿ ತೊಳೆಯುವ ಕಾಮಗಾರಿ ಪೂರ್ಣಗೊಂಡ ಬಳಿಕ ಮ್ಯಾಟ್ ಫಿನಿಶ್ ಬಣ್ಣ ಬಳಿಯಲಾಗುತ್ತದೆ.
ಫ್ಲೆಓವರ್ ನಿರ್ಮಾಣದ ಬಳಿಕ ಯಾವುದೇ ರೀತಿಯ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಫ್ಲೆಓವರ್ ಸಂಪೂರ್ಣ ಕಳೆಗುಂದಿದ ಸ್ಥಿತಿಗೆ ಬಂದಿತ್ತು. ಒಂದು ಹಂತದಲ್ಲಿ ಬಿ.ಸಿ.ರೋಡಿನ ಫ್ಲೆಓವರನ್ನು ತೆಗೆಯುವ ಮಾತುಗಳು ಕೇಳಿಬಂದಿದ್ದು, ಪ್ರಸ್ತುತ ಅದರ ಪ್ರಸ್ತಾಪವೇ ಇಲ್ಲದಾಗಿದೆ. ಮಳೆ ನೀರು ಅದರ ಕೆಳಭಾಗಕ್ಕೆ ಇಳಿದು ಪಾಚಿ ಹಿಡಿದ ಸ್ಥಿತಿಗೆ ತಲುಪಿತ್ತು. ನಿರ್ಮಾಣಗೊಂಡ ಬಳಿಕ ಇದೇ ಮೊದಲ ಬಾರಿಗೆ ಬಣ್ಣ ಬಳಿಯುವ ಕಾರ್ಯ ನಡೆಯಲಿದ್ದು, ಹೀಗಾಗಿ ಮುಂದೆ ಫ್ಲೆಓವರ್ ಬಣ್ಣಗಳೊಂದಿಗೆ ಮಿಂಚುವ ಸಾಧ್ಯತೆ ಇದೆ.

ಮಿಂಚಲಿದೆ ಬಣ್ಣದ ಚಿತ್ತಾರ
ಫ್ಲೆಓವರ್‌ನ ತಳಭಾಗದಲ್ಲಿ ಮ್ಯಾಟ್ ಫಿನಿಶ್ ಬಣ್ಣ ಬಳಿಯುವ ಕಾರ್ಯ ಪೂರ್ಣಗೊಂಡ ಬಳಿಕ ವಿವಿಧ ಬಗೆಯ ಕಲಾಕೃತಿಗಳನ್ನು ಬಿಡಿಸುವ ಚಿಂತನೆ ನಡೆಸಲಾಗಿದೆ. ಮಂಗಳೂರಿನ ಕೊಟ್ಟಾರಚೌಕಿ, ಕೂಳೂರು, ಸುರತ್ಕಲ್‌ನ ಫ್ಲೆಓವರ್‌ಗಳಲ್ಲಿ ಈಗಾಗಲೇ ಫ್ಲೆಓವರ್ ತಳಭಾಗದಲ್ಲಿ ಈಗಾಗಲೇ ಚಿತ್ತಾರಗಳನ್ನು ಬಿಡಿಸಲಾಗಿದ್ದು, ಅದೇ ಮಾದರಿಯಲ್ಲಿ ಬಿ.ಸಿ.ರೋಡಿನಲ್ಲೂ ಚಿತ್ರಗಳನ್ನು ಬಿಡಿಲಾಗುತ್ತಿದೆ.

ತಳಭಾಗಕ್ಕೂ ಇಂಟರ್‌ಲಾಕ್
ಕೆಸರು ನೀರು, ಕಲ್ಲು ತುಂಡುಗಳು ತುಂಬಿ ನಿರ್ಲಕ್ಷ್ಯ ಸ್ಥಿತಿಯಲ್ಲಿದ್ದ ಫ್ಲೆಓವರ್‌ನ ತಳಭಾಗಕ್ಕೆ ಇಂಟರ್‌ಲಾಕ್ ಹಾಕುವ ದೃಷ್ಟಿಯಿಂದ ಈಗಾಗಲೇ ಸಮತ್ತಟ್ಟು ಮಾಡುವ ಕಾಮಗಾರಿ ಪೂರ್ಣಗೊಂಡಿದೆ. ಮುಂದೆ ಪಿಲ್ಲರ್‌ಗಳಲ್ಲಿ ಚಿತ್ರಗಳನ್ನು ಬಿಡಿಸುವ ಮುನ್ನ ಇಂಟರ್‌ಲಾಕ್ ಅಳವಡಿಕೆಯ ಕಾಮಗಾರಿ ಪೂರ್ಣಗೊಳ್ಳಲಿದೆ. ಫ್ಲೆಓವರ್ ಒಂದು ಬದಿಯ ತಳಭಾಗದಲ್ಲಿ ಸಾರ್ವಜನಿಕ ಶೌಚಾಲಯದ ಕಾಮಗಾರಿ ಕೂಡ ಪೂರ್ಣಗೊಂಡರೆ ಬಿ.ಸಿ.ರೋಡು ನಗರದ ಸೌಂದರ್ಯ ವೃದ್ಧಿಯಾಗಲಿದೆ.

More articles

Latest article