Thursday, October 19, 2023

ಬ್ರಹ್ಮ ಶ್ರೀ ನಾರಾಯಣ ಗುರು ವಸತಿ ಶಾಲೆ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆಯಲ್ಲಿ ನಿರ್ಮಾಣ

Must read

ಬಂಟ್ವಾಳ: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ಬಜೆಟ್‌ನಲ್ಲಿ ನಾಲ್ಕು ಜಿಲ್ಲೆಗಳಿಗೆ ತಲಾ ಒಂದೊಂದು ಶ್ರೀನಾರಾಯಣ ಗುರು ವಸತಿ ಶಾಲೆಗಳನ್ನು ಮಂಜೂರು ಮಾಡಿದ್ದು, ದ.ಕ.ಜಿಲ್ಲೆಗೆ ಮಂಜೂರಾದ ವಸತಿ ಶಾಲೆಯನ್ನು ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆಯಲ್ಲಿ ನಿರ್ಮಿಸುವ ಕುರಿತು ಸಿದ್ಧತೆಗಳು ನಡೆಯುತ್ತಿದೆ. ಬಜೆಟ್‌ನಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಂದು ಶ್ರೀನಾರಾಯಣ ಗುರು ವಸತಿ ಶಾಲೆ ಪ್ರಾರಂಭಿಸುವ ಕುರಿತು ಘೋಷಣೆ ಮಾಡಲಾಗಿತ್ತು. ಹಿಂದುಳಿದ ವರ್ಗಗಳ ಇಲಾಖೆಯ ಮೂಲಕ ಈ ಶಾಲೆಗಳು ನಿರ್ವಹಣೆಯಾಗುವ ಸಾಧ್ಯತೆ ಇದ್ದು, ಅದೇ ಇಲಾಖೆಯ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ಇತ್ತೀಚೆಗೆ ಬಂಟ್ವಾಳದ ಕಾರ್ಯಕ್ರಮವೊಂದರಲ್ಲಿ ೨೯ ಕೋ.ರೂ.ಅನುದಾನದ ದ.ಕ.ಜಿಲ್ಲೆಯ ವಸತಿ ಶಾಲೆಯನ್ನು ಬಂಟ್ವಾಳಕ್ಕೆ ನೀಡುವುದಾಗಿ ಭರವಸೆ ನೀಡಿದ್ದರು.
ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯದ ಕೇಂದ್ರದ ಹಿಂಭಾಗದಲ್ಲಿ ಸುಮಾರು ೧೫ ಎಕರೆ ನಿವೇಶನವನ್ನು ಏಕಲವ್ಯ ಶಾಲೆಗೆ ಮೀಸಲಿರಿಸಲಾಗಿದ್ದು, ಅದರ ಆರ್‌ಟಿಸಿ ಕೂಡ ಶಾಲೆಯ ಹೆಸರಿಗೆ ಮಂಜೂರಾಗಿತ್ತು. ಆದರೆ ಆ ಶಾಲೆಯ ಮಂಜೂರಾತಿ ಪ್ರಕ್ರಿಯೆ ವಿಳಂಬವಾದ ಕಾರಣ ಪ್ರಸ್ತುತ ಅದೇ ನಿವೇಶನವನ್ನು ಶ್ರೀನಾರಾಯಣ ಗುರು ವಸತಿ ಶಾಲೆಗೆ ಮಂಜೂರು ಮಾಡುವ ಕುರಿತು ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಶ್ರೀನಾರಾಯಣ ಗುರು ವಸತಿ ಶಾಲೆ ಮಂಜೂರಾಗುವ ಮೊದಲೇ ನಾವೂರು ಗ್ರಾಮದಲ್ಲಿಯೂ ಸುಮಾರು ೧೦ ಎಕರೆ ನಿವೇಶನವನ್ನು ವಾಜಪೇಯಿ ವಸತಿ ಶಾಲೆಗಾಗಿ ಮೀಸಲಿಟ್ಟು, ಅದರ ಮಂಜೂರಾತಿಗಾಗಿ ಪ್ರಯತ್ನಗಳನ್ನು ಮಾಡಲಾಗಿತ್ತು. ಅದರ ಪ್ರಯತ್ನದ ನಡುವೆಯೇ ಇದೀಗ ಬಂಟ್ವಾಳಕ್ಕೆ ಶ್ರೀನಾರಾಯಣ ಗುರು ವಸತಿ ಶಾಲೆ ಲಭಿಸಿದೆ. ಮುಂದಿನ ದಿನಗಳಲ್ಲಿ ಏಕಲವ್ಯ ಶಾಲೆ ಬಂದರೆ ಅದು ಬಂಟ್ವಾಳದ ಬೇರೆಡೆಗೆ ಸ್ಥಳಾಂತರವಾಗುವ ಸಾಧ್ಯತೆ ಇದೆ.
ಹಾಲಿ ವಸತಿ ಶಾಲೆಗೆ ಗುರುತಿಸಿದ ಸ್ಥಳವು ಬಂಟ್ವಾಳದ ಪಿಲಾತಬೆಟ್ಟು ಗ್ರಾಮಕ್ಕೆ ಸಂಬಂಧಿಸಿದ್ದು, ಪುಂಜಾಲಕಟ್ಟೆ ಪ್ರದೇಶವು ಬಂಟ್ವಾಳ ಹಾಗೂ ಬೆಳ್ತಂಗಡಿ ಎರಡೂ ಕ್ಷೇತ್ರಕ್ಕೂ ಸಂಬಂಧಪಟ್ಟಿರುವುದರಿಂದ ಈ ಎರಡೂ ಕ್ಷೇತ್ರಗಳ ಸಾಕಷ್ಟು ಗ್ರಾಮೀಣ ಪ್ರದೇಶಗಳಿಗೆ ಸಮೀಪದ ಸ್ಥಳವಾಗಿದೆ. ಜತೆಗೆ ಹಾಲಿ ಗುರುತಿಸಿದ ನಿವೇಶನ ಶಾಲೆ ನಿರ್ಮಾಣಕ್ಕೆ ಸೂಕ್ತವಾಗಿದ್ದು, ಹೆದ್ದಾರಿಯ ಸಮೀಪದಲ್ಲಿರುವುದರಿಂದ ಇದೇ ಸ್ಥಳವನ್ನು ಆಯ್ಕೆ ಮಾಡಿರುವ ಸಾಧ್ಯತೆ ಇದೆ.

ಬಂಟ್ವಾಳದಲ್ಲಿ ಈಗಾಗಲೇ ಜಾಗ ಕಾದಿರಿಸಿರುವ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಬಂಟ್ವಾಳಕ್ಕೆ ನಾರಾಯಣ ಗುರು ವಸತಿ ಶಾಲೆಯನ್ನು ನೀಡುತ್ತಿದ್ದು, ಜತೆಗೆ ಜಿಲ್ಲೆಯ ಹೃದಯಭಾಗ ಎಂಬುದಕ್ಕೆ ಬಂಟ್ವಾಳ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಪ್ರತಿ ಕ್ಷೇತ್ರದಲ್ಲೂ ಇಂತಹ ವಸತಿ ಶಾಲೆಗಳನ್ನು ಅನುಷ್ಠಾನ ಮಾಡಲಿದ್ದೇವೆ. ಹಾಲಿ ೪ ಜಿಲ್ಲೆಗಳಿಗೆ ತಲಾ ಒಂದೊಂದು ವಸತಿ ಶಾಲೆ ಮಂಜೂರಾಗಿದ್ದು, ಪ್ರತಿ ಜಿಲ್ಲೆಯ ಮಧ್ಯಭಾಗಕ್ಕೆ ಜಾಗ ಇರುವಲ್ಲಿ ಹಾಗೂ ವಸತಿ ಶಾಲೆ ಕಡಿಮೆ ಇರುವಲ್ಲಿ ಅನುಷ್ಠಾನ ಮಾಡಲಿದ್ದೇವೆ. ವಸತಿ ಶಾಲೆಗಳಿಗೆ ಮೆರಿಟ್ ಆಧಾರದಲ್ಲಿ ಮಕ್ಕಳ ನೇಮಕಾತಿಯ ಜತೆಗೆ ೨೫ ಶೇ. ಸ್ಥಳೀಯ ವಿದ್ಯಾರ್ಥಿಗಳಿಗೂ ಆದ್ಯತೆ ನೀಡುತ್ತೇವೆ.
ಕೋಟ ಶ್ರೀನಿವಾಸ ಪೂಜಾರಿ
ಸಚಿವರು, ಸಮಾಜ ಕಲ್ಯಾಣ-ಹಿಂದುಳಿದ ವರ್ಗಗಳ ಇಲಾಖೆ

ಕಳೆದ ಬಜೆಟ್‌ನಲ್ಲಿ ಜಿಲ್ಲೆಯ ಮಂಜೂರಾದ ನಾರಾಯಣ ಗುರು ವಸತಿ ಶಾಲೆಯನ್ನು ಬಂಟ್ವಾಳಕ್ಕೆ ನೀಡುವುದಾಗಿ ಸಚಿವರು, ಸಂಸದರು ಭರವಸೆ ನೀಡಿದ್ದು, ಅದಕ್ಕೆ ಬೇಕಾದ ಸೂಕ್ತ ಸ್ಥಳ ಪುಂಜಾಲಕಟ್ಟೆಯಲ್ಲಿ ಲಭ್ಯವಿರುವುದರಿಂದ ಅಲ್ಲಿ ನಿರ್ಮಿಸುವ ಕುರಿತು ಚಿಂತನೆ ಇದೆ. ಅಲ್ಲಿರುವ ನಿವೇಶನ ಸಂಬಂಧಪಟ್ಟ ವಸತಿ ಶಾಲೆಗೆ ಮಂಜೂರಾದ ಬಳಿಕ ಈ ಕುರಿತು ಸಿದ್ಧತೆಗಳನ್ನು ಕೈಗೊಳ್ಳಲಾಗುವುದು.
ರಾಜೇಶ್ ನಾಯ್ಕ್ ಉಳಿಪ್ಪಾಡಿ
ಶಾಸಕರು, ಬಂಟ್ವಾಳ.

ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಇಷ್ಟು ವರ್ಷಗಳ ಕಾಲ ನಿಷ್ಠೆಯಿಂದ ದುಡಿದ ಫಲವಾಗಿ ಬ್ರಹ್ಮ ಶ್ರೀ ನಾರಾಯಣ ಗುರು ವಸತಿ ಶಾಲೆಯನ್ನು ಬಿಜೆಪಿ ನೇತ್ರತ್ವದ ಸರಕಾರ ನನ್ನ ಊರು ಪುಂಜಾಲಕಟ್ಟೆಗೆ ಅನುಷ್ಠಾನ ಮಾಡಿದ್ದಾರೆ, ಇದು ನನ್ನ ಅತೀವ ಸಂತಸದ ಕ್ಷಣ, ಮಂಜೂರು ಮಾಡಲು ಪ್ರಯತ್ನಿಸಿದ ಪಕ್ಷದ ಎಲ್ಲಾ ಪ್ರಮುಖರಿಗೆ ವೈಯಕ್ತಿಕ ಅಭಿನಂದನೆ ಗಳು.

*ಮಾಜಿ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ* .

More articles

Latest article