ವಿಟ್ಲ: ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ಬಹಳ ದುಃಖದ ವಿಚಾರವಾಗಿದೆ. ನೇರವಾಗಿ ಆರೋಪ ಮಾಡಿ ಡೆತ್ ನೋಟ್ ಬರೆದ ಕಾರಣ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪನವರು ತಕ್ಷಣ ರಾಜೀನಾಮೆ ನೀಡಬೇಕು ಮತ್ತು ಪೊಲೀಸ್ ಇಲಾಖೆ ಅವರನ್ನು ಬಂಧಿಸಿ ವಿಶೇಷವಾದ ತನಿಖೆಗೆ ಒಳಪಡಿಸಬೇಕೆಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನ ಎಲ್ಲಾ ಸದಸ್ಯರ ಆಗ್ರಹವಾಗಿದೆ ಎಂದು ಕೆ.ಪಿ.ಸಿ.ಸಿ. ಕಾರ್ಯದರ್ಶಿ ಎಂ. ಎಸ್. ಮಹಮ್ಮದ್ ಹೇಳಿದರು.
100ಕ್ಕೂ ಅಧಿಕ ಕಾಮಗಾರಿಯನ್ನು ಯಾವುದೇ ಆದೇಶವೆಲ್ಲದೆ, ಮುಂಚಿತವಾಗಿ ಕಾಮಗಾರಿ ನಡೆಸುವಂತೆ ತಿಳಿಸಿದಾಗ ಇಲಾಖೆಯಲ್ಲಿ ದಾಖಲೆಗಳಿರಲು ಸಾಧ್ಯವಿಲ್ಲ. 4-5 ಕೋಟಿಯ ವೆಚ್ಚದ ಕಾಮಗಾರಿಯ ಕೆಲಸವಾದ ಬಳಿಕ ಬಿಲ್ಲು ಪಾವತಿಸಬೇಕಾದ್ದು ಧರ್ಮವಾಗಿರುತ್ತದೆ. ಶೇ.40ರಷ್ಟು ಕಮಿಪನ್ ವಿಚಾರದಲ್ಲಿ ಪ್ರಧಾನಿಗಳಿಗೆ ದೂರು ನೀಡುವ ಕಾರ್ಯವೂ ಗುತ್ತಿಗೆದಾರರ ಸಂಘದಿಂದ ನಡೆದಿದೆ. ದೂರಿಗೆ ಸ್ಪಂದಿಸುವ ಕಾರ್ಯವಾಗಿದ್ದರೆ ಇಂತಹ ಯಾವ ಘಟನೆ ನಡೆಯುತ್ತಿರಲಿಲ್ಲ ಎಂಬುದು ನಮ್ಮ ಭಾವನೆಯಾಗಿದೆ ಎಂದು ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ, ಕಾರ್ಮಿಕ ಘಟಕದ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಕೊಲ್ಯ, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿ. ಕೆ. ಎಂ. ಅಶ್ರಫ್ ಉಪಸ್ಥಿತರಿದ್ದರು.