ಬದುಕಿನ ಜೋಕಾಲಿಯಾಟ*
——————————————-

*”ಟೀಚರ್, ಯಾವಾಗ ಊರಿಗೆ? ಇನ್ನು ಸ್ವಲ್ಪ ದಿನ ನಿಮ್ಮನ್ನು ಕಾಣ್ಲಿಕ್ಕೆ ಇಲ್ಲ ಅಲ್ವಾ? “*

ಯಾವುದೋ ಊರಿಂದ ಮತ್ತಾವುದೋ ಊರಿಗೆ ಬಂದು ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸ್ತಾ ಇದ್ದ ನನಗೆ, ಶೈಕ್ಷಣಿಕ ವರ್ಷ ಮುಗಿತಾ ಬಂದ ಹಾಗೆ ಇಂತಹ ಪ್ರಶ್ನೆಗಳು ಜನರಿಂದ ಸಹಜವಾಗಿರುತಿತ್ತು. ಅವರ ಪ್ರಶ್ನೆ ಗೆಲ್ಲಾ, ಹಾ, ಹೊರಡ್ಬೇಕು ಇನ್ನು ಒಂದೆರಡು ದಿನದಲ್ಲಿ…. ಅನ್ನೋ ನನ್ನ ಉತ್ತರವೂ ಸಹಜವಾಗಿರುತ್ತಿತ್ತು.

ಎರಡು ದಿನದೊಳಗೆ ಮಕ್ಕಳ ರಿಸಲ್ಟ್ ಕೊಡ್ಬೇಕು, ದಾಖಲೆಗಳನ್ನು ಪೂರ್ಣ ಮಾಡ್ಬೇಕು, ಜೊತೆಗೆ ಬಿಸಿಊಟದ ಡಿ. ಬಿ ಟಿ ಅಂತ ತುಂಬಾ ಗಡಿ ಬಿಡಿಯಲ್ಲೇ ಇದ್ದೆ. ಇಲಾಖೆ ನೀಡಿದ್ದ,ಶಾಲೆಗೆ ರಜೆ ಕೊಡುವ ಮೊದಲು ನೀಡಬೇಕಾದ ಮಾಹಿತಿಗಳ ಪಟ್ಟಿ ಕೈಯಲ್ಲೇ ಇತ್ತು. ಇನ್ನೇನು ಎರಡು ದಿನ ಶಾಲೆ ಇತ್ತು ಅಷ್ಟೇ.*ಏನ್ ಟೀಚರ್, ಯಾವಾಗ ಊರಿಗೆ?* ಮತ್ತದೇ ಪ್ರಶ್ನೆ ಎದುರಾದಾಗ ಹೊರಡ್ಬೇಕು ನಾಲ್ಕು ದಿನದಲ್ಲಿ…. ಎಂದು ಉತ್ತರಿಸಿ ಗಾಡಿ ಸ್ಟಾರ್ಟ್ ಮಾಡಿ ಹೊರಡ್ಬೇಕು ಅನ್ನುವಷ್ಟರಲ್ಲಿ *ಯಾವಾಗ ಟೀಚರ್ ಪಾಸು ಫೇಲು?* ಮತ್ತೊಂದು ಪ್ರಶ್ನೆ ಎದುರಾಯ್ತು. ಅವರಿಗೆ ಉತ್ತರ ಕೊಡುವಷ್ಟರಲ್ಲಿ ಇನ್ನೊಬ್ಬ ವ್ಯಕ್ತಿ

*ಯೇ ಎಂತ ಪಾಸು ಫೇಲು..? ಈಗ ಎಲ್ರು ಪಾಸೆ….20 ಮಾರ್ಕು ತೆಗೆದರೂ ಪಾಸೆ,100ಮಾರ್ಕ್ ತೆಗೆದರೂ ಪಾಸೆ.. ಅಲ್ವಾ ಟೀಚರ್….?* ಎಂದ ಅವರ ಮಾತಿಗೆ

*ಹೂಂ, ನಿಮ್ಮ ಮಗ ಒಬ್ಬನನ್ನು* *ಬಿಟ್ಟು ಮತ್ತೆ ಎಲ್ರೂ ಪಾಸೆ…*
ನನ್ನ ಮಾತು ತುಟಿಯವರೆಗೂ ಬಂದು ಸುಮ್ಮನಾಯಿತು. ನಿಂಗ್ಯಾಕೆ ಊರ ಉಸಾಬರಿ, ಸುಮ್ನೆ ಬಾ ಅಂತ ಕನ್ನಡಿ ತರಾಟೆಗೆ ತೆಗೆದು ಕೊಂಡ ಹಾಗೆನಿಸಿ ಸುಮ್ಮನೆ ಮುಂದೆ ಸಾಗಿ ಬಿಟ್ಟೆ…. ಹ್ಮ್…. ನನ್ನ ಕನ್ನಡಿ ನೆನಪಿರಬಹುದು ನಿಮ್ಗೆ ಅಲ್ವಾ?

ಅವರ ಪ್ರಶ್ನೆ ಆ ಕ್ಷಣಕ್ಕೆ ನನಗೆ ರೇಗುವಂತಾದರೂ ನನ್ ಕೆಲಸಗಲೆಲ್ಲ ಮುಗಿದು ಮಕ್ಕಳ ಫಲಿತಾಂಶ ಘೋಷಿಸುವ ದಿನ ಬಂದಾಗ ಅವರ ಮಾತು ನಿಜ ಅನಿಸ್ತು. ನೀವೆಲ್ಲ ಇನ್ನು ಮುಂದಿನ ತರಗತಿಗೆ ಹೋಗುತ್ತೀರಿ… ಖುಶಿನಾ? ಎಂದಾಗ ನನ್ನ ಮಕ್ಕಳು ಕಷ್ಟ ಪಟ್ಟು ಒಂದ್ಸಲ ಮುಗುಳ್ನಕ್ಕರಷ್ಟೇ. ಆ ನಗುವಿನ ಭಾವ ನನಗರ್ಥವಾಗಲಿಲ್ಲ…

ಆದರೆ ನನ್ನ ಬಾಲ್ಯ ಮತ್ತು ಶಿಕ್ಷಣ ಹಾಗೂ ಇಂದಿನ ಮಕ್ಕಳ ಬಾಲ್ಯ, ಶಿಕ್ಷಣದ ಬಗ್ಗೆ ಅದೆಷ್ಟು ವ್ಯತ್ಯಾಸ ಅನಿಸ್ತು.

ಚಿಕ್ಕವಳಿದ್ದಾಗ ಬರೀ ತರ್ಲೆ ನಾನು. ನಮ್ ಸರಕಾರಿ ಶಾಲೆ, ಅಲ್ಲಿನ ಶಿಕ್ಷಕರು, ವಾರದ ಶನಿವಾರ ಹಿಂದು ಮುಸ್ಲಿಂ, ಕ್ರೈಸ್ತ ಅನ್ನೋ ಬೇಧ ಇಲ್ಲದೆ ಮಾಡ್ತಾ ಇದ್ದ ಭಜನೆಗಳು.. ಓಹ್…. ನಮ್ ಕೋಗಿಲೆ ಎಲ್ಲಿ? ಅಂತ ನನ್ನ ಗಣಿತದ ಪ್ರೇಮ ಟೀಚರ್ ಕನ್ನಡದ ಗಣೇಶ್ ಮೇಷ್ಟ್ರು ಕೇಳಿದಾಗ, ನನಗೆ ಕಂಡೂ ಕಾಣದ ಹಾಗೆ ಸಣ್ಣಗೆ ಕೋಡು ಬರ್ತಿದ್ದದ್ದು ಸುಳ್ಳಲ್ಲ. ಭಜನೆ ಮಂಗಳಾರತಿ ಮಾಡಿದ ಮೇಲೆ ನಮ್ಮೆಲ್ಲರ ಹಣೆಯಲ್ಲೂ ಕೆಂಪಗಿನ ನಾಮ. ಹಿಂದು ಮುಸ್ಲಿಮ್ ಕ್ರೈಸ್ತ ಎಂಬ ಜಾತಿಯ ಹಂಗಿಲ್ಲದೆ ರಾರಾಜಿಸ್ತಾ ಇತ್ತು.
ಈಗ ಪ್ರಾರ್ಥನೆ, ಭಜನೆ ನಮಾಜ್ ಬಗ್ಗೆ ಮಾತೂ ಆಡುವ ಹಾಗಿಲ್ಲ!!

ಇನ್ನು ನನ್ನ ಶಿಕ್ಷಕರನ್ನು ನಾನು ತುಂಬಾ ಕಾಡಿಸಿದ್ದೆ. ಅವರು ಕೂಡ!
ಅವಾಗೆಲ್ಲ ಶಾಲೆಯಲ್ಲಿ ಬಿಸಿ ಊಟ ಇರ್ಲಿಲ್ಲ.ಅಮ್ಮ ಕಟ್ಟಿ ಕೊಡ್ತಾ ಇದ್ದ ಬುತ್ತಿ, ಅದರೊಳಗೆ ಗಂಜಿ ಚಟ್ನಿಯೋ, ಗಂಜಿ ಉಪ್ಪಿನಕಾಯಿಯೋ ಇರ್ತಿತ್ತು. ಅನ್ನದ ಮೇಲೆ ಅದೆಷ್ಟು ಪ್ರೀತಿ ಅಂದ್ರೆ ಒಂದು ಅಗುಳೂ ಚೆಲ್ಲದೇ ಊಟ ಮಾಡಿ ಬುತ್ತಿ ತೊಳೆಯಲು ಶಾಲೆಯಿಂದ ಕೊಂಚ ದೂರದಲ್ಲಿ ಹರಿದು ಹೋಗುತಿದ್ದ ಹೊಳೆಗೆ ಹೋಗುತಿದ್ವಿ. ನೀರಿಗಿಳಿದ ಮೇಲೆ ನಂಗೆ ಶಾಲೆ, ಟೀಚರು ಎಲ್ಲಾ ಮರ್ತು ಹೋಗ್ತಿತ್ತು. ನನ್ನ ಯುನಿಫಾರ್ಮ್ ಲಂಗದಲ್ಲಿ ಮೀನು ಅಂತ ಕಪ್ಪೆ ಮರಿಗಳನ್ನು ಹಿಡಿದದ್ದು, ಗಣಿತದ ಅವಧಿ ಮೀರಿ ತರಗತಿಗೆ ಬಂದಾಗ ಇಷ್ಟು ದೊಡ್ಡ ಕಣ್ಣು ಮಾಡಿ ಉದ್ದದ ಸಪೂರ ಕೋಲಿಂದ ಬೆನ್ನಿಗೆರಡು ಬಾರಿಸಿದ್ದು, ನಾ ಅಳ್ತಾ ಕೂತದ್ದು ಎಲ್ಲಾ ನೆನಪಾಗುತ್ತೆ. ಆದ್ರೆ ಮರುದಿನ ಮದ್ಯಾಹ್ನ ಮತ್ತೆ ಹೊಳೆಗೋದಾಗ ನನ್ನದು ಅದೇ ಬುದ್ಧಿ, ನಾನೂ ಬದಲಾಗ್ಲಿಲ್ಲ, ನನ್ನ ಟೀಚರೂ ಬದಲಾಗ್ಲಿಲ್ಲ.ಈವಾಗ ಶಿಕ್ಷಕಿಯಾಗಿ ಕೈಯಲ್ಲಿ ಕೋಲು ಹಿಡಿಯೋದಿರಲಿ, ನಾ ನನ್ನ ಮಕ್ಕಳನ್ನು ಜೋರಾಗಿ ಗದರಿಸುವ ಹಾಗೂ ಇಲ್ಲ ಅನ್ನೋದು ವಿಷಾದನೀಯ. ನಾಳೆ ಅದಕ್ಕೆ ಇನ್ಯಾವ ರೆಕ್ಕೆ ಪುಕ್ಕ ಹಚ್ಚಿಕೊಳ್ತದೋ ಅಂತ ಉಸಿರುಗಟ್ಟಿ ಸುಮ್ಮನಾಗ್ತೇನೆ.

ನಾನು ನನ್ ಫ್ರೆಂಡ್ಸು ಅಂತ ಸುಮಾರ್ 10ಜನ ಒಟ್ಟಿಗೆ ಗುಂಪಾಗಿ ಕಾಲು ನಡಿಗೆಯಲ್ಲೇ ಶಾಲೆಗೆ ಹೋಗ್ತಿದ್ವಿ. ದಾರಿಯಲ್ಲಿ ಸಿಗುವ ಕುಂಟಲ ಹಣ್ಣು, ನೇರಳೆ ಹಣ್ಣು, ಚೂರಿ ಕಾಯಿ ಇವನ್ನೆಲ್ಲ ಕೊಯ್ಕೊಂಡು ಶಾಲೆ ತಲುಪುವಾಗ, ಪ್ರಾರ್ಥನೆಗೆ ಕೆಲವೇ ಕೆಲವು ನಿಮಿಷಗಳು ಬಾಕಿ ಇರ್ತಿತ್ತು. ನನ್ ಮಗನೂ ಇದ್ದಾನೆ, ನಾ ಶಾಲೆಗೆ ಹೋಗ್ಬೇಕು ಅನ್ನೋ ಧಾವಂತದಲ್ಲಿ ಮಗನನ್ನು ಬೆಳಿಗ್ಗೆ 6ಗಂಟೆಗೆಲ್ಲಾ ಎಬ್ಬಿಸಿ, ಅವಸರವಸರವಾಗಿ ಸ್ನಾನ ಮಾಡ್ಸಿ,ತಿಂಡಿ ತಿನ್ನಿಸಿ, ಸ್ಕೂಲ್ ವ್ಯಾನ್ ಗೆ ತಳ್ಳಿ ಬಿಡುವಷ್ಟರಲ್ಲಿ ಗಡಿಯಾರದ ಮುಳ್ಳುಗಳು ನಾಗಾಲೋಟದಲ್ಲಿ ಓಡಿ ಬಿಡ್ತವೆ.ಶಾಲೆಗೆ ನಡೆಯುವುದಿರಲಿ ಅಂಗಳಕ್ಕೆ ಇಳಿಯುವಾಗಲೂ ನೂರು ಸಲ ಯೋಚನೆ ಮಾಡುವ ನನ್ನಂತ ಅಮ್ಮನವರು ಇರುವಾಗ, ಕಾಡು, ಮರ, ಹಣ್ಣುಗಳು ಇವನ್ನೆಲ್ಲ ನೋಡುವ, ಅನುಭವಿಸುವ ಜೀವಂತ ಕ್ಷಣಗಳು ಈ ಮಕ್ಕಳ ಪಾಲಿಗೆ ಸಿಗುತ್ತಾ ಅನ್ನೋದು ಪ್ರಶ್ನೆ.

ನಾನು ಶಾಲೆಗೆ ಹೋಗುವ ದಾರಿಯಲ್ಲಿ ನಮ್ಮ ಬಾಬಣ್ಣ ನ ಅಂಗಡಿ ಸಿಗ್ತಿತ್ತು. ಅಪ್ಪ ವಾರದಲ್ಲಿ ಎರಡು ಬಾರಿ 50ಪೈಸೆ ನಾಣ್ಯವೋ, ಒಂದು ರೂಪಾಯಿ ನಾಣ್ಯವೋ ಕೈಗಿಡ್ತಾ ಇದ್ರು, ಕಡ್ಲೆನೋ, ಚಾಕ್ಲೆಟೋ ತಗೋ ಅಂತ. ಅವಾಗೆಲ್ಲ ನಂಗೆ ಸಖತ್ ಹಬ್ಬ. ಕಾರಣ… ಕಡ್ಲೆ ಮಿಠಾಯಿಗಲ್ಲ, ಹಳೇ ಬಾಲ ಮಂಗಳ, ಚಂಪಕ ಪುಸ್ತಕ ನನ್ ಕೈಗೆ ಸಿಗ್ತಾ ಇದ್ದ ಖುಷಿ ಅದು!! ಗೂಡಂಗಡಿ ಬಾಬಣ್ಣ ಮಾರಾಟವಾಗದೆ ಉಳಿದ ಬಾಲ ಮಂಗಳ, ಚಂಪಕ, ಚಂದಮಾಮ ಇಂತಹ ಕತೆ ಪುಸ್ತಕಗಳನ್ನು 1ರುಪಾಯಿಗೆ ನನ್ಗೆ ಕೊಡ್ತಿದ್ರು. ಅವಾಗ ಆ ಪುಸ್ತಕಗಳ ನಿಜವಾದ ಬೆಲೆ ಇದ್ದದ್ದು 3.50 ಪೈಸೆ.
ಬಾಲಮಂಗಳದ ಕತೆಗಳನ್ನು ಓದುತ್ತಾ ನನ್ನಲ್ಲಿ ಓದುವ ಹುಚ್ಚು ಬೆಳೆಯಿತು.puc ಮುಗಿಯುವಷ್ಟರಲ್ಲಿ ನಮ್ಮೂರಿನ ಲೈಬ್ರರಿಯಲ್ಲಿದ್ದ ಅಷ್ಟೂ ಕತೆ ಪುಸ್ತಕಗಳು, ಕಾದಂಬರಿಗಳನ್ನು ಓದಿ ಮುಗಿಸಿದ್ದೆ.ಕ್ರಮೇಣ ಬರೆಯುವ ಗೀಳು ಅಂಟಿಕೊಂಡು ಬಿಟ್ಟಿತು.

ನನ್ ಶಾಲೆಯಲ್ಲೂ ಲೈಬ್ರರಿ ಇದೆ. ಪುಟ್ಟ ಮಕ್ಕಳ ಕತೆಯಿಂದ ಎಲ್ಲರೂ ಓದುವಂತಹ ಪುಸ್ತಕಗಳೂ ಇವೆ.ನನ್ ಮಕ್ಕಳು ಸುಮ್ಮನೆ ಪುಟ ತಿರುಗಿಸುತ್ತಾರೆ… ಟೀಚರ್ ಬೈತಾರೆ ಅಂತಾನೋ ಅಥವಾ ಲೈಬ್ರರಿ ಅವಧಿ ಮುಗಿಸುವುದಕ್ಕೋ ಗೊತ್ತಿಲ್ಲ, ಆದರೆ ನಿಜವಾಗಿಯೂ ಪುಸ್ತಕಗಳನ್ನು ಓದಲು ಹಂಬಲಿಸುವ ಮಗು ನನಗೆ ಕಾಣಲಿಲ್ಲ… ಓದು… ಬರಿಯ ಅಂಕಗಳಿಗೆ ಸೀಮಿತ!!

ಇನ್ನು ಅದೇ ಆ ವ್ಯಕ್ತಿ ಕೇಳಿದ್ರಲ್ಲಾ, ಟೀಚರ್… ಪಾಸು ಫೇಲು ಯಾವಾಗ? ಅಂತ!!ಆ ವಿಷ್ಯಕ್ಕೆ ಬರ್ತೀನಿ.

ನಿಮಗೆಲ್ಲ ಗೊತ್ತು, ಏಪ್ರಿಲ್ 10 ಕ್ಕೆ ನಾವೆಲ್ಲ ಯಾವ ತರ ಕಾಯ್ತ ಇದ್ದೆವು ಅಂತ… ಅವರೆಗೂ ಚೆನ್ನಾಗಿದ್ದ ಪ್ರಕೃತಿಯಲ್ಲೂ ಒಂತರ ಭೀಕರ ಮೌನ ಆವರಿಸಿದ ಹಾಗೆ,…. ಸೂರ್ಯ ಗ್ರಹಣ ಬಂದು ಭೂಮಿಗೆ ಮಂಕು ಕವಿದಿದೆಯೇನೋ ಎಂಬಂತೆ ಭಾಸವಾಗುತ್ತಿತ್ತು. ಅದೆಷ್ಟು ಚೆನ್ನಾಗಿ ಪರೀಕ್ಷೆ ಬರೆದಿದ್ದರೂ ಭಯ ಗಾಬರಿಯಿಂದ ಮೈ ಎಲ್ಲಾ ಬೆವೆತು ಹೋಗ್ತಿತ್ತು. ಆಸೆ, ಕುತೂಹಲ, ಭಯ, ಕನಸು ಎಲ್ಲಾ ಭಾವನೆಗಳೂ ಸಮ್ಮಿಶ್ರಣಗೊಂಡು ನಡುಗುವ ಕಾಲುಗಳನ್ನು ಎಳೆದುಕೊಂಡು ತರಗತಿಗೆ ಹೋದರೆ ಅಬ್ಬಾ….ಯಾವತ್ತೂ ನಗ್ತಾ ಇದ್ದ ನನ್ ತರಗತಿ ಟೀಚರ್ ಮುಖನೂ ಅವತ್ತು ಭಯಂಕರ ಗಾಂಭಿರ್ಯ….ಮಾತಿಲ್ಲ, ಕತೆ ಇಲ್ಲ. ತಾನು ಕೂತಿದ್ದ ಕುರ್ಚಿಯಿಂದ ಎದ್ದು ನಿಂತು ಫಲಿತಾಂಶ ಪಟ್ಟಿ ಓದುತಿದ್ದರೆ…. ಅಬ್ಬಾ ನನ್ ಹೆಸರು ಬರೋವರೆಗೂ ಹೃದಯಕ್ಕೆ ಆಘಾತವಾದ ಹಾಗೆ ಅನುಭವ. ಕಡೆಗೂ ನನ್ನ ಸರದಿ ಬಂದು ಪ್ರಮೀಳಾ ಉತ್ತೀರ್ಣ ಎಂದ ಕ್ಷಣದಲ್ಲಿ ಆವರೆಗೂ ಎದೆ ಮೇಲೆ ಯಾರೋ ನಿಂತ ಹಾಗೆ ಉಸಿರುಗಟ್ಟುತಿತ್ತಲ್ಲಾ, ಅದೆಲ್ಲಾ ಮಾಯವಾಗಿ ನನ್ ಕಾಲಿಗೆ ಚಕ್ರ ಬಂದ ಹಾಗನಿಸಿ,ಒಂದೇ ಉಸಿರಿಗೆ ಮನೆಗೆ ಓಡಿ ಬಂದು, ಅಪ್ಪ ಅಮ್ಮನ ಜೊತೆ ವಿಷಯ ಹಂಚಿಕೊಳ್ಳುವವರೆಗೂ ಸಮಾಧಾನ ಇಲ್ಲ. ಅಪ್ಪ, ಅಮ್ಮ ಕೊಡ್ತಾ ಇದ್ದ 10,20ರೂಪಾಯಿಗಳು ಈಗಿನ ಲಕ್ಷ ಕ್ಕೆ ಸಮವೆಂದೆನಿಸುತ್ತದೆ…ಅದನ್ನು ಹಿಡ್ಕೊಂಡು ಅಂಗಡಿಗೆ ಹೋಗಿ ಕೈ ತುಂಬಾ ಚಾಕ್ಲೆಟ್ ತಗೊಂಡು ಮನೆ ಮನೆಗೆ ಹೋಗಿ ನಾ ಪಾಸ್ ಆದೆ, ಚಾಕ್ಲೆಟ್ ತಗೊಳ್ಳಿ ಅಂತ ಖುಷಿಯಿಂದ ಊರಿಗೆಲ್ಲ ಹಂಚಿ ಬರ್ತಾ ಇದ್ದದ್ದು ಜೀವನದ ಅತ್ಯಾನಂದಕರ ಕ್ಷಣಗಳು.
ನನ್ ಮಕ್ಕಳ ಫಲಿತಾಂಶನೂ ಹೇಳಿದೆ…. ಟೀಚರ್ ನಾ ಪಾಸ್ ಅಂತ ಒಂದು ಚಾಕ್ಲೆಟೂ ಸಿಗಲಿಲ್ಲ, ಖುಷಿಯ ನಗು ಕೂಡ ಕಾಣಲಿಲ್ಲ. ಕಂಡದ್ದು, ಸದ್ಯ ಇನ್ನೊಂದು ತಿಂಗಳು ಶಾಲೆ ಶಿಕ್ಷಕರು, ಪಾಠ ದ ಕಾಟ ಇಲ್ಲದೆ ಹಾಯಾಗಿ ಆಟ ಆಡ್ಕೊಂಡು ಇರಬಹುದು ಎಂಬುದಷ್ಟೇ….!!

ಕಾಲ ಬದಲಾಯಿತೋ ಅಥವಾ ಜನರು ಬದಲಾದರೋ ಗೊತ್ತಾಗ್ತಿಲ್ಲ. ಟೀಚರ್ ರಜೆ ಸಿಕ್ಕಿತಲ್ವಾ, ನೀವು ಯಾವಾಗ ಊರಿಗೆ ಹೋಗುವುದು? ನಿಮ್ಮ ಚಾನ್ಸು, ರಜೆಯಲ್ಲಿ
. ಊರಲ್ಲಿ ಕುಳಿತರೂ ಸಂಬಳ ಬರುತ್ತದೆ ..ಎಂದು ಕರುಬುವವರ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರ ಇಲ್ಲ…ಕಾರಣ ಇಷ್ಟೇ, ನಮ್ಮ ತಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಹೇಗೆ, ಮುಂದಿನ ವರ್ಷದ ಕಲಿಕಾ ಚೇತರಿಕೆ ಕಾರ್ಯಕ್ರಮ ಅನುಷ್ಟಾನ ಹೇಗೆ? ಮುಂದಿನ ಸಾಲಿನಲ್ಲಿ ಮಕ್ಕಳ ಸಂಖ್ಯೆ , ಹಾಜರಾತಿ ಹೆಚ್ಚಿಸುವುದು ಹೇಗೆ, ಬಂದ ಅಕ್ಕಿ, ಬೆಲೆಯನ್ನು ಸುರಕ್ಷಿತವಾಗಿ ಶಾಲೆಯಲ್ಲಿ ಇಡುವುದು ಹೇಗೆ, ಈ ವರ್ಷದ ಬಿಸಿ ಊಟದ, ಹಾಲಿನ ಲೆಕ್ಕಾಚಾರ ಹೇಗೆ, ಬರುವ ವರ್ಷಕ್ಕೆ ಯೂನಿಫಾರ್ಮ್, ಪಠ್ಯ ಪುಸ್ತಕಕ್ಕೆ ಎಷ್ಟು ಬೇಡಿಕೆ ಪಟ್ಟಿ ಕೊಡಬೇಕು, ಅಕ್ಕಿ ಬೇಳೆ ಮಕ್ಕಳಿಗೆ ವಿತರಿಸುವ ಕ್ರಮ ಹೇಗೆ, ಅಕ್ಷರ ಬರದ ಮಕ್ಕಳನ್ನು ಕಡ್ಡಾಯ ಶಿಕ್ಷಣದ ಅಡಿಯಲ್ಲಿ ಎಷ್ಟು ಸಲ ಮರು ಪರೀಕ್ಷೆ ಬರೆಯಿಸಿ ಉತ್ತೀರ್ಣಗೊಳಿಸುವುದು…. ಇದೇ ನಮ್ಮ ತಲೆಯಲ್ಲಿ 24 ಗಂಟೆ ಲೆಕ್ಕಾಚಾರ.ಇದರ ನಡುವೆ ಪ್ರಶ್ನೆ ಕೇಳುವ ಜನರ ಪ್ರಶ್ನೆಗಳಿಗೆ ಉತ್ತರ ಕೊಡುವಷ್ಟು ತಾಳ್ಮೆ ನನ್ನಲಿ ಉಳಿದಿಲ್ಲ.ಬದಲಾವಣೆ ಕೆಲವೊಮ್ಮೆ ನಮಗೆ ಕಷ್ಟ ಅನ್ನಿಸುತ್ತದೆ. ಏನು ಮಾಡುವುದು? ನಾವು ನಿಂತ ನೀರಾಗಲು ಸಾಧ್ಯವಿಲ್ಲ. ತೇಲಿಕೊಂಡೋ ಮುಳುಗಿಕೊಂಡೋ ಹೇಗಾದರೂ ಬದುಕಿನ ದಡ ಸೇರಲು ಮುಂದೆ ಸಾಗಲೇ ಬೇಕಲ್ಲವೇ?

*ಭಾವಯಾನಿ ಪ್ರಮೀಳಾ ರಾಜ್*

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here