Wednesday, April 17, 2024

ಬಿಜೆಪಿಯ ಕಾರ್ಯಕರ್ತರು ಇಡೀ ರಾಜ್ಯಕ್ಕೆ ಸ್ಪೂರ್ತಿ : ಸಿ.ಎಂ.ಬೊಮ್ಮಾಯಿ

ಬಂಟ್ವಾಳ: ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲವಾದ ಅವಕಾಶವಿದ್ದರೂ ಗೋವಾ ಮತ್ತು ಕೇರಳಕ್ಕೆ ಸಿಕ್ಕಿರುವ ಮಹತ್ವ ನಮಗೆ ಸಿಕ್ಕಿಲ್ಲ. ಆದರೂ ಈ ಭಾಗದ ಅಭಿವೃದ್ದಿಗೆ ನಾವು ಪಣ ತೊಟ್ಟಿದ್ದೇವೆ. ಪ್ರವಾಸೋದ್ಯಮ ಅಭಿವೃದ್ದಿಯಾದರೆ ಉದ್ಯೋಗವಕಾಶಗಳು ಹೆಚ್ಚಾಗಲಿದ್ದು ಕರವಾಳಿಯ ಸಮಗ್ರ ಅಭಿವೃದ್ದಿಗೆ ಪ್ರಯತ್ನಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.


ಬುಧವಾರ ಬಂಟವಾಳದ ಬಂಟರ ಭವನದಲ್ಲಿ ನಡೆದ ದ.ಕ.ಜಿಲ್ಲಾ ಮಟ್ಟದ ಪ್ರಮುಖ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಂಗಳೂರು ಹಾಗೂ ಕಾರವಾರ ಬಂದರಿನ ವಿಸ್ತರಣೆಗೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದ್ದು ಕೇಂದ್ರ ಸರ್ಕಾರ ಈ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಮುಂದಿನ ದಿನಗಳಲ್ಲಿ ಎರಡೂ ಬಂದರುಗಳ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ೮ ಮೀನುಗಾರಿಕಾ ಬಂದರುಗಳ ಡ್ರೆಜ್ಜಿಂಗನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು ಹೆಚ್ಚಿನ ದೋಣಿಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು. ಸಾಮಾನ್ಯ ಮೀನುಗಾರರಿಗೂ ಕೂಡ ಆಳ ಮೀನುಗಾರಿಕೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ೧೦೦ ಸ್ಪೀಡ್ ಬೋಟ್‌ಗಳನ್ನು ಸಬ್ಸಿಡಿ ದರದಲ್ಲಿ ನೀಡಿ ಮೀನುಗಾರಿಕೆಗೆ ಪ್ರೋತ್ಸಾಹ ನೀಡಲಾಗುವುದು. ಕರಾವಳಿ ಭಾಗದ ದೊಡ್ಡ ವೃತ್ತಿಯಾದ ಮೀನುಗಾರಿಕೆಗೆ ಸಹಾಯ ಮಾಡುವುದು ಸರಕಾರದ ಕರ್ತವ್ಯ ಎಂದರು.
ಟೆಂಪಲ್ ಟೂರಿಸಂಗೂ ಅವಕಾಶ
ಈ ಭಾಗದಲ್ಲಿ ಟೆಂಪಲ್ ಟೂರಿಸಂಗೂ ಅವಕಾಶವಿರುವ ದೆಸೆಯಲ್ಲಿ ಯೋಜನ ಬದ್ದವಾಗಿ ರೂಪಿಸಲು ಸರಕಾರ ತೀರ್ಮಾನಿಸಿದೆ, ಜಿಲ್ಲೆಗೊಂದು ಕೈಗಾರಿಕಾ ಪಾರ್ಕ್ ಮಾಡುವ ಬಗ್ಗೆ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ಕಾನ,ಬಾನ, ಕುಮ್ಕಿ, ಡೀಮ್ಡ್ ಫಾರೆಸ್ಟ್, ಅಕ್ರಮ ಸಕ್ರಮ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು. ಬಿಜೆಪಿ ದೇಶದಲ್ಲಿ ಅತೀ ಹೆಚ್ಚು ಜನಪ್ರತಿನಿಧಿಗಳನ್ನು ಹೊಂದಿರುವ ಪಕ್ಷ. ಅತೀ ಹೆಚ್ಚು ಜನಮನ್ನಣೆ ಪಡೆದಿರುವ ಪಕ್ಷ. ವಿಶ್ವದಲ್ಲಿ ಅತೀ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಬಿಜೆಪಿ ಚೈನಾದ ಕಮ್ಯೂನಿಷ್ಟ್ ಪಕ್ಷವನ್ನು ಮೀರಿ ಬೆಳೆದಿದೆ. ಪಕ್ಷದ ಆಧಾರ ಸ್ತಂಭವಾಗಿರುವ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸಿ ಕೆಲಸ ಮಾಡುವ ಅವಶ್ಯಕತೆ ಇದೆ. ಜನರ ಧ್ವನಿಯಾಗಿ ಕಾರ್ಯಕರ್ತರು ಕೆಲಸ ಮಾಡಬೇಕಾಗಿದೆ ಎಂದರು.

ಕಾಂಗ್ರೆಸ್ ಪ್ರತೀ ದಿನ ಕ್ಷೀಣಿಸುತ್ತಿದೆ. ಕಾಂಗ್ರೆಸ್‌ನ ನಾಯಕರುಗಳು ಮಾತನಾಡುವ ರೀತಿ ನೋಡಿದರೆ ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕಾಂಗ್ರೆಸ್‌ಗೆ ಶೋಭೆ ತರುವಂತದ್ದಲ್ಲ. ಜನ ಬಹಳ ಸೂಕ್ಷವಾಗಿ ಇವುಗಳನ್ನು ನೋಡುತ್ತಿದ್ದಾರೆ. ಬಿಜೆಪಿಯ ಕಾರ್ಯಕರ್ತರಿಗಿರುವ ಗೌರವ ಕಾಂಗ್ರೆಸ್‌ನ ನಾಯಕರಿಗಿಲ್ಲ. ಈ ಗೌರವ ಇಂದು ನಿನ್ನಯದಲ್ಲ. ಇದು ಅವಿರತ ಪರಿಶ್ರದಿಂದ ಸಂಪಾದಿಸಿದ್ದು. ಸರಕಾರ ಹಾಗೂ ಪಕ್ಷ ಒಂದು ರಥದ ಎರಡು ಗಾಲಿಗಳಂತಿದ್ದು ಎಲ್ಲರೂ ಜೊತೆ ಸೇರಿ ನವಕರ್ನಾಟಕ ನಿರ್ಮಾಣದ ರಥವನ್ನು ಎಳೆಯಲಿದ್ದೇವೆ ಎಂದ ಅವರು ಕರಾವಳಿ ಭಾಗದ ಬಿಜೆಪಿಯ ಕಾರ್ಯಕರ್ತರು ಇಡೀ ರಾಜ್ಯಕ್ಕೆ ಸ್ಪೂರ್ತಿ ಎಂದರು.
ಮಾಜಿ ಕೇಂದ್ರ ಸಚಿವ, ಸಂಸದ ಡಿ.ವಿ.ಸದಾನಂದ ಗೌಡ ಅವರು ಮಾತನಾಡಿ ಸರಕಾರ ಹಾಗೂ ಜನಪ್ರತಿನಿಧಿಗಳು ಮಾಡಿರುವ ಕಾರ್ಯ ಮತ್ತು ಸಾಧನೆಯನ್ನು ಸಾಮಾನ್ಯರಿಗೆ ತಲುಪಿಸುವ ಕೆಲಸ ಬೂತ್ ಮಟ್ಟದ ಕಾರ್ಯಕರ್ತರಿಂದ ಆಗಬೇಕಿದೆ ಎಂದರು.
ಅಭಿವೃದ್ಧಿಯಷ್ಟೆ, ಭಾವನಾತ್ಮಕ ವಿಚಾರಗಳು ನಮ್ಮ ಸಂಘಟನೆಗೆ ಪೂರಕವಾಗಿರುವಂತೆ ಮತ್ತು ಸಂಘಟನೆಯಲ್ಲಿ ವ್ಯತ್ಯಾಸವಾಗದಂತೆ ಪಕ್ಷದ ಕಾರ್ಯಕರ್ತರು ನೋಡಿಕೊಳ್ಳಬೇಕು ಎಂದ ಅವರು ಮುಂದಿನ ಎಲ್ಲಾ ದಿನಗಳನ್ನು ಚುನಾವಣೆಯ ದಿನವನ್ನಾಗಿಸೋಣ ಎಂದರು.
ವಿರೋಧಿಗಳೇ ನಮ್ಮ ಅಸ್ತ್ರ ಗಳಾಗಬೇಕೇ ವಿನಃ ವಿರೋಧಿಗಳ ಕೈಗೆ ಅಸ್ತ್ರ ಕೊಡುವ ಕೆಲಸ ಆಗಬಾರದು, ಉಳ್ಳಾಲ ಕ್ಷೇತ್ರವೂ ಸೇರಿ ದಂತೆ ದ.ಕ.ಜಿಲ್ಲೆಯ ೮ ಕ್ಷೇತ್ರಗಳು ಬಿಜೆಪಿಯ ಪಾಲಾಗುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದರು.

ರಾಜ್ಯ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಸಚಿವ ಶ್ರೀ ರಾಮುಲು ಮಾತನಾಡಿ, ಕರಾವಳಿ ಜಿಲ್ಲೆ ಬಿಜೆಪಿ ಪಾಲಿಗೆ ದೇವರ ಕೋಣೆ ಇದ್ದ ಹಾಗೆ, ಮಂಗಳೂರು ಜಿಲ್ಲೆಯ ಕಾರ್ಯಕರ್ತರು ಮನಸ್ಸು ಮಾಡಿದರೆ ಶ್ರೀಸುಬ್ರಹ್ಮಣ್ಯ ಸ್ವಾಮಿಯ ಈ ನಾಡಿನಲ್ಲಿ ಬಿಜೆಪಿಯ ವಿಜಯ ಪತಾಕೆ ಹಾರಲು ಪ್ರೇರಣೆ ಸಿಗಲಿದ್ದು, ಇದು ಪಕ್ಷದ ಶಕ್ತಿ ಕೇಂದ್ರ ಎಂದರು. ಬಿಜೆಪಿಯನ್ನು ಕಿತ್ತೆಸೆಯಬೇಕು ಎನ್ನುತ್ತಿದ್ದಾರಲ್ಲ ಬಿಜೆಪಿ ಎಂದರೆ ಕೊತ್ತಂಬರಿ ಸೊಪ್ಪಾ? ಎಂದು ಪ್ರಶ್ನಿಸಿದ ಸಚಿವ ಶ್ರೀರಾಮುಲು, ಬಿಜೆಪಿ ಎಲ್ಲರಿಗೂ ಆಶ್ರಯ ನೀಡಿದ ಆಲದ ಮರವಾಗಿದೆ. ಕಾಂಗ್ರೇಸ್‌ನಲ್ಲಿ ಸಿದ್ದರಾಮಯ್ಯ ಕಳೆದುಹೋದ ಕೂಸು ಆಗಿದ್ದು ಬಿಜೆಪಿ ವಿರುದ್ದ ಆರೋಪಿಸುವ ಯಾವ ನೈತಿಕತೆಯೂ ಅವರು ಉಳಿಸಿಕೊಂಡಿಲ್ಲ ಎಂದರು.
ಕರಾವಳಿ ಜನರ ಆಶೋತ್ತರಗಳಿಗೆ ಮುಖ್ಯಮಂತ್ರಿಯವರು ಸ್ಪಂದಿಸಿದ್ದಾರೆ, ಕರಾವಳಿ ಮೀನುಗಾರರ ಆರ್ಥಿಕ ಅಭಿವೃದ್ಧಿಗೆ ಮುಖ್ಯಮಂತ್ರಿಯವರು ಹೊಸ, ಹೊಸ ಯೋಜನೆಗಳನ್ನು ನೀಡಿದ್ದಾರೆ ಎಂದ ಅವರು ಮುಂದಿನ ೨೦೨೩ ರ ಚುನಾವಣೆಯಲ್ಲಿ ಬಿಜೆಪಿ ೧೫೦ ಸ್ಥಾನಗಳಲ್ಲಿ ಜಯಭೇರಿ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್ ಮಾತನಾಡಿ ಕಾರ್ಯಕರ್ತರು ಬೂತ್ ಚಟುವಟಿಕೆಗಳನ್ನು ಕ್ರಿಯಾಶೀಲವಾಗಿಸಬೇಕೆನ್ನುವ ನಿಟ್ಟಿನಲ್ಲಿ ರಾಜ್ಯ ವ್ಯಾಪ್ತಿಯಲ್ಲಿ ಮೂರು ತಂಡಗಳಲ್ಲಿ ಪ್ರವಾಸ ನಡೆಸಲಾಗುತ್ತಿದೆ. ಕರಾವಳಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಗೆದ್ದ ಬಳಿಕ ಜಿಲ್ಲೆಯಲ್ಲಿ ದೊಡ್ಡ ಮಟ್ಟಿನ ಅಭಿವೃದ್ಧಿ ಆಗಿದೆ ಎಂದರು.
ಮುಂದಿನ ಚುನಾವಣೆ ಅಭಿವೃದ್ಧಿ ಮತ್ತು ಹಿಂದುತ್ವದ ಆಧಾರದ ಮೇಲೆಯೇ ನಡೆಯಲಿದೆ. ಕಾಂಗ್ರೇಸ್ ಮತ್ತೆ ಅಧಿಕಾರಕ್ಕೆ ಬಂದರೆ ಕರಾವಳಿಯನ್ನೇ ಟಾರ್ಗೆಟ್ ರಾಜಕಾರಣ ಮಾಡುವ ಅಪಾಯವಿದೆ ಎಂದರು. ಬೂತ್ ಮಟ್ಟದಲ್ಲಿ ಮುಂದಿನ ಒಂದು ವರ್ಷಗಳ ಕಾಲ ಕಾರ್ಯಕರ್ತರು ಹೊಸ ಬೇಡಿಕೆಯನ್ನು ಮುಂದಿಡದೆ, ಕಳೆದ ಮೂರು ವರ್ಷದಲ್ಲಿ ಬಿಜೆಪಿ ಸರ್ಕಾರದ ಕಾರ್ಯವನ್ನು ಎಲ್ಲರಿಗೂ ನೆನಪಿಸಬೇಕು, ಅದಕ್ಕಾಗಿ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂದ ಅವರು
ಮತದಾರರ ಪಟ್ಟಿಯ ಅಧ್ಯಯನ, ಸ್ಥಳೀಯ ಜನಪ್ರತಿನಿಧಿಗಳನ್ನು ಸಕ್ರೀಯ ಗೊಳಿಸುವ ಕೆಲಸ ಆಗಬೇಕು ಎಂದರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅವರು ಮಾತನಾಡಿ, ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಬಳಿಕ ಆಗಿರುವ ಅಭಿವೃದ್ದಿ ಕಾರ್ಯಗಳನ್ನು ಕಂಡು ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ.
ಕರಾವಳಿ ಜಿಲ್ಲೆಯ ಮೀನುಗಾರರು ಸಹಿತ ಎಲ್ಲಾ ಕ್ಷೇತ್ರದ ಅಭಿವೃದ್ದಿಯ ದೃಷ್ಠಿಯಿಂದ ಸಿಎಂ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರ ವಿಶೇಷವಾದ ಪ್ರಯತ್ನ ಮಾಡಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಸಂಘಟನೆಗೆ ಶಕ್ತಿಯನ್ನು ತುಂಬಿದ ದ.ಕ.ಜಿಲ್ಲೆಯಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ಎದುರಾದರೂ ಅದನ್ನು ಎದುರಿಸಲು ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದರು.
ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವಥ ನಾರಾಯಣ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಣ ಸವದಿ, ನಿರ್ಮಲ್ ಕುಮಾರ್ ಸುರಾನ, ರಾಜ್ಯ ಕಾರ್ಯದರ್ಶಿಗಳಾದ ವಿನಯ್ ಬಿದರೆ, ನಯನ ಗಣೇಶ್,ಶಾಸಕರಾದ ಸಂಜೀವ ಮಠಂದೂರು, ಉಮನಾಥ ಕೋಟ್ಯಾನ್, ಹರೀಶ್ ಪೂಂಜ, ಡಾ.ವೈ.ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಸಹಪ್ರಭಾರಿಗಳಾದ ಭಾರತೀಶ್, ರಾಜೇಶ್ ಕಾವೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು ಸ್ವಾಗತಿಸಿದರು. ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ ವಂದಿಸಿದರು. ದ.ಕ.ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

—————–

More from the blog

ಬಂಟ್ವಾಳ: ಕರ್ಪೆ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕಸಭಾ ಚುನಾವಣೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಬಹುಮತದಿಂದ ಗೆಲ್ಲಿಸಿಕೊಡುವಂತೆ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ" ಕಾರ್ಯಕ್ರಮದ ಮೂಲಕ ಬಂಟ್ವಾಳದ...

ಕುಡಿದ ಮತ್ತಿನಲ್ಲಿ ರೈಲ್ವೆ ಗೇಟ್ ಗೆ ಡಿಕ್ಕಿ ಹೊಡೆದು ಆವಾಂತರ ಸೃಷ್ಟಿಸಿದ ಮನೋರೋಗ ತಜ್ಞ

ಮಂಗಳೂರಿನ ಹೆಸರಾಂತ ಮನೋರೋಗ ತಜ್ಞರೊಬ್ಬರು ಕುಡಿದ ಮತ್ತಿನಲ್ಲಿ ರೈಲ್ವೆ ಗೇಟ್ ಗೆ ಡಿಕ್ಕಿ ಹೊಡೆದು ಆವಾಂತರ ಸೃಷ್ಟಿಸಿದ ಘಟನೆ ನಗರ ಹೊರ ವಲಯದ ಪರಂಗಿಪೇಟೆ ಬಳಿಯ ಅರ್ಕುಳ ಎಂಬಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಕುಡಿದ...

ಅಯೋಧ್ಯೆಯಲ್ಲಿ ಅದ್ಧೂರಿ ರಾಮನವಮಿ ; ರಾಮಲಲ್ಲಾ ಹಣೆ ಮೇಲೆ ಸೂರ್ಯ ತಿಲಕ

ಅಯೋಧ್ಯೆ: ಬರೋಬ್ಬರಿ 500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ಮೊದಲ ಶ್ರೀರಾಮನವಮಿಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಮೊದಲ ರಾಮನವಮಿಯಂದು ರಾಮಲಲ್ಲಾನಿಗೆ ಸೂರ್ಯನ ತಿಲಕ ಸ್ಪರ್ಶಿಸಿದ್ದು, ಸೂರ್ಯವಂಶಸ್ಥನಿಗೆ ಸೂರ್ಯನ ಅಭಿಷೇಕ ನೆರವೇರಿಸಲಾಗಿದೆ. ರಾಮನವಮಿ ಅಂಗವಾಗಿ ಮಧ್ಯಾಹ್ನ 12 ಗಂಟೆಗೆ...

ಪುಣಚ: ಸೇತುವೆ ಕುಸಿತ ಪ್ರಕರಣ : ಗುತ್ತಿಗೆದಾರರ ವಿರುದ್ದ ಪ್ರಕರಣ

ವಿಟ್ಲ: ವಿಟ್ಲದ ಪುಣಚ ಗ್ರಾಮದ ಬರೆಂಜಾ - ಕುರುಡಕಟ್ಟೆ ಸಂಪರ್ಕ ರಸ್ತೆಯ ಮಲ್ಲಿಪ್ಪಾಡಿಯಲ್ಲಿ ನಿರ್ಮಾಣ ಹಂತದಲ್ಲಿ ಸೇತುವೆ ಕುಸಿದುಬಿದ್ದ ಅವಘಡದಲ್ಲಿ ಗಾಯಗೊಂಡ ಏಳು ಮಂದಿ ಕಾರ್ಮಿಕರು ಆಸ್ಪತ್ರೆಗಳಲ್ಲಿ ಚೇತರಿಸುತ್ತಿದ್ದಾರೆ. ಇನ್ನೊಂದೆಡೆ ಈ ಪ್ರಕರಣಕ್ಕೆ...