*ಅದ್ಯಾಕೆ ಹಾಗೆ ಯಾವಾಗ್ಲೂ ಅಳುಮುಂಜಿ ತರ ಮುಖ ಬಾಡಿಸ್ಕೊಂಡಿರ್ತಿ,ಸ್ವಲ್ಪ ನಕ್ಕುಬಿಟ್ರೆ ನಿಮ್ಮಜ್ಜಿ ಬಚ್ಚಿಟ್ಟ ಗಂಟೇನಾದರೂ ಕಳೆದೋಗ್ತದ …??*

ಬಹುಷಃ ಕನ್ನಡಿಗೆ ಮಾತು ಬರುತಿದ್ದರೆ ನನ್ನ ಹೀಗೇ ಜಾಡಿಸ್ತಾ ಇತ್ತೋ ಏನೋ.
ಈಗೀಗ ಕನ್ನಡಿ ನೋಡೋದನ್ನೇ ಮರ್ತು ಬಿಟ್ಟಿದೀನಿ.
ಚಿಕ್ಕವಳಿದ್ದಾಗ ನನ್ ಮೋಟು ಜಡೆ ಬಾಚಲಿಕ್ಕೆ ಅಂಗೈ ಅಗಲದ ಕನ್ನಡಿ ಮುಂದೆ ಗಂಟೆ ಗಟ್ಟಲೆ ನಿಂತು ಬಿಡುತಿದ್ದೆ. ಸಿಕ್ಕು ಗಟ್ಟಿದ ಕೂದಲನ್ನು ಎತ್ತಿ ಕಟ್ಕೊಂಡು,ಬೆವೆತ ಮುಖದ ಮೇಲೆ ಪಾಡರ್ ಹಚ್ಚಿ ಕೊಂಡ್ರು ಚಂದ ಕಾಣ್ತಿದ್ದೆ.ನಾನು ಚಂದನೋ, ಇಲ್ಲ ಕನ್ನಡಿ ಹಾಗೆ ತೋರಿಸ್ತಾ ಇತ್ತೋ, ಉಹೂಂ ಗೊತ್ತಿಲ್ಲ. ಆದ್ರೆ ಕನ್ನಡಿ ಮುಂದೆ ಗರ್ವದಿಂದ ನಿಂತು ಕೊಳ್ಳಲು ನನಗೆ ಯಾವ ಮುಜುಗರನೂ ಇರಲಿಲ್ಲ.
ಬಾಲ್ಯ ಹಾಗೇ ಅಲ್ವಾ? ನಿರ್ಮಲ ಮನಸುಗಳಲ್ಲಿ ಕಲ್ಮಶದ ಕೊಳೆಯನ್ನು ಸೂಕ್ಷ್ಮ ದರ್ಶಕ ಹಾಕಿ ಹುಡುಕಿದ್ರೂ ಸಿಗಲಾರದು.ದೊಡ್ಡವಳಾಗುತ್ತಿದ್ದಂತೆ ಕನ್ನಡಿಯ ಮುಂದೆ ನಿಂತು ಕೊಳ್ಳುವ ಧೈರ್ಯ ಇಲ್ಲ ನಂಗೆ. ಸುಖಾ ಸುಮ್ಮನೆ ಉಗಿಸಿಕೊಳ್ಳುವ ಭಯ.
ಆದರೆ ಕಣ್ತಪ್ಪಿಸಿ ಕಳ್ಳ ಹೆಜ್ಜೆ ಇಟ್ಕೊಂಡು ಓಡಾಡಿದರೂ ಮನೆಯ ಹಾಲ್ ನಲ್ಲಿ ಬೀರು ಸಮೇತ ಇಟ್ಟಿದ್ದ ನನ್ನಷ್ಟು ಎತ್ತರದ ಕನ್ನಡಿಯ ಮುಂದೆ ಸಿಕ್ಕಿ ಹಾಕಿ ಕೊಂಡಾಗಲೆಲ್ಲ ನನ್ನ ಮುಖದ ಬಣ್ಣ ಬದಲಾಗುತ್ತದೆ. ಕಷ್ಟ ಪಟ್ಟು ತಲೆ ಎತ್ತಿ ನೋಡಿದರೆ, *ಹೂಂ, ಇವತ್ತೇನು ಅವಾಂತರ ಮಾಡ್ಕೊಂಡೆ?* ಕನ್ನಡಿಯ ವ್ಯಂಗ್ಯ ಪ್ರಶ್ನೆ ಗೆ ನನ್ನಲ್ಲಿ ಉತ್ತರ ಇರುವುದಿಲ್ಲ. ಸುಮ್ಮನೆ ತಲೆ ತಗ್ಗಿಸಿ ಬಿಡುತ್ತೇನೆ.
ವಿವರ್ಣಗೊಂಡ ಮುಖದಲ್ಲಿ ನಗು ತುಂಬಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತೇನೆ. *ಯೇ ಹಾಗೇನಿಲ್ಲಪ್ಪ, ನನ್ ಪಾಡಿಗೆ ನಾನಿದೀನಿ, ಊರ ಉಸಾಬರಿ ನನಗೇಕೆ?*, ಉತ್ತರ ಕೊಟ್ಟು ತಪ್ಪಿಸಿಕೊಂಡು ಓಡಿ ಹೋಗುವಷ್ಟರಲ್ಲಿ ನನ್ ಕೈ ಹಿಡಿದು ಜಗ್ಗಾಡುತ್ತದೆ.ಕಾಲಿಗೆ ಹಗ್ಗ ಬಿಗಿದಂತಾಗಿ ಬಸವಳಿದು ಕನ್ನಡಿ ಮುಂದೆ ಹಾಗೇ ಕುಸಿದು ಬಿಡುತ್ತೇನೆ….
ಎಲ್ಲಿ ಅವಿತಿದ್ರೋ , ಗಂಗಾ ಯಮುನೆ ಎಲ್ರೂ ಒಟ್ಟಿಗೆ ಧಾಳಿ ಇಟ್ಟಂತೆ ನನ್ನ ಕಂಗಳು ತುಂಬಿ ಹರಿಯುತ್ತವೆ. ದುಃಖ್ಖ ದ ಕಟ್ಟೆ ಒಡೆದು ಹೋಗುವ ಹಾಗೆ ಅತ್ತು ಬಿಡುತ್ತೇನೆ. ಭಾವೋದ್ವೇಗಕ್ಕೆ ಒಳಗಾದ ನನ್ನ ಸುತ್ತ ಮುತ್ತ ಏನು ನಡೀತಾ ಇದೆ ಅನ್ನೋ ಪರಿಜ್ಞಾನನೂ ನನಗಿರದಂತೆ ಅತ್ತು ಬಿಟ್ಟೆ.ತಕ್ಷಣ ಜ್ಞಾನೋದಯ ಆದವರಂತೆ ನಾ ಅತ್ತುದನ್ನು ಈ ಕನ್ನಡಿ ಎಲ್ಲಿ ಊರೆಲ್ಲ ಟಾಮ್ ಟಾಮ್ ಮಾಡ್ಕೊಂಡು ಬರುತ್ತೋ ಅಂತ ಓರೆ ಗಣ್ಣಲ್ಲಿ ನೋಡಿದ್ರೆ ಅರೆ, ಆಶ್ಚರ್ಯ!!ಮತ್ತೆ ಕಣ್ಣುಜ್ಜಿಕೊಂಡು ನೋಡಿದೆ,ಕನ್ನಡಿ ಅಳುತ್ತಿತ್ತು…!!

ಹುಚ್ಚಿ ಕಣೆ ನೀನು,ಎಲ್ಲರನ್ನು ನಿನ್ನವರು ಅಂತ ನಂಬಿ ಮೋಸ ಹೋಗಿ, ರಾತ್ರಿ ಎಲ್ಲಾ ಬೆಡ್ ಶೀಟ್ ಒಳಗೆ ಮುಖ ಮುಚ್ಚಿ ಅಳುವುದನ್ನು ನೋಡಿದ್ದೇನೆ. ಸಿಗದ ಪ್ರೀತಿ, ವಿಶ್ವಾಸಕ್ಕಾಗಿ ಕೊರಗಿ ಮರುಗುವುದನ್ನು ಕಂಡಿದ್ದೇನೆ. ಊರು ಉದ್ದಾರ ಮಾಡ್ತೇನೆ ಅಂತ ಹೋಗಿ ಬೆನ್ನಿಗೆ ಚೂರಿ ಹಾಕಿಸ್ಕೊಂಡು, ಬೆನ್ನಿಗಂಟಿದ ರಕ್ತಕ್ಕೆ ಬಟ್ಟೆ ಸುತ್ತಿಕೊಂಡು ಮನೆಯವರ ಕಣ್ಣು ತಪ್ಪಿಸಿ ಓಡಾಡೋದನ್ನು ನೋಡಿ ನಿಟ್ಟುಸಿರಿಟ್ಟಿದ್ದೇನೆ.ಬಾಚಿ ತಬ್ಬಿ ಸಾಂತ್ವನ ಗೈಯ್ಯಲು ತುಡಿಯುತ್ತಿರುವ ನನ್ನ ಹಸ್ತಗಳು ನಿನಗೆ ಕಾಣಲೇ ಇಲ್ಲ…. ಕನ್ನಡಿ ಒಂದೇ ಸಮನೆ ಮಾತಾಡುತ್ತಲೇ ಇತ್ತು!!
ನಿಮಿಷಕ್ಕೆ ಪಟಪಟನೆ ಸಾವಿರ ಮಾತಾಡುವ ನನ್ನಲ್ಲಿ ಮಾತುಗಳಿರಲಿಲ್ಲ…. ಸುಮ್ಮನೆ ಕನ್ನಡಿಯನ್ನು ಬಿಗಿದಪ್ಪಿಕೊಂಡೆ!!

ನನ್ನ ಮತ್ತು ಕನ್ನಡಿ ನಡುವೆ ಈಗೀಗ ಯಾವ ಹಮ್ಮು ಬಿಮ್ಮಗಳಿಲ್ಲ. ಗಂಟೆ ಗಟ್ಟಲೆ ಒಬ್ಬಳೇ ಕನ್ನಡಿ ಮುಂದೆ ಕುಳಿತು ಮಾತಾಡ್ತೇನೆ, ಹರಟೆ ಹೊಡಿತೇನೆ,ಕೋಪ ಬಂದ್ರೆ ಬೈದು ರಂಪಾಟ ಮಾಡ್ತೇನೆ. ದುಃಖ್ಖ ಆಯ್ತೋ, ಕನ್ನಡಿಗಾತು ಕೂತು ಜೋರಾಗಿ ಅಳ್ತೇನೆ.ಖುಷಿಯಾಯ್ತೋ, ಕೈಲೊಂದು ಖಾಲಿ ಬಾಟಲೋ, ಉದ್ದದ ಕೋಲೋ ಹಿಡ್ಕೊಂಡು ನಾನೇ ಎಸ್ ಜಾನಕಿ ಅನ್ನೋ ಹಾಗೆ ಫೋಸ್ ಕೊಟ್ಕೊಂಡು ಹಾಡ್ಕೊಂಡು ಕುಣಿದು ಕುಪ್ಪಳಿಸ್ತೀನೆ.ಅಪರೂಪಕ್ಕೆ ಮೂಡ್ ಬಂದ್ರೆ ಕಣ್ಣಿಗಷ್ಟು ಕಾಡಿಗೆ, ತುಟಿಗೆ ಲಿಫ್ಸ್ಟಿಕ್, ಚಂದದ ಬಿಂದಿ ಹಣೆಗಿಟ್ಕೊಂಡು ನಮ್ ಹಳೇ ಚಲನ ಚಿತ್ರ ಗೀತೆಗಳ ಪ್ರೇಮ, ಶ್ರುತಿ, ಮಾಲಾಶ್ರೀಯಿಂದ ಹಿಡಿದು ಈಗಿನ ರಚಿತಾ,…… ಅವರೆಲ್ಲ ನಾನೇ ಅನ್ನೋ ಹಾಗೆ ಅಲಂಕರಿಸಿಕೊಳ್ತೀನಿ.ಹಿಂದಿನಂತೆ ಕನ್ನಡಿಯ ಕಣ್ ತಪ್ಪಿಸಿ ಓಡಾಡೋ ಕಷ್ಟ ಈಗಿಲ್ಲ .ನಾ ಅತ್ತಾಗ ಅಳುವ, ನಕ್ಕಾಗ ನಗುವ, ಮುಖವಾಡದ ಹಂಗಿಲ್ಲದ ಕನ್ನಡಿಯನ್ನು ಮತ್ತಷ್ಟು ಪ್ರೀತಿಯಿಂದ ಅಪ್ಪಿಕೊಳ್ತೇನೆ…..

*ಭಾವಯಾನಿ ಪ್ರಮೀಳಾ ರಾಜ್*

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here