ಬಂಟ್ವಾಳ: ಹಿಜಾಬ್ ವಿಚಾರದ ಗೊಂದಲ ಅನಗತ್ಯವಾಗಿದ್ದು, ಇದನ್ನು ಬಗೆಹರಿಸಲು ಹಿಂದೂ ಸಮಾಜದ ಸ್ವಾಮೀಜಿಗಳು ಮಧ್ಯ ಪ್ರವೇಶಿಸಬೇಕು ಎಂದು ದ.ಕ.ಜಿಲ್ಲಾ ಹಿಮಾಮ್ ಒಕ್ಕೂಟದ ಮುಂದಾಳು ಎಸ್.ಬಿ.ಮೊಹಮ್ಮದ್ ದಾರಿಮಿ ಆಗ್ರಹಿಸಿದ್ದಾರೆ.
ಅವರು ಮಿತ್ತಬೈಲು ಮಸೀದಿ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಜಾಬ್ ಗೊಂದಲದ ಹಿನ್ನೆಲೆಯಲ್ಲಿ ಉಲೆಮಾಗಳು ಸಭೆ ನಡೆಸಿ ಚರ್ಚಿಸಿದ್ದೇವೆ. ಶಿರವಸ್ತ್ರ ಪೂರ್ವ ಕಾಲದಿಂದಲೇ ಚಾಲ್ತಿಯಲ್ಲಿದ್ದು, ಆದರೆ ಪ್ರಸ್ತುತ ಮಾಹಿತಿಯ ಕೊರತೆಯಿಂದ ಗೊಂದಲಗಳಾಗುತ್ತಿವೆ. ಪ್ರಾರಂಭದಲ್ಲಿಯೇ ಈ ಗೊಂದಲವನ್ನು ನಿವಾರಣೆ ಮಾಡದ ಹಿನ್ನೆಲೆಯಲ್ಲಿ ಪ್ರಸ್ತುತ ಅದು ರಾಜ್ಯ ಮಟ್ಟಕ್ಕೆ ವಿಸ್ತರಿಸಿದೆ ಎಂದರು.
ಅನೀಶ್ ಕೌಸರಿ ಮಾತನಾಡಿ, ಅಲ್ಪಸಂಖ್ಯಾಕರಲ್ಲಿ ಭಯವನ್ನು ಹುಟ್ಟಿಸುವ ಪ್ರಯತ್ನಗಳು ನಡೆಯುತ್ತಿದ್ದು, ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣವನ್ನು ತಡೆಯುವ, ಅವರನ್ನು ಮುಖ್ಯವಾಹಿನಿಯಿಂದ ಪ್ರತ್ಯೇಕಿಸುವ ಅಜೆಂಡಾವನ್ನು ಸೋಲಿಸುವ ಕಾರ್ಯವಾಗಬೇಕಿದೆ. ಹಿಜಾಬ್‌ನಿಂದ ಶಾಲೆಯ ವಸ್ತು ಸಂಹಿತೆಯ ಯಾವುದೇ ತೊಂದರೆಯಾಗುವುದಿಲ್ಲ. ಹೀಗಾಗಿ ಸರಕಾರ ಇದನ್ನು ಶೀಘ್ರ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ಹಮೀದ್ ದಾರಿಮಿ, ಕೆ.ಬಿ.ಅಬ್ದುಲ್ ಖಾದರ್ ದಾರಿಮಿ, ಹಬೀಬ್ ರೆಹಮಾನ್ ತಂಙಳ, ಎಸ್.ಬಿ.ಅಬ್ದುಲ್ ದಾರಿಮಿ, ಹಕೀಂ ಪರ್ತಿಪ್ಪಾಡಿ, ಇಸ್ಮಾಯಿಲ್ ಯಮಾನಿ ಉಪಸ್ಥಿತರಿದ್ದರು