


*’ಸ್ಮೈಲ್ ಪ್ಲೀಸ್… ಹೋ.. Sorry’*
”ಎಷ್ಟೊತ್ತು ಆಯ್ತು” ಮೊದಲೇ ಬಂದಿದ್ದ ಮಾರ್ಲೆ ಬಳಿ ಆಗತಾನೆ ಬಂದ ಪಯಸ್ ಕೇಳಿದ.
“ನಿನ್ನೆ ಸಂಜೆಯಂತೆ, ಅಮೇರಿಕಾದಿಂದ ಅವನ ಮಗಳು ಬರಬೇಕು ಅದಕ್ಕಾಗಿ ಕಾಯ್ತಿದ್ದಾರೆ.” ಮಾರ್ಲೆ ಅಂದ.
“ಹೋ ಹಾಗೆ, ಮತ್ತೆಲ್ಲರು ಬಂದಿದ್ದಾರೆ ಅನ್ಸುತ್ತೆ, ಕ್ಯಾಮರಾ ಮ್ಯಾನ್ ಬೆಳಿಗ್ಗೆಯೇ ಬಂದಂತಿದೆ”..
“ಹೌದು ನಾವು ಆಗಲೇ ಪೋಟೋ ತೊಗೊಂಡೆವು ನೀವು ಹೋಗಿ, ಮಗಳು ಬಂದ ನಂತರ ಅವಸರದಲ್ಲೇ ಎಲ್ಲಾ ಕಾರ್ಯ ಮುಗಿಸಬಹುದು..”
ಪಯಸ್ ಮುಂದೆ ಸಾಗಿದ..
ಕ್ಯಾಮರಾ ಮ್ಯಾನ್ “ಗುಡ್ ಮಾರ್ನಿಂಗ್ ಪಯಸ್,ಬನ್ನಿ ಬನ್ನಿ..” ಕ್ಯಾಮೆರಾ ಮ್ಯಾನ ಕಾರ್ಲಿಗೆ ಪಯಸ್ ಬಂದದ್ದು ನೋಡಿ ಖುಷಿ ಆಯ್ತು ಅಲ್ಲಿವರೆಗೆ ಸರಿಯಾದ ಪರಿಚಯದವರು ಯಾರು ಇರದೆ,ಯಾರಲ್ಲೂ ಮನಸ್ಸು ಬಿಚ್ಚಿ ಮಾತಾಡಲಾಗದೆ ಬೇಜಾರಾಗಿದ್ದ.
ಪಯಸ್ ಅವನ ನಿರ್ದೇಶನದಂತೆ ನಿಂತ.
“ಇನ್ನೂ ಸ್ವಲ್ಪ ಪಕ್ಕ ನಿಲ್ಲಿ ಪಯಸ್,ಏನೂ ಆಗಲ್ಲ..”
ಪಯಸ್ ಅವನು ಹೇಳಿದಂತೆ ಸರಿದ.
“ಯಸ್,ಹಾಗೆ ನಿಲ್ಲಿ ನನ್ನ ನೋಡಿ… ಸ್ಮೈಲ್ ಪ್ಲೀಸ್… ಹೋ ಸಾರಿ.. ಅದು ಅಭ್ಯಾಸ ಬಲ.
ಅಷ್ಟು ಹೊತ್ತಿಗೆ ಅಲ್ಲಿ ನೆರೆದಿದ್ದ ಒಂದಿಷ್ಟು ಜನರ ಕಣ್ಣುಗಳು ಕಾರ್ಲಿಯನ್ನು ದಿಟ್ಟಿಸುತ್ತಿದ್ದವು.
ಇವನು ಮತ್ತೆ ಸಾರಿ ಅಂದ..
“ಏನೋ ಕಾರ್ಲಿ ಮದುವೆ ಮನೆ ಅನ್ಕೊಂಡೀಯ..” ನಗುತ್ತ ಬಂದ ಪಯಸ್ ಕಾರ್ಲಿಯ ಹೆಗಲಿಗೆ ಕೈ ಹಾಕಿ ಕೇಳಿದ.
“ನಾನು ಈ ಸಾವಿನ ಮನೆಗೆ ಹೋಗಿ ಫೋಟೋ ತೆಗೆಯುವುದಿಲ್ಲ ಎಂದು ನಿರ್ಧರಿಸಿದ್ದೆ ಅದು ನಿನಗೆ ಗೊತ್ತಲ್ವ.”
“ಹೌದು ಮತ್ತೇನು ಇಲ್ಲಿ.!”
“ಏನ್ ಮಾಡ್ಲಿ ಈಗ ಮದುವೆ ಮನೆಗಿಂತ ಸಾವಿನ ಮನೆಯ ಫೋಟೋಗೆ ಡಿಮಾಂಡ್ ಹೆಚ್ಚು, ಅಳುವ, ದುಃಖದ ಮುಖವನ್ನು ಕಾಪ್ಚರ್ ಮಾಡಿ ಫೋಟೊ ಕ್ಲಿಕ್ಕಿಸಿದಕ್ಕೆ ನಗುವಿನ ಫೋಟೋ ಕ್ಲಿಕ್ಕಿಸಿದಕ್ಕಿಂತ ಹೆಚ್ಚು ಪೇಮೆಂಟ್ ಕೊಡ್ತಾರೆ.”
“ಹೋ.. ಅದಕ್ಕೆ ನಿನ್ನ ಸಿದ್ಧಾಂತ ಬಿಟ್ಟೆ.”
“ಹೌದು ಮತೆ, ಇದು ನಮ್ಮ ಆಚಾರ ಅನ್ಕೊಂಡು ಕೂತ್ರೆ ಆಗದು ಪಯಸ್ ಅದ್ಕೆ ಬಂದು ಬಿಟ್ಟೆ ಇಲ್ಲಿಗೆ. ಅಲ್ಲದೆ ಸತ್ತವನು ನನ್ನ ಗೆಳೆಯ ನೋಡು ಅವನು ಹುಟ್ಟಿದಾಗ ನನ್ನ ಅಪ್ಪ ಫೋಟೋ ತೆಗ್ದಿದ್ರು, ಸತ್ತಾಗ ನಾನು.”
“ಈ ಫೋಟೋ ಬಂದ ಮೇಲೆ ಅಳುವವರ ಸಂಖ್ಯೆ ಜಾಸ್ತಿ ಆಗಿದೆ ಅಲ್ವ ಕಾರ್ಲಿ..”
ಕಾರ್ಲಿ ನಕ್ಕು ನುಡಿದ “ಹೌದು ಆದರೆ ಹೀಗೆ ಅಳುವುದು ನಾ ಎದುರಿಗಿದ್ದಾಗ ಮಾತ್ರ..ಹ.ಹ.ಹ.” ಮತ್ತೆ ನಕ್ಕ.
ಪಯಸ್ ಕೂಡ ನಕ್ಕ.
“ಮೊದಮೊದಲು ಹೀಗೆ ಸಾವಿನ ಮನೆಯಲ್ಲಿ ಕ್ಯಾಮೆರಾ ಮ್ಯಾನ್ ಬಂದಾಗ ನಗ್ತಿದ್ರು, ಇದೆಂಥ ಹುಚ್ಚೆಂದು, ಬಟ್ ಈಗ ಇದೊಂದು ಸಂಪ್ರದಾಯವೇ ಆಗಿ ಹೋಯ್ತಲ್ವ ಕಾರ್ಲಿ…”
“ಹೌದು ಪಯಸ್”
“ಒಟ್ಟಾರೆ ನಿಮಗೆ ಬಂಪರ್..”
ಅಷ್ಟು ಹೊತ್ತಿಗೆ
‘ಮಗಳು ಬಂದ್ಳು, ಮಗಳು ಬಂದ್ಳು, ಎಲ್ಲಿ ಕ್ಯಾಮರ್ ಮ್ಯಾನ್..” ಯಾರದೋ ಧ್ವನಿ.
“ಹಾ ಬಂದೆ ಬಂದೆ” ಕಾರ್ಲಿ ಕಿರುಚಿದ.
ಅವಳು ಅಳುತ್ತ ಬರುತ್ತಿದ್ದಳು.
“ಅಮ್ಮ ಸ್ವಲ್ಪ ಇಲ್ಲಿ ನೋಡಿ..” ಕಾರ್ಲಿ ತನ್ನ ಕ್ಯಾಮರದ ಆ್ಯಂಗಲ್ ಸರಿ ಮಾಡುತ್ತ ನುಡಿದ.
ಇವನನ್ನು ನೋಡಿದೆ ತಡ ಅವಳ ಕಣ್ಣಲ್ಲಿ ಮತ್ತಷ್ಟು ನೀರು.
‘ಡ್ಯಾಡಿ…’ ಎಂದು ಕಿರುಚುತ ಮನೆಯೊಳಗೆ ಓಡಿದಳು.
ಕಾರ್ಲಿ ಅವಳನ್ನೇ ಹಿಂಬಾಲಿಸುತ್ತ ಫೋಟೋ ಕ್ಲಿಕ್ಕಿಸಿದ. ಕೆಲವರು ಹೆಣದ ಹತ್ತಿರ ನಿಂತು ತಮ್ಮ ಮೊಬೈಲ್ ನಲ್ಲಿ ಸೆಲ್ಫಿ ಕ್ಲಿಕ್ಕಿಸುತ್ತಿದ್ದರು.
ಮಗಳು ತನ್ನ ತಂದೆಯ ಎದೆಯ ಮೇಲೆ ಬಿದ್ದು “ಡ್ಯಾಡಿ ಕಣ್ಣು ಬಿಡಿ, ಕಣ್ಣು ಬಿಡಿ” ಎಂದು ಅಳುತ್ತ ಮೆಲ್ಲನೆ ತಲೆ ಎತ್ತಿ ಕಾರ್ಲಿಯನ್ನ ಗಮನಿಸುತ್ತಿದ್ದಳು.
ಅಷ್ಟು ಹೊತ್ತಿಗೆ “ಮಗಳೇ” ಅನ್ನುವ ಧ್ವನಿ ಕೇಳಿತು.
ನೋಡಿದರೆ ಧ್ವನಿ ಸತ್ತ ಹೆಣದಿಂದ.
“ನಾನು ಸಾಯಲಿಲ್ಲ ಮಗುವೇ ಯಾಕೆ ಇಷ್ಟು ಕಣ್ಣೀರು..”
ಎಲ್ಲರ ಅಳು ನಿಂತಿತು.
“ಕ್ಷಮಿಸು ಬಂಗಾರ ನಾನು ಸತ್ರೆ ಯಾರು ಎಷ್ಟು ಅಳ್ತಾರೆ ನೋಡುವ ಆಸೆ ಹುಟ್ಟಿತು, ಅದಕ್ಕೆ ಹೀಗೆ ಮಾಡಿದೆ, ಕಾರ್ಲಿ ಎಲ್ಲರ ಫೋಟೋ ಕ್ಲಿಕ್ಕಿಸಿದಿಯಲ್ವ..!?”
ಅಲ್ಲಿದ್ದವರು ಗೊಳ್ಳನೆ ನಕ್ಕರು, ಎಂತಹ ಹುಚ್ಚು ಇವನಿಗೆ.
ಕಾರ್ಲಿ ಎಲ್ಲರಿಗೆ ಕೇಳುವಂತೆ ಹೇಳಿದ..
“ಸ್ಮೈಲ್ ಪ್ಲೀಸ್…!”



