ಬಂಟ್ವಾಳ: ದ.ಕ.ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಮಗಳನ್ನು ಉಳಿಸಿ,ಮಗಳನ್ನು ಓದಿಸಿ ಕಾರ್ಯಕ್ರಮದಂತೆ ಪೋಕ್ಸೋ ಕಾಯ್ದೆ, ಬಾಲ್ಯವಿವಾಹ ನಿಷೇದ ಕಾಯ್ದೆ, ದತ್ತು ಸ್ವೀಕಾರ, ಮಕ್ಕಳ ರಕ್ಷಣಾ ಕಾಯ್ದೆ, ಕಾರ್ಮಿಕ ಕಾಯ್ದೆಗಳ ಮಾಹಿತಿ ಕಾರ್ಯಗಾರ ಬಿಸಿರೋಡಿನ ಸ್ತ್ರೀ ಶಕ್ತಿ ಭವನದಲ್ಲಿ ಜ.19ರಂದು ಬುಧವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ದ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಮಾತನಾಡಿ , ಹೆಣ್ಣು ಗಂಡು ತಾರತಮ್ಯವನ್ನು ಶಿಕ್ಷಣ ವ್ಯವಸ್ಥೆ ಯ ಮೂಲಕವೇ ಆಗಬೇಕು, ಮಕ್ಕಳಿಗೆ ಮೌಲ್ಯಯುತವಾದ ಶಿಕ್ಷಣ ವನ್ನು ನೀಡಬೇಕು ಎಂದು ಅವರು ಹೇಳಿದರು.
ಮಗುವಿನ ಸರ್ವಾಂಗೀಣ ಅಭಿವೃದ್ಧಿ ಬೆಳವಣಿಗೆ ತಾಯಿಯ ಗರ್ಭಧಲ್ಲಿಯೇ ಆಗುವುದರಿಂದ ತಾಯಿ ಆರೋಗ್ಯ ರಕ್ಷಣೆ ಮಾಡುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾ.ಪಂ.ಇ.ಒ.ರಾಜಣ್ಣ ಮಾತನಾಡಿ, ಹೆಣ್ಣು ಕುಟುಂಬಕ್ಕೆ ಪ್ರಧಾನ ಎಂಬುದರ ಬಗ್ಗೆ ಜನರಿಗೆ ಅರಿವು ಮೂಡಿಸಿದಾಗ ಮಾತ್ರ ಮುಂದಿನ ಪೀಳಿಗೆ ಸರಿಯಾದ ದಿಕ್ಕಿನಲ್ಲಿ ನಡೆಯಲು ಸಾಧ್ಯವಾಗುತ್ತದೆ.
ಒಂದು ಹೆಣ್ಣು ಕಲಿತರೆ ಇಡೀ ಕುಟುಂಬ ಶಿಕ್ಷಿತರಾಗುತ್ತಾರೆ, ಆರ್ಥಿಕವಾಗಿಯೂ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ವಿವಿಧ ಕ್ಷೇತ್ರದಲ್ಲಿ ಮಹಿಳೆಯರು ಪ್ರಸ್ತುತದ ದಿನಗಳಲ್ಲಿ ಸಾಧನೆ ಮಾಡಿದ್ದಾರೆ, ಇವರ ಸಾಧನೆ ಹಾಗೂ ಸರ್ಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಾರ್ವಜನಿಕರು ಪ್ರಯತ್ನಿಸಿದಾಗ ಮಾತ್ರ ಲಿಂಗಾನುಪಾತದಂತಹ ಯಾವುದೇ ಸಮಸ್ಯೆಗಳು ಬರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಉಮೇಶ್ ನಿರ್ಮಲ್, ಕುಮಾರ್ ಶೆಟ್ಟಿಗಾರ್, ವಕೀಲೆ ಆಶಾಮಣಿ ರೈ ಉಪಸ್ಥಿತರಿದ್ದರು.
ಬಂಟ್ವಾಳ ಸಿ.ಡಿ.ಪಿ.ಒ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾವತಿ ಸ್ವಾಗತಿಸಿ,
ಮೇಲ್ವಿಚಾತರಕಿ ಶೋಭಾ ಧನ್ಯವಾದ ನೀಡಿದರು.
ಮಕ್ಕಳ ಸಂರಕ್ಷಣಾಧಿಕಾರಿ ಭಾರತಿ ಕುಂದರ್ ಕಾರ್ಯಕ್ರಮ ನಿರೂಪಿಸಿದರು.