Wednesday, October 18, 2023

*ಅಜ್ಜಿಬೆಟ್ಟು ಪುರಾತನ ಇತಿಹಾಸದ ಉಮಾಮಹೇಶ್ವರ ದೇವರ ಜೀರ್ಣೋದ್ಧಾರಕ್ಕೆ ಸಿದ್ದತೆ* : *ಜನವರಿ 27 ರಂದು ಬಾಲಾಲಯ ಪ್ರತಿಷ್ಠೆ* 

Must read

ಬಂಟ್ವಾಳ: ಕಾಲ ಗರ್ಭ ಕ್ಕೆ ಸಿಲುಕಿ ಇತಿಹಾಸದ ಪುಟ ಸೇರಿದ್ದ ಉಮಾಮಹೇಶ್ವರ ನ ಜೀರ್ಣೋದ್ಧಾರ ಕ್ಕೆ ಸಕಲ ಸಿದ್ದತೆ ನಡೆಯುತ್ತಿದೆ.

 

*ಸಾನಿಧ್ಯದ ಹಿನ್ನೆಲೆ:*

 

ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪ್ರಕೃತಿ ರಮಣೀಯ ಸುಂದರ ಪರಿಸರದ ಕಾನನದಲ್ಲಿ ಕೆಲವು ವರ್ಷಗಳ ಹಿಂದೆ ದೇವಸ್ಥಾನದ ಕುರುಹುಗಳು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಸದ್ರಿ ಸ್ಥಳದಲ್ಲಿ ಇತ್ತೀಚೆಗೆ ಅಷ್ಟಮಂಗಳ ಪ್ರಶ್ನಾ ಚಿಂತನೆ ನಡೆಸಿದಾಗ ಅನೇಕ ಐತಿಹಾಸಿಕ ಅಂಶಗಳು ಗೋಚರಿಸಿದೆ.

ಮುಖ್ಯವಾಗಿ ಸದ್ರಿ ಸ್ಥಳವು ಶ್ರೀ ಉಮಾಮಹೇಶ್ವರನ ಸಾನಿಧ್ಯ ಚೈತನ್ಯದ ಸ್ಥಳವಾಗಿದ್ದು ಶ್ರೀ ಕ್ಷೇತ್ರಕ್ಕೆ 1418 ವರ್ಷಗಳ ಪುರಾತನ ಐತಿಹಾಸಿಕ ಹಿನ್ನೆಲೆ ಇದೆ.

ಇದು ಋಷಿ ಮುನಿಗಳ ತಪೋಭೂಮಿಯಾಗಿದ್ದು ಅವರ ತಪಸ್ಸಿಗೆ ಮೆಚ್ಚಿ ಒಲಿದು ಈ ತಪೋವನದಲ್ಲಿ ನೆಲೆನಿಂತ ಉಮಾಮಹೇಶ್ವರ ದೇವರು ಊರಿನ ಸಂರಕ್ಷಣೆಯ ಶಕ್ತಿಯಾಗಿದ್ದರು.

ಪೂರ್ವಕಾಲದಲ್ಲಿ ಹುಲ್ಲಿನ ಕ್ಷೇತ್ರವಾಗಿದ್ದ ಶ್ರೀ ಸಾನಿಧ್ಯವು ನಂತರ ರಾಜವಂಶಜರ ಕಾಲದಲ್ಲಿ ಕಗ್ಗಲ್ಲಿನಿಂದ ಜೀರ್ಣೋದ್ಧಾರಗೊಂಡು ಸುಮಾರು 744 ವರ್ಷಗಳ ಕಾಲ ಉತ್ಸವಾದಿಗಳು ವೈಭವದಿಂದ ನಡೆಯುತ್ತಿತ್ತು.

ಸುಮಾರು 578 ವರ್ಷದಿಂದೀಚೆಗೆ ಕ್ಷೇತ್ರವು ನಾಶವಾಗಿದ್ದು ಪ್ರಕೃತಿ ವಿಕೋಪ ಮತ್ತು ಅನ್ಯಮತಸ್ಥರ ದಾಳಿಯಿಂದ ಶ್ರೀ ಕ್ಷೇತ್ರವು ನಾಶವಾಗಿದೆ ಎಂದು ಅಷ್ಟಮಂಗಳ ಪ್ರಶ್ನೆಯಲ್ಲಿ ತಿಳಿದು ಬಂದಿದೆ.

 

*ಅಜಿಲಸೀಮೆಯ ಮಾಗಣೆ ಕ್ಷೇತ್ರವಿದು*

ಅಜಿಲಸೀಮೆಗೆ ಸಂಬಂಧಪಟ್ಟ 4 ಶಿವಕ್ಷೇತ್ರಗಳ ಪೈಕಿ ಶ್ರೀ ಉಮಾಮಹೇಶ್ವರ ಸಾನಿಧ್ಯ ಚೈತನ್ಯವಾದ ಈ ಕಾಪು ತಪೋವನವು ಒಂದಾಗಿದೆ. ಅಜಿಲಸೀಮೆಯ ಮಾಗಣೆ ಕ್ಷೇತ್ರವಾಗಿದ್ದು ಅಜ್ಜಿಬೆಟ್ಟು, ಚೆನ್ನೈತ್ತೋಡಿ, ಪಿಲಿಮೊಗರು, ಕುಡಂಬೆಟ್ಟು, ಮೂಡುಪಡುಕೋಡಿ, ಪಿಲಾತಬೆಟ್ಟು ಹಾಗೂ ಇರ್ವತ್ತೂರುಗಳೆಂಬ 7 ಗ್ರಾಮಗಳ ಭಕ್ತರ ಆರಾಧನಾ ಕ್ಷೇತ್ರವಾಗಿದೆ.

 

*ನಾಡಿಗೆ ಸುಭೀಕ್ಷೆಯಾಗಲಿದೆ:*

 

ಇತಿಹಾಸದಲ್ಲಿ ವೈಭವದಿಂದ ಮೆರೆದ ಶ್ರೀ ಕ್ಷೇತ್ರವು ನಾಶವಾಗಿರುವುದರಿಂದ ಮಾಗಣೆಗೆ ಸಂಬಂಧ ಪಟ್ಟ ಇತರ ಕ್ಷೇತ್ರಗಳು ಹಾಗೂ ದೈವಸ್ಥಾನಗಳಿಗೂ ಶ್ರೀ ಉಮಾಮಹೇಶ್ವರ ಕೋಪವಿರುವುದರಿಂದ ಊರಜನತೆಗೆ ಅನಾರೋಗ್ಯ, ಅಲ್ಪಾಯುಶ್ಯ, ಮಾನಸಿಕ ಅಶಾಂತಿ ಸಹಿತ ಪ್ರಕೃತಿ ವಿಕೋಪಾದಿ ತೊಂದರೆಗಳು ಕಂಡು ಬರುತ್ತಿದೆ. ಅದ್ದರಿಂದ ಏಳು ಗ್ರಾಮದ ಭಕ್ತರು ಒಮ್ಮನಸ್ಸಿನಿಂದ ಜತೆಗೂಡಿ ಕ್ಷೇತ್ರದ ಜೀರ್ಣೋದ್ಧಾರ ಮಾಡಿ, ಉತ್ಸವಾದಿ ಪುಣ್ಯಕಾರ್ಯಗಳು ವಿಧಿವತ್ತಾಗಿ ಸಂಪನ್ನಗೊಂಡಲ್ಲಿ ನಾಡಿಗೆ ಸುಬೀಕ್ಷೆಯಾಗುವುದರೊಂದಿಗೆ ಮನುಕುಲದ ಇಷ್ಟಾರ್ಥಗಳು ಈಡೇರುತ್ತದೆ ಎಂದು ಅಷ್ಟಮಂಗಳ ಪ್ರಶ್ನೆಯಲ್ಲಿ ತಿಳಿದು ಬಂದಿದೆ.

 

*ಸಾನಿಧ್ಯದೊಳಗಣಂಗಗಳು:*

 

ಕ್ಷೇತ್ರವು ಗಜಪೃಷ್ಟಾಕಾರದಲ್ಲಿ ನಿರ್ಮಾಣಗೊಳ್ಳಬೇಕಾಗಿದ್ದು ಪ್ರಧಾನ ಶಕ್ತಿ ಶ್ರೀ

ಉಮಾಮಹೇಶ್ವರ ಸಹಿತ ಶ್ರೀ ಗಣಪತಿ ದೇವರ ಗುಡಿ, ಶ್ರೀ ಸುಬ್ರಹ್ಮಣ್ಯ ದೇವರ ಗುಡಿ, ನಮಾಸ್ಕಾರ ಮಂಟಪ, ಗೋಪುರ, ಸುತ್ತು ಪೌಳಿ, ಅಯ್ಯಂಗಾಯಿ ಕಲ್ಲು, ನಂದಿ‌ ಪ್ರತಿಷ್ಠೆ, ಕೊಡಿಮರ( ಧ್ವಜಸ್ತಂಭ) ಪ್ರತಿಷ್ಠೆ, ಕ್ಷೇತ್ರಪಾಲ ಕಲ್ಲು, ಸಪ್ತಮಾತೃಗಳು, ಗುರುಪೀಠ, ತೀರ್ಥಭಾವಿ ಮೊದಲಾದ ಅಂಗಗಳಿರುವ ಕ್ಷೇತ್ರವನ್ನು ನಿರ್ಮಾಣ ಮಾಡಬೇಕೆಂದು ಪ್ರಶ್ನೆಯಲ್ಲಿ ತಿಳಿದು ಬಂದಿದೆ.

ಕ್ಷೇತ್ರದ ಈಶಾನ್ಯ ಭಾಗದಲ್ಲಿ ಜಲಕದ ಕೆರೆಯಿದೆ, ಇದನ್ನು ಅಭಿವೃದ್ಧಿ ಪಡಿಸಬೇಕು. ನೈರುತ್ಯ ಭಾಗದಲ್ಲಿ ವನ ಶಾಶ್ತಾವಿ ಮತ್ತು ವನದುರ್ಗಾ ಸಾನಿಧ್ಯವಿದೆ. ಈ ಶಕ್ತಿಗಳಿಗೆ ಕಟ್ಟೆ ನಿರ್ಮಿಸಿ ಶಿಲಾ ಪ್ರತಿಷ್ಟೆ ಮಾಡಬೇಕೆಂದು ತಿಳಿದು ಬಂದಿದೆ.

ಕ್ಷೇತ್ರದ ಸನಿಹದಲ್ಲೇ ಇರುವ ದೇವರ ಗುಂಡಿಯಲ್ಲಿ ಶಿವಲಿಂಗವಿದ್ದು ವೈಧಿಕ ವಿಧಿವಿಧಾನದೊಂದಿಗೆ ಶಿವಲಿಂಗ ಸಹಿತ ಇತರ ಸಾನಿಧ್ಯ ಶಕ್ತಿಗಳನ್ನು ಬಾಲಾಲಯ ಪ್ರತಿಷ್ಢಾಪಿಸಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಡಿ ಇಡಬೇಕೆಂದು ಕಂಡು ಬಂದಿದೆ.

ಇದರಂತೆ ಇದೀಗ ಆರಂಭಿಕ ಹಂತದಲ್ಲಿ ಮಾಗಣೆಯ ಸಮಸ್ತ ಭಕ್ತಾದಿಗಳು ಸೇರಿ ಅನುಜ್ಞಾ ಕಲಶ, ನಂತರ ಜನವರಿ 27ರಂದು ಬಾಲಾಲಯ ಪ್ರತಿಷ್ಢೆ ನೆರವೇರಿಸುವುದೆಂದು ಸಂಕಲ್ಪಿಸಲಾಗಿದೆ.

More articles

Latest article