ಬಂಟ್ವಾಳ: ಬಂಟ್ವಾಳ ತಾಲೂಕು ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘವು ಮುಂದಿನ ವರ್ಷದ ಸಾಲಿನಲ್ಲಿ ಸಂಘದ ವ್ಯಾಪ್ತಿಯಲ್ಲಿ ಹಡಿಲು ಬಿದ್ದ ಗದ್ದೆಗಳಲ್ಲಿ ಭತ್ತ ಬೇಸಯ ಮಾಡುವ ರೈತರಿಗೆ ಗರಿಷ್ಠಪ್ರಮಾಣದಲ್ಲಿ ಬಡ್ಡಿ ರಹಿತ ಸಾಲ ನೀಡಲು ಚಿಂತನೆ ನಡೆಸಲಾಗಿದೆ ಎಂದು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದ್ದಾರೆ.
ಅವರು ಸಿದ್ದಕಟ್ಟೆ ಸೈಂಟ್ ಪೆಟ್ರಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ವರ್ಷದಲ್ಲಿ ಸಂಘದ ವ್ಯಾಪ್ತಿಯಲ್ಲಿ ಹಲವು ರೈತರು ಸಂಘದ ಉತ್ತೇಜನ, ಸಲಹೆ, ಸೂಚನೆ ಪಡೆದು ಹಡೀಲು ಬಿದ್ದ ಗದ್ದೆಗಳಲ್ಲಿ ಭತ್ತ ಬೇಸಾಯ ಮಾಡಿದ್ದು ಕೆಲವರಿಗೆ ಸಂಘದ ವತಿಯಿಂದ ಕಡಿಮೆ ಬಡ್ಡಿ ದರದಲ್ಲಿ ಆಧಾರ ರಹಿತವಾಗಿ ಸಾಲ ನೀಡಲಾಗಿದೆ ಎಂದರು. ಸದಸ್ಯರ ಆರೋಗ್ಯ ದೃಷ್ಟಿ ಯಿಂದ ಸಂಘದ ಸದಸ್ಯರಿಗಾಗಿ ನೂತನವಾಗಿ “ರೈತ ರಕ್ಷಾ”ಆರೋಗ್ಯ ವಿಮಾ ಯೋಜನೆ ಜಾರಿಗೆ ತರಲಾಗಿದೆ. ಗರಿಷ್ಠ ಪ್ರಮಾಣದ ರೈತರಿಂದ ಪ್ರಧಾನ ಮಂತ್ರಿ ಫಸಲ್ ಭೀಮಾ ಬೆಳೆ ವಿಮಾ ಯೋಜನೆಗೆ ನೋಂದಣಿ ಮಾಡಿಸಿ ವಿಮಾ ಪ್ರೀಮಿಯಂ ಪಾವತಿಸಿ ಯೋಜನೆಯ ಪ್ರಯೋಜನ ಕಲ್ಪಿಸಲಾಗಿದೆ
ಗದ್ದೆ ಉಳುಮೆ ಮಾಡಲು ಸರಕಾರದ ಕೃಷಿ ಇಲಾಖೆಯಿಂದ 2 ಟ್ರಾಕ್ಟರ್ ಖರೀದಿಸಿ ರೈತರಿಗೆ ಬಾಡಿಗೆಗೆ ನೀಡಲಾಗುತ್ತಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ದೊಂದಿಗೆ ಗೌರವಿಸಲಾಗಿದೆ.ಸಂಘದ ವ್ಯಾಪ್ತಿಯ ಶಾಲೆ -ಕಾಲೇಜ್ ಗಳಲ್ಲಿ ಎಸ್. ಎಸ್ ಎಲ್. ಸಿ ಮತ್ತು ಪಿ. ಯು. ಸಿ. ಯಲ್ಲಿ ಪ್ರಥಮ -ದ್ವಿತೀಯ ಬಂದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ ಎಂದು ತಿಳಿಸಿದ ಅವರು ಒಟ್ಟಿನಲ್ಲಿ ಸಹಕಾರ ಕ್ಷೆತ್ರದಲ್ಲಿ ಕೇವಲ ಸಾಲ ನೀಡಿಕೆ ಅಲ್ಲದೇ ಎಲ್ಲಾ ಕ್ಷೇತ್ರದ ಸಾಧನೆಗೂ ಸಹಕಾರ ನೀಡಲಾಗಿದೆ ಎಂದರು.
ಕೋವಿಡ್ ಸಂಕಟ ಕಾಲದಲ್ಲಿಯೂ ಸದಸ್ಯರು ಸಂಘದೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದನೆ ಮಾಡಿರುವುದರಿಂದ ಸಂಘವು ಪ್ರಸಕ್ತ ವರ್ಷದಲ್ಲಿ ಹೆಚ್ಚಿನ ಲಾಭಗಳಿಸಲು ಸಾಧ್ಯವಾಯಿತು ಈ ಹಿನ್ನೆಲೆಯಲ್ಲಿ ಸಂಘದ ಸದಸ್ಯರಿಗೆ ಅಭಿನಂದಿಸಲಾಗುವುದು ಎಂದರು.
2020-2021 ನೇ ಸಾಲಿನಲ್ಲಿ ಸಂಘವು 49 ಲಕ್ಷ ಲಾಭ ಹೊಂದಿದ್ದು, ಸಂಘದ ಸದಸ್ಯರಿಗೆ 10% ಡಿವಿಡೆಂಟ್ ನೀಡಲಾಗುವುದು.
ಸಾಲ ಮನ್ನಾ ಯೋಜನೆ ಅಡಿಯಲ್ಲಿ ಒಟ್ಟು 1108 ಅರ್ಜಿದಾರ ಸದಸ್ಯರ ಪೈಕಿ 1045 ಜನರಿಗೆ ಹಣ ಬಿಡುಗಡೆಯಗಿದ್ದು,15 ಜನರಿಗೆ ಬಿಡುಗಡೆ ಬಾಕಿಯಾಗಿದ್ದು 64 ಮಂದಿಗೆ ವಿವಿಧ ಕಾರಣಕ್ಕಾಗಿ ತಿರಸ್ಕಾರ ಗೊಂಡಿವೆ ಎಂದು ಮಾಹಿತಿ ನೀಡಿದರು.
ಬಿಪಿನ್ ರಾವತ್ ಗೆ ಮೌನ ಪ್ರಾರ್ಥನೆ
ಇತ್ತೀಚಿನ ಹ್ಯಾಲಿಕಾಪ್ಟರ್ ಅವಘಡದಲ್ಲಿ ವೀರ ಮರಣ ಹೊಂದಿ ಹುತಾತ್ಮರಾದ ದೇಶದ ಮೂರು ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧೂಲಿಕ ರಾವತ್ ಸೇರಿದಂತೆ 14 ಮಂದಿ ವೀರ ಯೋಧರಿಗೆ ಆತ್ಮ ಶಾಂತಿಗಾಗಿ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು.
ಸಾಧಕರಿಗೆ ಗೌರವರ್ಪಣೆ
ಇದೇ ಸಂದರ್ಭದಲ್ಲಿ ಸಂಘದ ವ್ಯಾಪ್ತಿಯಲ್ಲಿ ವಿವಿಧ ಕ್ಷೆತ್ರಗಳ್ಳಲ್ಲಿ ಗಣನೀಯ ಸಾಧನೆ ಮಾಡಿದ ತುಳುನಾಡ ಜಾನಪದ ಕ್ರೀಡೆ ಕಂಬಳ ಕ್ಷೆತ್ರಕ್ಕಾಗಿ ಸಂಘದ ನಿರ್ದೇಶಕರು ಆದ ಸಂದೇಶ ಶೆಟ್ಟಿ ಪೊಡುಂಬ ಹೊಸಮನೆ,ಪದ್ಮನಾಭ ಶೆಟ್ಟಿಗಾರ್ ಸಂಗಬೆಟ್ಟು, (ಯಕ್ಷಗಾನ ) ನಾಗೇಶ್ ಸೇರಿಗಾರ್ ಅರಳ (ನಾಗಸ್ವರ ವಾದಕ ), ನಾರಾಯಣ ನಾಯ್ಕ್ ಸಿದ್ದಕಟ್ಟೆ ನಿವೃತ ಕೃಷಿ ಅಧಿಕಾರಿ (ಸರಕಾರಿ ಸೇವೆ ), ಹರಿಪ್ರಸಾದ್ ಪ್ರಭು (ತರಕಾರಿ ಬೆಳೆ ಯುವ ಕೃಷಿಕ ),ತೇಜಸ್ವಿ. ಪಿ. ರಾಯಿ( ವಿದ್ಯಾಕ್ಷೆತ್ರ),ಯೋಗೀಶ್ ಕುಲಾಲ್ ಅರಳ (ಕೋವಿಡ್ ವಾರಿಯಾರ್ಸ್ ) ಸಂಘದ ವತಿಯಿಂದ ಗೌರವಿಸಲಾಯಿತು.ಸಂಘದ ಸದಸ್ಯರ ಮಕ್ಕಳಿಗೆ ಶೇ 90% ಅಂಕ ಪಡೆದ ಎಸ್. ಎಸ್. ಎಲ್. ಸಿ ಮತ್ತು ಪಿ. ಯು. ಸಿ. ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಸಂಘದ 2020-2021 ನೇ ಸಾಲಿನ ವಾರ್ಷಿಕ ವರದಿ ,2021-2022 ನೇ ಸಾಲಿನ ಅಂದಾಜು ಬಜೆಟ್ ಮಂದಿಸಿದರು.
ಸಂಘದ ನಿರ್ದೇಶಕರಾದ ದಿನೇಶ್ ಪೂಜಾರಿ, ಹರೀಶ್ ಆಚಾರ್ಯ ರಾಯಿ, ಉಮೇಶ್ ಗೌಡ ಮಂಚಕಲ್ಲು, ದೇವರಾಜ್ ಸಾಲಿಯಾನ್, ಜಾರಪ್ಪ ನಾಯ್ಕ, ವೀರಪ್ಪ ಪರವ, ಮಂದಾರತಿ.ಎಸ್. ಶೆಟ್ಟಿ, ಅರುಣ. ಎಸ್. ಶೆಟ್ಟಿ. ಮಾದವ ಶೆಟ್ಟಿಗಾರ್, ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಸತೀಶ್ ಪುಜಾರಿ ಸ್ವಾಗತಿಸಿದರು. ಸಂಘದ ನಿರ್ದೇಶಕ ರಾಜೇಶ್ ಶೆಟ್ಟಿ ಕೊನೆರಬೆಟ್ಟು ಧನ್ಯವಾದವಿತ್ತರು. ಸಂಘದ ಮುಖ್ಯ ಲೆಕ್ಕಿಗರಾದ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು.