ಬಂಟ್ವಾಳ : ಕಂಬಳದಲ್ಲಿ ಕೋಣಗಳನ್ನು ಓಡಿಸುವ ವೇಳೆ ಕಂಬಳದ ಕರೆಯಲ್ಲಿ ಬಿದ್ದರೂ, ಛಲ ಬಿಡದೆ ಕೋಣಗಳೊಂದಿಗೆ ಎಳೆದೊಯ್ದು ಗುರಿ ಮುಟ್ಟಿದ ರೋಮಾಂಚನಕಾರಿ ಘಟನೆ ಹೊಕ್ಕಾಡಿಗೋಳಿ ಕಂಬಳದಲ್ಲಿ ರವಿವಾರ ಸಂಭವಿಸಿದೆ.
ಬಂಟ್ವಾಳ ತಾಲೂಕು ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿರುವ ಹೊಕ್ಕಾಡಿಗೋಳಿ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ  ಹೊಕ್ಕಾಡಿಗೋಳಿಯಲ್ಲಿ ನಡೆದ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ  ಜೋಡುಕರೆ ಬಯಲು ಕಂಬಳದಲ್ಲಿ ನಡೆದ ಘಟನೆ ಪ್ರಸ್ತುತ ವೈರಲ್ ಆಗುತ್ತಿದೆ.

ಹಗ್ಗದ ಕಿರಿಯ ವಿಭಾಗದಲ್ಲಿ , ಪ್ರಿ ಕ್ವಾರ್ಟರ್ ಫೈನಲ್ ಸಂದರ್ಭದಲ್ಲಿ ಬಿಳಿಯೂರು, ಪೆರ್ನೆ ವಿಷ್ಣುಮೂರ್ತಿ ದೇವತಾ ಗಣಪ ಭಂಡಾರಿ ಅವರ ಕೋಣಗಳನ್ನು ಉಡುಪಿ ಹಿರೇಬೆಟ್ಟು ಆಕಾಶ್ ಭಂಡಾರಿ ಅವರು ಓಡಿಸುತ್ತಿದ್ದು, ಕರೆಯನ್ನು ಮುಕ್ಕಾಲು ಭಾಗ ಕ್ರಮಿಸುವಾಗ ಬಿದ್ದರು. ಆದರೆ ಹಗ್ಗವನ್ನು ಬಿಡದೇ ಕೋಣಗಳು ಎಳೆದೊಯ್ಯುತ್ತಿದ್ದರೂ ಛಲದಿಂದ ಗುರಿ ಮುಟ್ಟಿದರು. ಸುಮಾರು 20 ಮೀ.ನಷ್ಟು ದೂರ  ಕವುಚಿ ಬಿದ್ದರೂ ಹಗ್ಗ ಹಿಡಿದು ಗುರಿ ಮುಟ್ಟಿದ ಅವರ ಎದೆಗಾರಿಕೆ ಅವರನ್ನು ವಿಜಯಿಯನ್ನಾಗಿಸಿತು. ಆಕಾಶ್ ಅವರ ಸಾಹಸವನ್ನು ಕಂಬಳಾಭಿಮಾನಿಗಳು ಮುಕ್ತ ಕಂಠದಿಂದ ಶ್ಲಾಘಿಸಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here