Friday, October 27, 2023

ಬಂಟ್ವಾಳ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ವಿಶ್ವ ವಿಕಲಚೇತನ ದಿನಾಚರಣೆ

Must read

ಬಂಟ್ವಾಳ: ಬಂಟ್ವಾಳ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ಬಂಟ್ವಾಳ, ಲಯನ್ಸ್ ನಿರ್ಮಲ ಹೃದಯ ವಿಶೇಷ ಚೇತನ ಮಕ್ಕಳ ಪಾಲನಾ ಕೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸಹಯೋಗದಲ್ಲಿ  ವಿಶ್ವ ವಿಕಲಚೇತನ ದಿನಾಚರಣೆ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ.ಜ್ಞಾನೇಶ್, ವಿಶೇಷಚೇತನ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ದೌರ್ಬಲ್ಯವನ್ನು ಎದುರಿಸಿ, ಪ್ರಬಲಗೊಳಿಸುವ ಶಕ್ತಿಯನ್ನು ತುಂಬಿಸುವ ಕೆಲಸವನ್ನು ಪೋಷಕರು ಮಾಡಬೇಕು. ಶಿಕ್ಷಣ ಇಲಾಖೆ ವಿಶೇಷಚೇತನ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಸ್ಪಂದಿಸುತ್ತದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಲಯನ್ಸ್ ಕ್ಲಬ್ ಬಂಟ್ವಾಳ ಅಧ್ಯಕ್ಷ ಡಾ. ವಸಂತ ಬಾಳಿಗಾ ಮಾತನಾಡಿ, ಲಯನ್ಸ್ ಕ್ಲಬ್ ವತಿಯಿಂದ ದಾನಿಗಳ ನೆರವಿನಿಂದ ಈ ಕಾರ್ಯವನ್ನು ಮಾಡುತ್ತಾ ಬಂದಿದ್ದು, ಭವಿಷ್ಯದಲ್ಲಿ ಶಾಲೆಯೊಂದನ್ನು ನಿರ್ಮಿಸುವ ಇರಾದೆ ಇದೆ ಎಂದರು.
ಮುಖ್ಯ ಅತಿಥಿ ಬಿ.ಮೂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಹರೀಶ ಮಾಂಬಾಡಿ ಮಾತನಾಡಿ, ಮಕ್ಕಳಲ್ಲಿರುವ ಶಕ್ತಿಯನ್ನು ಗುರುತಿಸುವ ಕಾರ್ಯವನ್ನು ಪೋಷಕರು ಹಾಗೂ ತರಬೇತುದಾರರು ಜತೆಯಾಗಿ ಮಾಡಬೇಕು, ತಾಲೂಕು ಕೇಂದ್ರದಲ್ಲಿ ಶಾಲೆಯೊಂದು ಅಗತ್ಯ ಎಂದರು.
ಕ್ಷೇತ್ರ ಸಂಪನ್ಮೂಲ ಕೇಂದ್ರದ ಪ್ರಭಾರ ಸಮನ್ವಯಾಧಿಕಾರಿ ರಾಘವೇಂದ್ರ ಬಲ್ಲಾಳ್ ಮಾತನಾಡಿ, ಪೋಷಕರಿಗೆ ಸರಿಯಾದ ಮಾರ್ಗದರ್ಶನ ನೀಡುವ ಕೆಲಸವಾದಾಗ ಮಕ್ಕಳು ಭವಿಷ್ಯದಲ್ಲಿ ಸ್ವತಂತ್ರವಾಗಿ ಜೀವನ ನಿರ್ವಹಿಸುವಂತಾಗುತ್ತದೆ ಎಂದರು.
ಲಯನ್ಸ್ ಕ್ಲಬ್ ನ ವಿಶೇಷ ಮಕ್ಕಳ ಸೇವಾ ವಿಭಾಗದ ಜಿಲ್ಲಾಧ್ಯಕ್ಷರಾದ ದಿಶಾ ಆಶೀರ್ವಾದ್ ಮತ್ತು ಪಿ.ಜೆ. ರೋಡ್ರಿಗಸ್, ಸಹ ಸಂಯೋಜಕಿ ದೇವಿಕಾ ದಾಮೋದರ್, ಜಿಲ್ಲಾ ಸಂಪುಟ ಕೋಶಾಧಿಕಾರಿ ಶ್ರೀನಿವಾಸ್ ಪೂಜಾರಿ ಮೇಲ್ಕಾರ್ ಉಪಸ್ಥಿತರಿದ್ದರು. ಲಯನ್ಸ್ ನಿರ್ಮಲ ಹೃದಯ ಮಕ್ಕಳ ಪಾಲನಾ ಕೇಂದ್ರದ ಸಂಚಾಲಕ ಹಾಗೂ ಜಿಲ್ಲಾ ಸಂಪುಟದ ಪ್ರಧಾನ ಸಂಯೋಜಕ ದಾಮೋದರ್ ಬಿ.ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಲಯನ್ಸ್ ವಲಯಾಧ್ಯಕ್ಷ ಎಂ.ಕೃಷ್ಣ ಶ್ಯಾಮ್, ಹಿರಿಯ ಸದಸ್ಯರಾದ ಜಯಂತ್ ಶೆಟ್ಟಿ, ಮಧುಕರ್ ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ಮಾಧವ ಮಾರ್ಲ, ರಾಘವೇಂದ್ರ ಕಾರಂತ್, ಉಮೇಶ್ ಆಚಾರ್ಯ ಅತಿಥಿಗಳನ್ನು ಗೌರವಿಸಿದರು. ಸ್ಥಾಪಕರಾದ ಡಾ. ಶಾಮ ಭಟ್ ಬಹುಮಾನ ವಿತರಿಸಿದರು. ಪಾಲನಾ ಕೇಂದ್ರದ ತರಬೇತುದಾರರಾದ ಅಕ್ಷಿತಾ, ಮೇಘನಾ, ಕಿರಣ ಕುಮಾರಿ, ನೀರಜಾಕ್ಷಿ ಅವರನ್ನು ಗೌರವಿಸಲಾಯಿತು. ಬಿಐಆರ್ ಟಿ ರವೀಂದ್ರ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಣ ಸಂಯೋಜಕಿ ಸುಜಾತಾ ಕುಮಾರಿ ವಂದಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

More articles

Latest article