ಕಾದು ಕಾದು ಸಾಕಾಗಿದೆ
ಓ ಜೀವದ ಗೆಳೆಯ
ಮಳೆಯಾಗಿ ತಣಿಸಿಬಿಡು
ಈ ತನುವಿನಿಳೆಯ
ಸಂಗಮದ ಮಂಗಲಕೆ
ತೊಟ್ಟಿಹೆನು ಬಳೆಯ
ದಿಬ್ಬಣವನೈತಂದು ನೀಗು
ಅಗಲಿಕೆಯ ಕೊಳೆಯ
ಪೋಣಿಸಿಟ್ಟ ಹೂ ಮಾಲೆ
ಕೊರಗಿ ತಾ ಬಾಡುತಿದೆ
ನಿನ್ನ ಬಿಸಿಯುಸಿರು ಈ
ತುಂಬಿದೆದೆಯ ಕಾಡುತಿದೆ
ಇರುಳಿನಲಿ ಅರಳಿದ
ಒಲವೀಗಲೂ ಹಾಡುತಿದೆ
ನಿನ್ನ ಬಿಸಿಯಪ್ಪುಗೆಯನೆ
ಈ ಜೀವ ಬೇಡುತಿದೆ
ಗಿರಿ ಕಂದರವ ದಾಟಿ
ಬಂದು ಸೇರೋ ನೀನು
ನಿನ್ನೊಲವ ಕುಸುಮದ
ನರುಗಂಪು ನಾನು
ಮನಬಂದಂತೆ ಸವಿದು
ಹೀರಿಬಿಡು ಜೇನು
ಚಂದ್ರ ತಾರೆಯೆ ಮಾಯ
ಒಂಟಿಯಾಗಿದೆ ಬಾನು
ವಿರಹದೊಡ್ಡೋಲಗಕೆ
ಬೇಗ ಗೀರು ಬೆಂಕಿ ಕಡ್ಡಿ
ನಿನ್ನ ಎಗರು ಪೊಗರುಗಳಿಗೆ
ನಾ ಮಾಡಲಾರೆ ಅಡ್ಡಿ
ಸೊಕ್ಕಿದ ಹರೆಯವನೆಲ್ಲ
ದೋಚಿಬಿಡು ಅಡ್ಡಾದಿಡ್ಡಿ
ರವಿಯುದಯಿಸುವ ಮುನ್ನ
ತೀರಿಸಿಬಿಡು ಚಕ್ರಬಡ್ಡಿ
#ನೀ.ಶ್ರೀಶೈಲ ಹುಲ್ಲೂರು