ಪುತ್ತೂರು : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು ಕೃಷಿ ಹಾಗೂ ಸ್ವಸಹಾಯ ಸಂಘಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು,ಆಕರ್ಷಕ ಬಡ್ಡಿದರದಲ್ಲಿ ನೀಡುವ ವಿವಿಧ ರೀತಿಯ ಸಾಲ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ಸ್ವಸಹಾಯ ಸಂಘಗಳು ಪಡೆಯಬೇಕು ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಜ್ ಕಿರಣ್ ರೈ ಜಿ. ಹೇಳಿದರು.
ಪುತ್ತೂರು ಯೂನಿಯನ್ ಬ್ಯಾಂಕ್ ಹಾಗೂ ಸುತ್ತಮುತ್ತಲಿನ ಶಾಖೆಗಳ ಸಹಯೋಗದಲ್ಲಿ ಮಹಾವೀರ ಮಾಲ್ ನಲ್ಲಿ ಸೋಮವಾರ ನಡೆದ ರೈತರ ಹಾಗೂ ಸ್ವಸಹಾಯ ಸಂಘಗಳ ಸಾಲ ಜೋಡಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, 25 ಸ್ವಸಹಾಯ ಸಂಘಗಳಿಗೆ ಒಂದು ಕೋಟಿಗಿಂತಲೂ ಹೆಚ್ಚಿನ ಸಾಲ ಮಂಜೂರಾತಿ ಪತ್ರವನ್ನು ವಿತರಿಸಿ ಮಾತನಾಡಿದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಭಾರತ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಎಂಜೆಬಿವೈ, ಪಿಎಂಎಸ್ ಬಿ ವೈ ಹಾಗೂ ಎಪಿವೈ ಯೋಜನೆಗಳಡಿಯಲ್ಲಿ ಹೆಚ್ಚಿನ ಗ್ರಾಹಕರು ರೈತರು ನೋಂದಣಿ ಮಾಡಿಕೊಂಡು ಲಾಭವನ್ನು ಪಡೆಯಲು ತಿಳಿಸಿದರು. ಬ್ಯಾಂಕ್ ಮುದ್ರಾ ಸಾಲ ಯೋಜನೆಯಡಿಯಲ್ಲಿ ಡಿಜಿಟಲ್ ಮುಖಾಂತರ ರೂಪಾಯಿ 50,000 ವರೆಗೆ ತ್ವರಿತ ರೀತಿಯಲ್ಲಿ ಸಾಲ ಮಂಜೂರು ಮಾಡುವ ವ್ಯವಸ್ಥೆಯನ್ನು ಅಳವಡಿಸಿದ್ದು ಅದರ ಲಾಭವನ್ನು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಲು ಕೋರಿದರು. ಬ್ಯಾಂಕುಗಳು ಬರುವ ದಿನಗಳಲ್ಲಿ ಆಸ್ತಿ ಆಧಾರಿತ ಸಾಲಕ್ಕಿಂತಲೂ ಗ್ರಾಹಕರ ವ್ಯವಹಾರ ಮತ್ತು ಸಾಲ ಮರುಪಾವತಿಯ ದಾಖಲೆಗಳ ಅನುಗುಣವಾಗಿ ಸಾಲ ಮಂಜೂರಾತಿಯನ್ನು ನಿರ್ಧರಿಸಲಾಗುವುದು ಆದ್ದರಿಂದ ಎಲ್ಲರೂ ಬ್ಯಾಂಕ್ ವ್ಯವಹಾರವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವಂತೆ ಅವರು ಮನವಿ ಮಾಡಿದರು.
ಮಂಗಳೂರು ವಲಯ ಕಚೇರಿಯ ಮುಖ್ಯ ಮಹಾ ಪ್ರಬಂಧಕರಾದ ಎಂ.ವಿ. ಬಾಲಸುಬ್ರಹ್ಮಣ್ಯಂ ರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿ ಹಾಗೂ ಸ್ವಸಹಾಯ ಸಂಘಗಳಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ ಇದರ ಸೌಲಭ್ಯವನ್ನು ಪಡೆಯಬೇಕೆಂದು ವಿನಂತಿಸಿದರು.
ಪ್ರಾದೇಶಿಕ ಕಚೇರಿಯ ಮುಖ್ಯಸ್ಥರು ಹಾಗೂ ಉಪ ಮಹಾ ಪ್ರಬಂಧಕ ರಾದ ಮಹೇಶ್ ಜೆ ವಂದಿಸಿದರು. ಬ್ಯಾಂಕ್ ಸಿಬ್ಬಂದಿ ಕು.ಉಮಾದೇವಿ ಮತ್ತು ನಿಖಿತ್ ಶ್ರೀಯಾನ್ ಕಾರ್ಯಕ್ರಮ ನಿರ್ವಹಿಸಿದರು.