ಬಂಟ್ವಾಳ: ಅ. 17ರಿಂದ 21ರವರೆಗೆ ಬಂಟ್ವಾಳ ತಾಲೂಕಿನ ಮಕ್ಕಳ ಲೋಕದ ಚಿಣ್ಣರಿಗೆ ಚಿತ್ರ ಕವನ ಬರೆಯುವ ಬಗ್ಗೆ ಮಾಹಿತಿ ನೀಡಲಾಯಿತು.
ಸಾಂಪ್ರತ ಸ್ವಾಗತಾದಿಗಳ ನಂತರ ವೇದಿಕೆ ಹಂಚಿಕೊಂಡ ಡಾ ಸುರೇಶ ನೆಗಳಗುಳಿ ಇವರು ಮೊದಲಿಗೆ ಕವನದ ಲಕ್ಷಣಗಳನ್ನೂ ಕವನ ಮತ್ತು ಕವಿತೆಗಳ ವ್ಯತ್ಯಾಸವನ್ನೂ ಉದಾಹರಣೆಯ ಸಹಿತವಾಗಿ ವಿವರಿಸಿದರು. ಅವರು ಮುಂದುವರಿದು ಕವಿತೆಯು ಯಾವುದಾದರೂ ಅರ್ಥಬದ್ಧ ವಿಚಾರ ಪ್ರಧಾನವಾಗಿರುತ್ತದೆ ಹಾಗೂ ಕವನವು ಭಾವ ರಾಗ ಲಯ ಪ್ರಾಸ ಪ್ರಧಾನವಾಗಿರುತ್ತದೆ.ಪ್ರಾಸವೆಂಬುದು ತೀರಾ ಅಗತ್ಯ ಅಂಶವಲ್ಲವಾದರೂ ಕವನದ ಮೆರುಗು ಹೆಚ್ಚಿಸಲು ಅರ್ಥ ಕೆಡದಂತೆ ಆದಿ ಮಧ್ಯ ಅಂತ್ಯ ಪ್ರಾಸಗಳನ್ನು ಅಗತ್ಯಾನುಸಾರ ಹಾಕ ಬಹುದು.ಪ್ರಾಸಕ್ಕಾಗಿ ಒದ್ದಾಡಿ ಅರ್ಥ ಕೆಡಿಸ ಬಾರದು ಎಂದರು. ಕವಿತೆಯು ವಿಶೇಷವಾಗಿ ನವ್ಯ ನವ್ಯೋತ್ತರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದು ಗೋಪಾಲಕೃಷ್ಣ ಅಡಿಗರು ಈ ರೀತಿಯ ಸಾಹಿತ್ಯ ಪ್ರವರ್ತಕರಲ್ಲಿ ಶ್ರೇಷ್ಠ ರಾಗಿದ್ದರು ಎನ್ನುತ್ತಾ ಕಟ್ಟುವೆವು ಹೊಸ ನಾಡೊಂದನು ಎಂಬ ಕವಿತೆ ವಾಚಿಸಿ ತೋರಿಸಿದರು.
ಕವನವನ್ನು ಉದಾಹರಿಸುತ್ತಾ ಯಾವ ಮೋಹನ ಮುರಳಿ ಕರೆಯುತು ಕವನವನ್ನೂ ವಾಚಿಸಿದರು. ಹಾಗೆಯೇ ಇತರ ಚಿಕ್ಕ ಕವನಗಳನ್ನೂ ಉದಾಹರಿಸುತ್ತಾ ನಾಗರ ಹಾವೇ ಹಾವೊಳು ಹೂವೇ, ಬಣ್ಣದ ತಗಡಿನ ತುತ್ತೂರಿ ಎಂಬಿತ್ಯಾದಿ ಕವನ ವಾಚಿಸಿ ತೋರಿಸಿದರು.
ಕಾರ್ಯಾಗಾರದ ವಿಷಯಕ್ಕೆ ಬರುತ್ತಾ ಒಂದೊಂದೇ ಚಿತ್ರಗಳನ್ನು ತೋರಿಸಿ ಆ ಚಿತ್ರಕ್ಕೆ ಹೇಗೆ ಕವನ ಬರೆಯ ಬಹುದು ಎಂಬುದನ್ನು ಸ್ವರಚಿತ ಕವನದ ಮುಖಾಂತರ ವಿವರಿಸಿದರು. ಪಾರಿವಾಳ ಪತ್ರವನ್ನು ಹಿಡಿದು ಹಾರುವ ಚಿತ್ರಕ್ಕೆ ಕಪೋತ ಕಾಮನೆ,ಗಿಳಿ ಯ ಶುಕ ಸಂದೇಶ, ಬಳೆಯ ಬಗ್ಗೆ ಬಳೆಗೆ ಕೈಚಾಚು,ದೇಗುಲದ ಚಿತ್ರಕ್ಕೆ ಪರಮ+ ಆತ್ಮ ,ಶಿಲೆಯ ದೊಡ್ಡ ಆಕಾರಕ್ಕೆ ಪಳೆಯುಳಿಕೆ ಹೀಗೆ ಕೆಲವು ಚಿತ್ರ ಸಹಿತ ಕವನ ಹಾಗೂ ಶಿರೋನಾಮೆಯ ಮಹತ್ವವನ್ನೂ ತಿಳಿಸಿದರು.
ಅನಂತರ ಕೆಲವು ಚಿತ್ರಗಳನ್ನು ಕೊಟ್ಟು ತಾವೇ ಮನೆಯಲ್ಲಿ ಕವನ ಬರೆಯಲು ಸೂಚಿಸಿದರು.
ಹೀಗೆ ಕವನ ಬರೆಯುವ ಕಲೆಯ ಜಾಲತಾಣದ ಪಾಠವು ಸಾಂಗವಾಗಿ ನೆರವೇರಿತು.
*ಡಾ ಸುರೇಶ ನೆಗಳಗುಳಿ*
*ಶಸ್ತ್ರ ಚಿಕಿತ್ಸಕ ಪ್ರಾಧ್ಯಾಪಕ ಬರಹಗಾರ*
*ಮಂಗಳೂರು*