ಬಂಟ್ವಾಳ : ಮಕ್ಕಳ ಲೋಕ ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ವತಿಯಿಂದ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ
ತರಗತಿಗಳ ವಿದ್ಯಾರ್ಥಿಗಳಿಗಾಗಿ ಅಂತರ್ಜಾಲದ ಮೂಲಕ ಪ್ರತೀ ರವಿವಾರ ಅಪರಾಹ್ನ ಘಂಟೆ ಐದರಿಂದ ಸಾಹಿತ್ಯ ಕಮ್ಮಟಗಳು ನಡೆಯುತ್ತಿವೆ. ಇತ್ತೀಚೆಗೆ ಜರಗಿದ ಏಳನೇ ಕಾರ್ಯಕ್ರಮದಲ್ಲಿ ಡಾ ಸುರೇಶ ನೆಗಳಗುಳಿಯವರು ಚಿತ್ರ ಕವನಗಳ ರಚನೆಯ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿಗಳನ್ನು ನೀಡಿದರು.
ಕವನದ ಲಕ್ಷಣಗಳು, ಕವನ ಮತ್ತು ಕವಿತೆಗಳ ವ್ಯತ್ಯಾಸಗಳನ್ನು ಉದಾಹರಣೆಯ ಸಹಿತವಾಗಿ ವಿವರಿಸಿದರು. ಕವಿತೆಯು ಅರ್ಥಬದ್ಧ ವಿಚಾರ ಪ್ರಧಾನವಾಗಿರಬೇಕು, ಭಾವ ರಾಗ ಲಯ ಪ್ರಾಸ ಪ್ರಧಾನವಾಗಿರುತ್ತದೆ. ಪ್ರಾಸವೆಂಬುದು ತೀರಾ ಅಗತ್ಯವಾದ ಅಂಶವಲ್ಲವಾದರೂ ಕವನದ ಮೆರುಗು ಹೆಚ್ಚಿಸಲು ಅರ್ಥ ಕೆಡದಂತೆ ಆದಿ ಮಧ್ಯ ಅಥವಾ ಅಂತ್ಯ ಪ್ರಾಸಗಳನ್ನು ಅಗತ್ಯಾನುಸಾರ ಹಾಕ ಬಹುದು.ಪ್ರಾಸಕ್ಕಾಗಿ ಒದ್ದಾಡಿ ಕವನದ ಅರ್ಥ ಕೆಡಿಸ ಬಾರದು ಎಂದರು.
ಒಂದೊಂದೇ ಚಿತ್ರಗಳನ್ನು ತೋರಿಸಿ ಆ ಚಿತ್ರಕ್ಕೆ ಹೇಗೆ ಕವನ ಬರೆಯ ಬಹುದು ಎಂಬುದನ್ನು ಸ್ವರಚಿತ ಕವನದ ಮುಖಾಂತರ ವಿವರಿಸಿದರು. ಚಿತ್ರ ಸಹಿತ ಕವನ ಹಾಗೂ ಶಿರೋನಾಮೆಯ ಮಹತ್ವವನ್ನೂ ತಿಳಿಸಿದರು. ಕೆಲವು ಚಿತ್ರಗಳನ್ನು ನೀಡಿ ವಿದ್ಯಾರ್ಥಿಗಳು ಮನೆಯಲ್ಲಿ ಕವನ ರಚಿಸಲು ಸೂಚಿಸಿದರು.
ಮುಖ್ಯ ಅತಿಥಿಯಾಗಿ ಸಾಹಿತಿ ರಾಧಾಕೃಷ್ಣ ಉಳಿಯತಡ್ಕ ಮಾತನಾಡಿದರು. ಮಕ್ಕಳ ಲೋಕದ ಗೌರವಾಧ್ಯಕ್ಷ ಭಾಸ್ಕರ ಅಡ್ವಳ ಪಸ್ಥಿತರಿದ್ದರು. ಮಕ್ಕಳ ಲೋಕದ ಅಧ್ಯಕ್ಷ ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕ ರಮೇಶ ಎಂ ಬಾಯಾರು ಅಧ್ಯಕ್ಷತೆ ವಹಿಸಿದರು. ಕೃತಿಕಾ ಸ್ವಾಗಿತಿಸಿದರು. ರಂಜಿನಿ ಪ್ರಾರ್ಥನೆ ಮಾಡಿದರು. ಶ್ರವಣ್ ಸ್ವಾಗತಿಸಿದರು. ವೈಷ್ಣವಿ, ಮನೋಹರ್ ಮತ್ತು ಮಹೇಶ ಶಾಸ್ತ್ರಿ ವೇದಿಕೆಯಲ್ಲಿರುವವರನ್ನು ಪರಿಚಯಿಸಿದರು. ಕಾವ್ಯಶ್ರೀ ವಂದಿಸಿದರು.