ಭಕ್ತರೆಲ್ಲರೂ ಸಾನಿಧ್ಯದಲ್ಲಿ ಒಟ್ಟಾಗಿ ಪ್ರಾರ್ಥಿಸಿದಾಗ ದಿವ್ಯಶಕ್ತಿಗಳೆಲ್ಲ ಕೇಂದ್ರೀಕೃತವಾಗುವುದು. ಭಕ್ತಿಯಿಂದ ಎಲ್ಲರೂ ಸಂಘಟಿತರಾಗಿ ಕೆಲಸ ಮಾಡಿದಾಗ ನಿರ್ವಿಘ್ನವಾಗಿ ಬ್ರಹ್ಮಕಲಶದ ಕಾರ್ಯ ನೆರವೇರುವುದು ಎಂದು ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಸ್ವಾಮೀ ವಿವೇಕ ಚೈತನ್ಯಾನಂದಜೀ ನುಡಿದರು.
ಅವರು ಭಾನುವಾರ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ರಾಜಾಂಗಣದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಾಲಯ ಉದ್ಘಾಟಿಸಿ, ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಜ್ಞಾನಪ್ರಧಾನಾನಂದ ಸ್ವಾಮೀಜಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಉಪಾಧ್ಯಾಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಸುವರ್ಣ, ಕೋಶಾಧಿಕಾರಿ ಕವಿರಾಜ್ ಚಂದ್ರಿಗೆ, ಅರ್ಚಕ ರಾಧಾಕೃಷ್ಣ ಕಡಂಬಳಿತ್ತಾಯ ಮತ್ತಿತರರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ತಾರನಾಥ ಕೊಟ್ಟಾರಿ ತೇವು ಸ್ವಾಗತಿಸಿದರು. ಗೌರವಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸತೀಶ್ ಶೆಟ್ಟಿ ಮೊಡಂಕಾಪು ವಂದಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ದಾಮೋದರ ನೆತ್ತರಕೆರೆ ನಿರೂಪಿಸಿದರು.