ಬಂಟ್ವಾಳ: ಬಂಟ್ವಾಳ ಕ್ಷೇತ್ರ ಸಹಿತ ಜಿಲ್ಲೆಯಲ್ಲಿ ಯಾವುದೇ ಕೃತ್ಯ ನಡೆದಾಗ ಅದರಲ್ಲಿ ಮಾಜಿ ಸಚಿವ ರಮಾನಾಥ ರೈ ಅವರ ಹೆಸರನ್ನು ಎಳೆತಂದು ಅಪಪ್ರಚಾರ ಮಾಡುವ ಕಾರ್ಯ ನಡೆಯುತ್ತಿದ್ದು, ಅಂತಹ ಯಾವುದೇ ಕೃತ್ಯದಲ್ಲಿ ಶಾಮೀಲಾಗಿದ್ದರೆ ರಮಾನಾಥ ರೈ ವಿರುದ್ಧ ಸಿಬಿಐ ತನಿಖೆಯಾಗಲಿ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ನ ಪ್ರ.ಕಾರ್ಯದರ್ಶಿ, ಬಿ.ಸಿ.ರೋಡಿನ ನೋಟರಿ,ವಕೀಲ ಎಂ.ಚಂದ್ರಶೇಖರ ಪೂಜಾರಿ ಹೇಳಿದ್ದಾರೆ. ಶನಿವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕ್ಷುಲ್ಲಕ ವಿಚಾರಕ್ಕು ರೈಯವರ ಹೆಸರನ್ನು ಥಳಕು ಹಾಕಿ ಅವರನ್ನು ತೇಜೋವಧೆ ಮಾಡುವ ಪ್ರಯತ್ನ ನಡೆಸಿದರೆ ಕಾಂಗ್ರೆಸ್ ಪಕ್ಷ ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.
ತೈಲ,ಗ್ಯಾಸ್ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದು,ಬೆಲೆ ಏರಿಕೆಯನ್ನು ನಿಭಾಯಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದ ಅವರು ದೇಶದ ಆರ್ಥಿಕ ಪರಿಸ್ಥಿತಿಯು ಪತನದ ಅಂಚಿಗೆ ತಲುಪಿದೆ ಎಂದು ವಾಗ್ದಾಳಿ ನಡೆಸಿದರು.
ದೇಶದಲ್ಲಿ ನಿರುದ್ಯೋಗ ಸಮಸ್ಯೆಯಿಂದ ಯುವಜನರು,ವಿದ್ಯಾವಂತರು ಪರದಾಡುತ್ತಿದ್ದಾರೆ.2 ಕೋಟಿ ಉದ್ಯೋಗ ಸೃಷ್ಠಿಸುವ ಭರವಸೆ ನೀಡಿದ್ದ ಕೇಂದ್ರ ಸರಕಾರ ಎಲ್ಲಿ ಉದ್ಯೋಗ ಸೃಷ್ಟಿ ಮಾಡಿದೆ ಎಂದು ಪೂಜಾರಿ ಪ್ರಶ್ನಿಸಿದರು.
ದೇವಸ್ಥಾನ,ದೈವಸ್ಥಾನ,ಧಾರ್ಮಿಕ ಕೇಂದ್ರವನ್ನು ನೆಲಸಮ ಮಾಡುವ ಮೂಲಕ ರಾಜ್ಯ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ.ಇದಕ್ಕೆ ಅಧಿಕಾರಿಗಳನ್ನು ಹೊಣೆ ಮಾಡಲಾಗುತ್ತಿದೆ.ಕಾಂಗ್ರೆಸ್ ಸರಕಾರ ಇದ್ದಾಗಲು ಸು.ಕೋ.ಆದೇಶ ಕೊಟ್ಟಿದ್ದರೂ ಕಾಂಗ್ರೆಸ್ ದೇವಸ್ಥಾನವನ್ನು ತೆರವುಗೊಳಿಸುವಂತ ಕೆಲಸ ಮಾಡದೆ ಅದರ ರಕ್ಷಣೆ ಮಾಡಿತ್ತು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬೂಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ,ಪ್ರಮುಖರಾದ ಚಿತ್ತರಂಜನ್ ಶೆಟ್ಟಿ,ಜಗನ್ನಾಥ್ ತುಂಬೆ,ಲೋಕೇಶ್ ,ವೆಂಕಪ್ಪ ಪೂಜಾರಿ ಮೊದಲಾದವರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here