ಬಂಟ್ವಾಳ: ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸಿರುವ 700 ಕಾರ್ಮಿಕರ ಪೈಕಿ ಈಗಾಗಲೇ 450 ಕ್ಕೂ ಹೆಚ್ಚು ಕಾರ್ಮಿಕರಿಗೆ ಕಿಟ್ ವಿತರಿಸಲಾಗಿದೆ. ಇಲಾಖೆಯಲ್ಲಿ ನೋಂದಾವಣೆಯಾದ ಸದಸ್ಯರಿಗೆ ಮಾತ್ರವೇ ಕಿಟ್ ವಿತರಿಸಲಾಗಿದ್ದು, ಈ ಕಿಟ್ ವಿತರಣೆಯಲ್ಲಿ ಯಾವುದೇ ರೀತಿಯ ತಾರತಮ್ಯ ಆಗಿಲ್ಲ. ಅಂತಹ ಯಾವುದೇ ತಾರತಮ್ಯವಾಗಿದ್ದಲ್ಲಿ ಕಾಂಗ್ರೆಸ್ ನಾಯಕರು ಇದಕ್ಕೆ ಪೂರಕ ದಾಖಲೆಯನ್ನು ಪಂಚಾಯತ್ ಗೆ ಒಪ್ಪಿಸಲಿ ಎಂದು ನರಿಕೊಂಬು ಗ್ರಾ. ಪಂ. ಅಧ್ಯಕ್ಷೆ ವಿನುತಾ ಪುರುಷೋತ್ತಮ ನಾಯ್ಕ್ ಸವಾಲೆಸೆದಿದ್ದಾರೆ. ಗುರುವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಮಿಕರ ಕಿಟ್ ದಿನಸಿ ಅಂಗಡಿಯಲ್ಲಿ ಪತ್ತೆಯಾಗಿದೆ ಎಂದು ಕಾಂಗ್ರೆಸ್ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಅಪಪ್ರಚಾರ ಮಾಡುತ್ತಿದ್ದು, ಇದನ್ನು ಪಂಚಾಯತ್ ಆಡಳಿತ ಹಾಗೂ ಬಿಜೆಪಿ ಖಂಡಿಸುತ್ತದೆ ಎಂದರು. ದಿನಸಿ ಅಂಗಡಿಯಲ್ಲಿ ಕಿಟ್ ದಾಸ್ತಾನಿಟ್ಟು ಗೋಲ್ ಮಾಲ್ ನಡೆಸಿದೆ ಎಂಬ ಕಾಂಗ್ರೆಸ್ ನ ಆರೋಪ ಶುದ್ದ ಸುಳ್ಳು ಎಂದು ಸ್ಪಷ್ಟಪಡಿಸಿದ ಅಧ್ಯಕ್ಷೆ ವಿನುತಾ ಅಷ್ಟು ಸಂಖ್ಯೆಯ ಕಿಟ್ ಪಂಚಾಯತ್ ನಲ್ಲಿ ದಾಸ್ತಾನಿಡುವುದು ಕಷ್ಟ ಅಸಾಧ್ಯವಾಗಿ ರುವುದರಿಂದ ಶೇಡಿಗುರಿಯಲ್ಲಿರುವ ಸೇವಾ ಕೇಂದ್ರದಲ್ಲಿ ದಾಸ್ತಾನಿಟ್ಟಿದ್ದು ನಿಜ ಎಂದು ಅವರು ತಿಳಿಸಿದ್ದಾರೆ.
ಇದೇ ಕೇಂದ್ರದಲ್ಲಿ ಈ ಹಿಂದೆಯು ಉಚಿತ ಆಯುಷ್‌ಮಾನ್ ಕಾರ್ಡ್ ನೋಂದಾವಣೆ, ಸರಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಹಲವಾರು ಕಾರ್ಯಕ್ರಮಗಳು ನಡೆದಿದೆ. ಈ ಕೇಂದ್ರ ಹಾಗೂ ದಿನಸಿ ಅಂಗಡಿ ಸಾಕಷ್ಟು ದೂರ ಇದ್ದು ಯಾರೋ ಕಿಡಿಗೇಡಿಗಳು ವೀಡಿಯೋ ಚಿತ್ರೀಕರಿಸಿ ಬಳಿಕ ಅದನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಈ ಕಿಟ್ ವಿತರಣೆಯಲ್ಲಿ ಪಕ್ಷದ ಕಾರ್ಯಕರ್ತರು ಯಾವುದೇ ಗೋಲ್‌ಮಾಲ್ ನಡೆಸಿಲ್ಲ, ಗೋಲ್‌ಮಾಲ್ ನಡೆದಿದೆ ಎಂದಾದರೆ ಕಾಂಗ್ರೆಸ್ಸಿಗರು ಅದಕ್ಕೆ ಪೂರಕ ದಾಖಲೆ ಇಟ್ಟು ಮಾತನಾಡಬೇಕು, ವಿನಾ ಕಾರಣ ಗ್ರಾಮದ ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡದಂತೆ ತಾಕೀತು ಮಾಡಿದ ಅವರು ಕಾರ್ಮಿಕ ಇಲಾಖೆಯಿಂದ ಬಂದಿರುವ ಕಿಟ್ ಅನ್ನು ಪಕ್ಷ ,ಬೇಧ ಮರೆತು ಎಲ್ಲರಿಗೂ ವಿತರಿಸಲಾಗಿದೆ. ಇದಕ್ಕೆ ಬೇಕಾದ ದಾಖಲೆಯ ನಮ್ಮಲ್ಲಿದೆ ಎಂದರು. ಸರಕಾರದ ವತಿಯಿಂದ ಕಾರ್ಮಿಕ ಇಲಾಖೆ ಮೂಲಕ ಕಾಾರ್ಮಿಕರಿಗೆ ಕಿಟ್ ವಿತರಿಸಲಾಗುತ್ತಿದ್ದು, ಶಾಸಕರು,ನರಿಕೊಂಬು ಪಂಚಾಯತ್ ಆಡಳಿತದ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಖಂಡಿಸಿದ ಅವರು ನರಿಕೊಂಬು ಪಂಚಾಯತ್ ವ್ಯಾಪ್ತಿಯಲ್ಲಿ ನೆಲಕಚ್ಚಿರುವ ಕಾಂಗ್ರೆಸ್ ತಮ್ಮ ಅಸ್ತಿತ್ವಕ್ಕಾಗಿ ಮುಂಬರುವ ಜಿಪಂ.,ತಾಪಂ ಚುನಾವಣೆಯನ್ನು ಗಮನದಲ್ಲಿಟ್ಟು ಕಾಂಗ್ರೆಸ್ ನಾಯಕರು ಇಂತಹ ಕ್ಷುಲ್ಲಕ ರಾಜಕಾರಣದಲ್ಲಿ ತೊಡಗಿಸಿದ್ದಾರೆ ಎಂದು ಟೀಕಿಸಿದರು.