


ಸಾವೇನೊ ಎದುರು
ಬಂದು ನಿಂತಿತ್ತು.,
ಸಾವನ್ನೇ ಎದುರು ನೋಡುತ್ತಿದ್ದಾಗ..!
ದುಡ್ಡಿದೆ, ತಿನ್ನುವಂತಿಲ್ಲ
ದಿಂಬಿದೆ, ನಿದ್ದೆ ಇಲ್ಲ
ಮಾತಿದೆ, ಮಾತಾಡುವವರಿಲ್ಲ
ನಗು ಬೇಕಿದೆ ಕೊಡುವವರಿಲ್ಲ..
ನೆಮ್ಮದಿಯ ಹುಡುಕಾಟದಲ್ಲಿ
ಸಾಗಿ ಬಂದ ಹಾದಿಯಲ್ಲಿ
ಏನು ಸಿಗದಿದ್ದಾಗ
ಸಾವನ್ನು ಹುಡುಕಾಡಿದ್ದು..
ಈಗ ಸಾವು ಬಂದು ನಿಂತಿದೆ..
ಉಸಿರುಕಟ್ಟಿದ್ದಂತೆ..
ಹೃದಯ ಬಡಿದಾಡಲು ಹರಸಾಹಸ ಪಟ್ಟಂತೆ..
ಕೈ ಕಾಲು ಬಲ ಕಳೆದು ಕೊಂಡಂತೆ
ಅಂತು ಸಾವು ಅಪ್ಪುವ ಕಾಲಕ್ಕೆ
ದೇಹದಲ್ಲೇನೋ ಆಗು ಹೋಗುಗಳು..!
ಸಾವನ್ನು ಕೈ ಬೀಸಿ
ಕರೆಯುತ್ತಿದ್ದೆ,
ಕೈ ಹಿಡಿದು ಸಾಗೆಂದು..
ಕೈ ಚಾಚಿ ನಿಂತಿದ್ದೆ,
ಸಾವೇ ನನ್ನ ತಬ್ಬಿ ಬಿಡೆಂದು..
ಯಮನನ್ನು ಪ್ರಾರ್ಥಿಸಿದ್ದೆ,
ಕೊರಳ ಬಿಗಿ ಗೊಳಿಸೆಂದು..
ಆದರೆ ಸಾವು ಮುಂದೆ ನಿಂತಾಗ…!?
ಇವತ್ತೊಂದು ದಿನ
ಬದುಕಿದರೆ ಸಾಕಿತ್ತು…
ನಿನ್ನೆಯ ಕನಸು ಈಡೇರಬಹುದೇನೋ..
ಒಂದಷ್ಟು ಕೂಡಿಟ್ಟ ಹಣವನ್ನು
ಖರ್ಚು ಮಾಡಬಹುದಿತ್ತೆನೋ..
ತಪ್ಪುಗಳನ್ನು ತಿದ್ದಿಕೊಳ್ಳಬಹುದಿತ್ತು
ಅವನಲ್ಲೊಂದು ಕ್ಷಮೆ ಕೇಳೋದಿತ್ತು.
ಇವನಲ್ಲೊಂದು ಸತ್ಯ ಹೇಳೋದಿತ್ತು.
ಇದ್ದದ್ದನ್ನ ದಾನ ಮಾಡಿ
ಬೆನ್ನು ತಟ್ಟಿಸಿಕೊಳ್ಳಬಹುದಿತ್ತು..
ಸಾವನ್ನು ತಳ್ಳುವ
ಶಕ್ತಿ ಇದ್ದರೆ
ಸಾವು ಹತ್ತಿರ ಬರಬಹುದೇ..!?
✍ಯತೀಶ್ ಕಾಮಾಜೆ


