ಬಂಟ್ವಾಳ: ವಗ್ಗ ಸೇರಾ ಕ್ಲಿನಿಕ್‌ನ ಆಯುರ್ವೇದ ವೈದ್ಯ,ವಗ್ಗ ನಿವಾಸಿ ಡಾ.ಪ್ರವೀಣ್ ಸೇರಾ (67)ಅವರು ಅಸೌಖ್ಯದಿಂದ ಸೆ.6ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಶಿಕ್ಷಕಿ ಪತ್ನಿ ರೊಸಾಲೀನಾ ಮೊರಾಸ್, ವೈದ್ಯರಾದ ಪುತ್ರ ಡಾ. ರಾಕೇಶ್ ಸೇರಾ , ಪುತ್ರಿ ಡಾ.ರಿಯೋನಾ ಸೇರಾ ಅವರನ್ನು ಅಗಲಿದ್ದಾರೆ.
ಅವರ ತಂದೆ ನಾಟಿ ವೈದ್ಯರಾಗಿದ್ದು, ಸೇರಾ ಅವರು ಬಾಲ್ಯದಲ್ಲೇ ಔಷಧಿ ಗಿಡಗಳ ಪರಿಚಯ ಮಾಡಿಕೊಂಡು ತಂದೆ ಇಲ್ಲದ ಸಂದರ್ಭದಲ್ಲಿ ಎಲುಬು ಮುರಿತದ ಜನ ಬಂದಾಗ ಅವರೇ ಕಟ್ಟು ಹಾಕಿ, ಔಷಧ ನೀಡುತ್ತಾ ನಾಟಿ ಔಷಧ ಕಲೆಯನ್ನು ಕರಗತ ಮಾಡಿಕೊಂಡರು. ಮುಂದೆ ಪಿಯುಸಿ ಬಳಿಕ ಹೋಮಿಯೋಪಥಿ ಮತ್ತು ಆರ್ಯುವೇದ ವೈದ್ಯಕೀಯ ಶಿಕ್ಷಣ ಪಡೆದು ಬಿಹಾರ ಮೆಡಿಕಲ್ ಕೌನ್ಸಿಲಿನಲ್ಲಿ ನೊಂದಾವಣೆ ಮಾಡಿದರು (ಆರ್.ಎಂ.ಪಿ).1981ರಲ್ಲಿ ಅಲ್ಲಿಪಾದೆಯಲ್ಲಿ ವೈದ್ಯಕೀಯ ವೃತ್ತಿ ಪ್ರಾರಂಭಿಸಿ, ಬಳಿಕ ವಗ್ಗಕ್ಕೆ ಸ್ಥಳಾಂತರಗೊಂಡು ಸೇರಾ ಫಾರ್ಮಸ್ಯೂಟಿಕಲ್ಸ್ ಎಂಬ ಔಷಧಿ ತಯಾರಿಕಾ ಘಟಕ ಆರಂಭಿಸಿದರು. ಕೈಗೆಟಕುವ ದರದಲ್ಲಿ ಔಷಧ ತಯಾರಿಸಿ ಬಡರೋಗಿಗಳಿಗೆ ಸಹಾಯ ಮಾಡುತ್ತಿದ್ದು, ಸೇರಾ ಡಾಕ್ಟರ್ ಎಂದು ಖ್ಯಾತರಾಗಿದ್ದರು.
ಅವರಿಗೆ ವೈದ್ಯ ಸೇವಾರತ್ನ ರಾಷ್ಟ್ರೀಯ ಪ್ರಶಸ್ತಿಯೊಂದಿಗೆ ಚಿನ್ನದ ಪದಕ ದೊರಕಿತ್ತು. ಅವರು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಜಿ ಉಪಾಧ್ಯಕ್ಷರಾಗಿದ್ದರು.
ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮತ್ತಿತರರು ಮೃತರ ಅಂತಿಮ ದರ್ಶನ ಪಡೆದರು.