Wednesday, October 18, 2023

ಶಿಕ್ಷಕರ ದಿನಾಚರಣೆಯ ಹಿಂದೆ-ಮುಂದೆ

Must read

ಲೇ: ರಮೇಶ ಎಂ ಬಾಯಾರು ಎಂ.ಎ, ಬಿ.ಇಡಿ,

1963ರಿಂದ 1967ರ ತನಕದ ಅವಧಿಯಲ್ಲಿ ಭಾರತದ ಘನ ರಾಷ್ಟ್ರ ಪತಿಯಾಗಿ ದೇಶವನ್ನು ಮುನ್ನಡೆಸಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ನಮ್ಮ ದೇಶದ ಪ್ರಾತಃಸ್ಮರಣೀಯರೆನ್ನಬಹುದಾದ ಓರ್ವ ಶ್ರೇಷ್ಠ ಚಿಂತಕ, ಮೇರು ತತ್ವಜ್ಞಾನಿ, ಹಾಗೂ ಮಹಾನ್ ರಾಷ್ಟ್ರ ಹಿತವಾದಿ. ಅವರು ಹುಟ್ಟಿದುದು ೧೮೮೮ ಸೆಪ್ಟೆಂಬರ್ ಐದರಂದು. ದೇಶದ ಭವಿಷ್ಯವು ತರಗತಿ ಕೋಣೆಗಳಲ್ಲಿ ರೂಪಿಸಲ್ಪಡುತ್ತದೆಂಬುದಾಗಿ ನಿತ್ಯವೂ ಪ್ರತಿಪಾದಿಸುತ್ತಿದ್ದ ಅವರು ತನ್ನ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ಕರೆನೀಡುವುದರೊಂದಿಗೆ, ರಾಷ್ಟ್ರ ಶಿಲ್ಪಿಗಳಾದ ಶಿಕ್ಷಕರಿಗೆ ಸಾರ್ವಜನಿಕವಾದ ಸ್ಥಾನಮಾನಗಳನ್ನು ದೊರಕಿಸಿಕೊಟ್ಟ ಧೀಮಂತ ಹೃದಯಿ. ಕೊರೋನಾ ಕರಿನೆರಳಿನಡಿಯಲ್ಲಿ ಕಳೆದ ಮತ್ತು ಈ ಸಾಲಿನ ಸೆಪ್ಟೆಂಬರ್ ಐದನೆಯ ದಿನಾಂಕ ಮಸುಕಾಗಿದೆ. ಶಿಕ್ಷಕ ದಿನಾಚರಣೆ ಸರಳವಾಗಿದೆ. ತಾಲೂಕು ಜಿಲ್ಲೆ ರಾಜ್ಯದ ಮುಖ್ಯನಗರದಲ್ಲಿಯೂ ಸರಳವಾಗಿ ಶಿಕ್ಷಕ ದಿನಾಚರಣೆಯು ನಡೆಯುತ್ತಿದೆ.
ಗಣೇಶ ಹಬ್ಬ, ಯುಗಾದಿ ಹಬ್ಬ, ರಂಝಾನ್ ಹಬ್ಬ, ಗೋಕುಲಾಷ್ಟಮಿ, ಕ್ರಿಸ್‌ಮಸ್ ಇತ್ಯಾದಿ ಹಬ್ಬಗಳಂತೆ ಶಿಕ್ಷಕರ ಹಬ್ಬವಾಗಿ ಶಿಕ್ಷಕರ ದಿನದ ಆಚರಣೆಯಾಗಬೇಕೆಂಬ ಆಶಯ ಡಾ. ಸರ್ವಪಲ್ಲಿಯವರಿಗಿತ್ತು. ರಾಷ್ಟ್ರ ನಿರ್ಮಾಣ ಕಾರ್ಯದ ಜವಾಬ್ದಾರಿಯನ್ನು ಹೊತ್ತಿರುವ ಶಿಕ್ಷಕರಿಗೆ ಹೆಚ್ಚಿನ ಪ್ರೇರಣೆ ನೀಡಿ, ಅವರ ಪರಿಶ್ರಮಗಳನ್ನು ಗೌರವಿಸುವ ಒಂದು ವಿಶೇಷ ದಿನವಾಗಿ ಶಿಕ್ಷಕರ ದಿನಾಚರಣೆಯು ಬಹುತೇಕ ರಾಷ್ಟ್ರಗಳಲ್ಲಿ ಇಪ್ಪತ್ತನೇ ಶತಮಾನದ ಆರಂಭದಿಂದ ಆಚರಿಸಲ್ಪಡ ತೊಡಗಿತು. ಆದರೆ ಆ ದಿನಾಂಕಗಳು ಬೇರೆ ಬೇರೆಯಾಗಿರುವುದನ್ನು ನಾವು ಗಮನಿಸಬೇಕು. ಭಾರತದಲ್ಲಿ ಮೊತ್ತ ಮೊದಲಿಗೆ ೧೯೬೨ ಸೆಪ್ಟೆಂಬರ್ ಐದರಂದು ಶಿಕ್ಷಕರ ದಿನಾಚರಣೆಯನ್ನು ಸಾರ್ವಜನಿಕವಾಗಿ ಆಚರಿಸುವುದನ್ನು ಸರಕಾರ ಕೈಗೆತ್ತಿಕೊಂಡಿದೆ. ರಾಷ್ಟ್ರಪತಿಯಾಗಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅಧಿಕಾರ ವಹಿಸಿದ ವರ್ಷವೂ ೧೯೬೨ ಎಂಬುದು ಗಮನೀಯವಾದ ವಿಚಾರವಾಗಿದೆ. ಹಿಂದೆ ಗುರು ಪೂರ್ಣಿಮೆಯಂದು ಗುರುಸ್ಮರಣೆಗಳು ಧಾರ್ಮಿಕಹಿನ್ನೆಲೆಯಲ್ಲಿ ಜರಗುತ್ತಲಿದ್ದವು ಅಲ್ಲದೆ ಈಗಲೂ ಈ ಆಚರಣೆ ಚಾಲ್ತಿಯಲ್ಲಿದೆ.
ಹೊಟ್ಟೆ ಹೊರೆಯುವ ಒಂದು ಉದ್ಯೋಗವಾಗಿ ಸಮಾಜವು ಅಧ್ಯಾಪನವನ್ನು ಪರಿಗಣಿಸಬಾರದು. ಅಧ್ಯಾಪನದಲ್ಲಿ ತೊಡಗಿಕೊಂಡವರೂ ತಮ್ಮ ವೃತ್ತಿಯ ಘನತೆ ಗಾಂಭೀರ್ಯತೆಗಳನ್ನು ಉಳಿಸುವುದರೊಂದಿಗೆ ಹೆಚ್ಚಿಸಿಕೊಳ್ಳುತ್ತಿರಬೇಕು. ಶಿಕ್ಷಣದ ಪ್ರಧಾನ ಆಶಯಗಳಾದ ಓದು, ಬರಹ ಮತ್ತು ಅಂಕಗಣಿತಗಳ ಜೊತೆಗೆ ಮಕ್ಕಳನ್ನು ಸುಸಂಸ್ಕೃತ ವ್ಯಕ್ತಿಗಳನ್ನಾಗಿ ಸಂಸ್ಕರಿಸಲು ಅಧ್ಯಾಪಕರಿಗೆ ಬೆಂಬಲವಾಗಿ ಶಿಕ್ಷಕರ ದಿನಾಚರಣೆಗಳಿರಬೇಕು. ಸಮಾಜದ ಶಿಸ್ತು, ನ್ಯಾಯ ಪಾಲನತ್ವ, ಸಹನಶೀಲತೆಗಳಿಗೆ ಶಿಕ್ಷಕರಾದವರು ತಾವೇ ಆದರ್ಶವಾಗಿದ್ದುಕೊಂಡು ಅವುಗಳನ್ನು ಮಕ್ಕಳಲ್ಲೂ ತುಂಬಿ ಅವರನ್ನು ಅರಳಿಸಬೇಕು. ಸಮಾಜ, ಸರಕಾರಗಳು ಶಿಕ್ಷಕರ ಸಮಾಜ ಕಟ್ಟುವ ಕಾಯಕದಲ್ಲಿ ತಮ್ಮ ಪಾಲನ್ನೂ ನೀಡಿ ಉತ್ತೇಜಿಸುತ್ತಿರ ಬೇಕು. ಶಿಕ್ಷಣದ ಮಹತ್ವದ ಅರಿವನ್ನು ಜಾಗೃತಾವಸ್ಥೆಯಲ್ಲಿರಿಸ ಬೇಕಾದರೆ ಶಿಕ್ಷಕ ದಿನಾಚರಣೆ ಕೇವಲ ಶಿಕ್ಷಕರು ಮಾತ್ರವೇ ಸೇರಿ ಆಚರಿಸಲ್ಪಡುವ ಹಬ್ಬವಾಗಿರದೆ ಅದೊಂದು ಸಾಮುದಾಯಿಕ ಹಬ್ಬವಾಗಿ ಆಚರಿಸಲ್ಪಡಬೇಕೆಂಬುದು ಡಾ. ಸರ್ವಪಲ್ಲಿಯವರ ಉದ್ದೇಶವಾಗಿತ್ತು.
ಆದರೆ ಇಂದು ಶಿಕ್ಷಕ ದಿನಾಚರಣೆಗಳು ಈ ಉದ್ದೇಶಗಳನ್ನು ಈಡೇರಿಸುವುದರಲ್ಲಿ ಸಫಲತೆಯನ್ನು ಹೊಂದಿವೆಯೇ? ಸಮುದಾಯದ ಸಹಭಾಗಿತ್ವದೊಂದಿಗೆ ವೈಭವೋಪೇತ ಶಿಕ್ಷಕ ದಿನಾಚರಣೆಗಳು ಆಚರಿಸಲ್ಪಡುತ್ತಿವೆಯೇ? ಸಮಾಜದಲ್ಲಿ ಶಿಕ್ಷಕರ ಸ್ಥಾನಮಾನಗಳನ್ನು ಎತ್ತರಿಸುವಲ್ಲಿ, ಬಿತ್ತರಿಸುವಲ್ಲಿ ಶಿಕ್ಷಕ ದಿನಾಚರಣೆಗಳು ಮಹತ್ವ ಪಡೆಯುತ್ತಿವೆಯೇ? ಶಿಕ್ಷಕರಲ್ಲಿರಬೇಕಾದ ಬದ್ಧತೆ, ಪ್ರಾಮಾಣಿಕತೆಗಳನ್ನು ಬೆಳೆಸುವಲ್ಲಿ ಶಿಕ್ಷಕ ದಿನಾಚರಣೆಗಳು ಪಾತ್ರವಹಿಸುತ್ತಿವೆಯೇ? ಇಂತಹ ಅನೇಕ ಜಿಜ್ಞಾಸೆಗಳುದಯಿಸುವುದಿಲ್ಲವೇ?
ಶಿಕ್ಷಕ ದಿನಾಚರಣೆಗಳು ಶಿಕ್ಷಕರ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ವೇದಿಕೆಗಳಾಗದೆ, ಪ್ರೊಟೋಕಾಲ್ ಆಧರಿತವಾಗಿ ಬರಲಿರುವ ಅತಿಥಿ ಅಭ್ಯಾಗತರನ್ನು ಕಾಯುವ ವ್ಯರ್ಥದಿನವಾಗಿ ಮುಗಿದರೆ ಅದು ಹಬ್ಬವಾಗಲು ಸಾಧ್ಯವೇ? ಸಮುದಾಯದವರಾರೂ ಇರದೇ ಇರುವ, ಶಿಕ್ಷಕರು ಮಾತ್ರವೇ ಇರುವ ಸಭೆಯಲ್ಲಿ ಶಿಕ್ಷಕರನ್ನು ಹೊಗಳುವುದರಿಂದಾಗಲೀ, ಶಿಕ್ಷಣದಲ್ಲಿ ಶಿಕ್ಷಕರ ಮತ್ತು ಸಮುದಾಯದ ಹೊಣೆಗಾರಿಕೆ ಹೇಗಿರಬೇಕೆಂಬಿತ್ಯಾದಿಯಾಗಿ ಏಕಮುಖವಾಗಿ ಮೂಡಿ ಬರುವ ಚಿಂತನೆಗಳು ಶೈಕಣಿಕ ಪೋಷಕಾಂಶ ಆಗಬಹುದೇ? ಆದುದರಿಂದ ಶಿಕ್ಷಕ ದಿನಾಚರಣೆಗಳು ಸಮುದಾಯಾಧಾರಿತವಾದ ಕಾರ್ಯಕ್ರಮಗಳಾಗಬೇಕು. ಸಮುದಾಯ ಮತ್ತು ಶಿಕ್ಷಕರು ಸೇರಿಕೊಂಡು ಶಿಕ್ಷಣದ ಕುರಿತಾದ ಚಿಂತನ ಮಂಥನ ನಡೆಸಬೇಕು. ಶಿಕ್ಷಕ ದಿನಾಚರಣೆ ಮಕ್ಕಳ ವ್ಯಕ್ತಿತ್ವ ರೂಪಿಸುವ ಚಿಂತನಾ ಸಮಾರಂಭವಾಗಬೇಕೇ ಹೊರತು ಕೇವಲ ಸಭೆಯಾಗಿರಬಾರದು. ಕಾಟಾಚಾರಕ್ಕೆ ನಡೆಸುವ ಶಿಕ್ಷಕ ದಿನಾಚರಣೆಗಳು ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಯಾವುದೇ ಆಶಯ ಆಕಾಂಕ್ಷೆಗಳನ್ನು ಈಡೇರಿಸದು. ಶಿಕ್ಷಕ ದಿನಾಚರಣೆಯ ಹಿಂದು ಮುಂದುಗಳನ್ನು ಗಂಭೀರವಾಗಿ ಪರಿಗಣಿಸಬೇಕಾದುದರ ಅಗತ್ಯವಿದೆ ಎಂಬುದೇ ನಮ್ಮ ಬಯಕೆ.

More articles

Latest article