ಬಂಟ್ವಾಳ: ಇತ್ತೀಚೆಗೆ ನಿಧನರಾದ ಬಂಟ್ವಾಳ ತಾಲೂಕಿನ ಸುವರ್ಣನಾಡು ಶ್ರೀ ದುರ್ಗಾಂಬಿಕಾ ಸಿದ್ಧೇಶ್ವರಿ ದೇವಸ್ಥಾನದ ಧರ್ಮದರ್ಶಿ, ಸೊರ್ನಾಡು ಮೇಳದ ಸಂಸ್ಥಾಪಕ, ಯಕ್ಷಗಾನ ಕಲಾವಿದ ಶ್ರೀ ವಿಶ್ವನಾಥ ಸ್ವಾಮೀಜಿ ಅವರಿಗೆ ಗೌರವ ಸಂಸ್ಮರಣೆ, ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ಸುವರ್ಣನಾಡು ದೇವಸ್ಥಾನದ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಹಿರಿಯ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಅವರು ನುಡಿನಮನ ಸಲ್ಲಿಸಿ ಮಾತನಾಡಿ, ಶ್ರೀ ವಿಶ್ವನಾಥ ಸ್ವಾಮೀಜಿ ಅವರು ದೀಪಸ್ತಂಭ ಸದೃಶ ಆದರ್ಶ ವ್ಯಕ್ತಿತ್ವದವರಾಗಿದ್ದು, ಎಲ್ಲರಿಗೂ ಬೆಳಕು ನೀಡಿದ್ದಾರೆ. ಗಣೇಶ ದುರ್ಗಾಂಭಾ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿ, ನೂರಾರು ಕಲಾವಿದರಿಗೆ ಆಶ್ರಯದಾತರಾಗಿ, ೫೦ ವರ್ಷಕ್ಕೂ ಮಿಕ್ಕಿ ಮೇಳ ನಡೆಸಿ ಕಲಾಭಿಮಾನಿಗಳ ಪ್ರೀತ್ಯಾಧಾರಗಳಿಗೆ ಪಾತ್ರರಾದವರು. ಕ್ಷೇತ್ರ ನಿರ್ಮಾಣಗೊಳಿಸಿ ಸಾಮಾಜಿಕ,ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕತೆ ಜಾಗೃತಿಗೊಳಿಸಿದ ಅವರು ಸ್ಮರಣೀಯರು ಎಂದು ಹೇಳಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ, ನಿಸ್ವಾರ್ಥ ಮನೋಭಾವದಿಂದ ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿ, ತಮ್ಮ ಆದರ್ಶಗಳಿಂದ ಮಾರ್ಗದರ್ಶಕರಾದ ಸ್ವಾಮೀಜಿ ಅವರ ಆದರ್ಶವನ್ನು ಉಳಿಸಿ, ಬೆಳೆಸುವ ಕಾರ್ಯ ನಡೆಯಬೇಕು ಎಂದರು.
ನಿವೃತ್ತ ಶಿಕ್ಷಕ ರಮೇಶ್ಚಂದ್ರ ಭಂಡಾರಿ ಬೆಳ್ಳೂರು, ಆನಂದ ಶೆಟ್ಟಿ ಸೊರ್ನಾಡು, ಯಕ್ಷ ಸಂಘಟಕ ಜನಾರ್ದನ ಅಮ್ಮುಂಜೆ ಅವರು ನುಡಿ ನಮನ ಸಲ್ಲಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ನ್ಯಾಯವಾದಿ ಅಶ್ವನಿ ಕುಮಾರ್ ರೈ, ಪ್ರಮುಖರಾದ ಸಂಕಪ್ಪ ಶೆಟ್ಟಿ ಬಿ.ಸಿ.ರೋಡ್, ಸುದರ್ಶನ್ ಜೈನ್, ಸದಾನಂದ ಶೆಟ್ಟಿ, ಜಗದೀಶ ಆಳ್ವ ಅಗ್ಗೊಂಡೆ, ದೇವಪ್ಪ ಕುಲಾಲ್, ಮೋಹನ್ ಶೆಟ್ಟಿ ಪಂಜಿಕಲ್ಲು, ಲಕ್ಷ್ಮೀಧರ ಶೆಟ್ಟಿ, ಲಕ್ಷ್ಮೀನಾರಾಯಣ ಗೌಡ,ದಿನೇಶ್ ಶೆಟ್ಟಿ ಬುಡೋಳಿ, ಮಿಥುನ್,ಉಮೇಶ್ ಶೆಟ್ಟಿ,ಪರಿಮೊಗರುಗುತ್ತು ಮತ್ತು ಕೋಂಞಬೆಟ್ಟು ಗುತ್ತು ಮನೆಯವರು, ಸೊರ್ನಾಡು ಮೇಳದ ಯಕ್ಷಗಾನ ಕಲಾವಿದರು, ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಸ್ವಾಮೀಜಿ ಅವರ ಸಂಸ್ಮರಣಾರ್ಥ ಇಚ್ಛಾ ಮರಣಿ ಯಕ್ಷಗಾನ ತಾಳಮದ್ದಳೆ ನಡೆಯಿತು.