Tuesday, October 17, 2023

ಕೋವಿಡ್ ಪ್ರಕರಣ ಹೆಚ್ಚಾದರೆ ಅಧಿಕಾರಿಗಳೇ ಹೊಣೆ: ಸಚಿವ ಅಂಗಾರ

Must read

ಬಂಟ್ವಾಳ: ಕೋವಿಡ್ ನಿರ್ವಹಣೆಯ ದೃಷ್ಟಿಯಿಂದ ಸ್ಥಳೀಯವಾಗಿ ಹುದ್ದೆಗಳ ಭರ್ತಿ, ಇತರ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದ್ದು, ಈಗ ಸುಮ್ಮನೇ ಕುಳಿತು ಪ್ರಕರಣಗಳು ಹೆಚ್ಚಾದಾಗ ತೊಂದರೆ ಎದುರಾದರೆ ಅಧಿಕಾರಿಗಳಾದ ನೀವೇ ಜವಾಬ್ದಾರಿ ಎಂದು ರಾಜ್ಯ ಮೀನುಗಾರಿಕೆ ಹಾಗೂ ಬಂದರು ಸಚಿವ ಎಸ್.ಅಂಗಾರ ಎಚ್ಚರಿಸಿದರು.

ಅವರು ಬಂಟ್ವಾಳ ತಾ.ಪಂ.ಎಸ್‌ಜಿಎಸ್‌ವೈ ಸಭಾಂಗಣದಲ್ಲಿ  ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿ ಅಧಿಕಾರಿಗಳ ಸಭೆ ನಡೆಸಿದರು. ತುರ್ತು ಅವಶ್ಯಕತೆಗಳ ಖರೀದಿಗೆ ಜಿಲ್ಲಾಧಿಕಾರಿಗಳು ಅವಕಾಶ ನೀಡಿದ್ದು, ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟುಗೊಳಿಸಿ. ಮುಂದೆ ಯಾವುದೇ ಕೊರತೆ ಎದುರಾಗಬಾರದು. ಜತೆಗೆ ಜನರನ್ನು ಕೋವಿಡ್ ಕೇರ್ ಸೆಂಟರ್‌ಗೆ ಮನವೊಲಿಸಿ ಕಳುಹಿಸುವ ಜವಾಬ್ದಾರಿಯೂ ನಿಮ್ಮ ಮೇಲಿದೆ ಎಂದರು.

ಕೇರ್ ಸೆಂಟರ್ ವಿಚಾರದಲ್ಲಿ ತಹಶೀಲ್ದಾರ್-ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕಿದ್ದು, ಅಲ್ಲಿ ಟಿವಿ, ದಿನಪತ್ರಿಕೆಗಳ ವ್ಯವಸ್ಥೆ ಕಲ್ಪಿಸಿ ಜನರಿಗೆ ಉತ್ತಮ ವ್ಯವಸ್ಥೆ ಮಾಡಿಕೊಡಬೇಕು ಎಂದು ದ.ಕ.ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ.ಸೂಚಿಸಿದರು. ತಾಲೂಕಿನ ವಿಎಗಳು, ಪಿಡಿಒಗಳನ್ನು ೯೦ ಶೇ.ದಷ್ಟು ಕೋವಿಡ್ ಕರ್ತವ್ಯದಲ್ಲೇ ತೊಡಗಿಸಿಕೊಳ್ಳಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಾ ಪ್ರಭು ಅವರು ತಾಲೂಕಿನಲ್ಲಿ ಸದ್ಯ ೨೭೭ ಸಕ್ರೀಯ ಪ್ರಕರಣಗಳಿದ್ದು, ೪೨ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು. ಮಾಣಿ, ಮಂಚಿ, ಬಾಳ್ತಿಲ, ಪುಂಜಾಲಕಟ್ಟೆ ಪಿಎಚ್‌ಸಿಗಳ ವೈದ್ಯಾಧಿಕಾರಿಗಳಿಂದ ಸಾವಿನ ಹೆಚ್ಚಳಕ್ಕೆ ಕಾರಣ ಕೇಳಲಾಯಿತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು, ಬಂಟ್ವಾಳದಲ್ಲಿ ಸಾರಿಗೆ ಸುರಕ್ಷಾ ಐಸಿಯು ಬಸ್ಸು ಗ್ರಾಮೀಣ ಭಾಗಕ್ಕೆ ತೆರಳಿ ಆರೋಗ್ಯ ಸೇವೆ ನೀಡುತ್ತಿದ್ದು, ಅದರಲ್ಲಿ ಒಬ್ಬರು ಮಕ್ಕಳ ತಜ್ಞರಿದ್ದರೆ ಮಕ್ಕಳ ತಪಾಸಣೆಯೂ ಸುಲಭವಾಗುತ್ತದೆ ಎಂದರು. ಬಸ್ಸಿಗೆ ಮಕ್ಕಳ ತಜ್ಞರನ್ನು ನಿಯೋಜಿಸುವಂತೆ ಡಿಸಿ ಸೂಚಿಸಿದರು. ಗಡಿಯಲ್ಲಿ ಕಳ್ಳದಾರಿಗಳ ಕುರಿತು ನಿಗಾ ವಹಿಸುವಂತೆ ಸೂಚಿಸಲಾಯಿತು.

ಪುರಸಭೆಯ ಅಧ್ಯಕ್ಷ ಮಹಮ್ಮದ್ ಶರೀಫ್, ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಮಂಗಳೂರು ಎಸಿ ಮದನ್‌ಮೋಹನ್, ತಹಶೀಲ್ದಾರ್ ರಶ್ಮಿ ಎಸ್.ಆರ್, ತಾ.ಪಂ.ಇಒ ರಾಜಣ್ಣ, ಡಿವೈಎಸ್‌ಪಿ ವೆಲೆಂಟೈನ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.

More articles

Latest article