ಬಂಟ್ವಾಳ: ಅಕ್ರಮವಾಗಿ ಕೃಷಿ ಜಮೀನುಗಳಿಗೆ ನುಗ್ಗಿ ಸರ್ವೇ ಕಾರ್ಯಕ್ಕೆ ಮುಂದಾಗಿರುವ ಉಡುಪಿ ಕಾಸರಗೋಡು 400ಕೆವಿ ವಿದ್ಯುತ್ ಪ್ರಸರಣ ಮಾರ್ಗದ ಅಧಿಕಾರಿಗಳಿಗೆ ಬಂಟ್ವಾಳ ರೈತ ಹೋರಾಟ ಸಮಿತಿ ವಿರೋಧ ವ್ಯಕ್ತ ಪಡಿಸಿದೆ.
ಯೋಜನೆಯ ಸಮರ್ಪಕ ಮಾಹಿತಿಯನ್ನು ನೀಡಿದ ಖಾಸಗೀ ಜಮೀನುಗಳಿಗೆ ಪ್ರವೇಶಿಸಲು ನಾವು ಬಿಡುವುದಿಲ್ಲ. ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಯೋಜನೆಯ ಮಾಹಿತಿ ನೀಡಲಿ. ಕಾನೂನು ಪ್ರಕಾರ ಯೋಜನೆಯಿಂದ ಸಂತ್ರಸ್ತರಾಗುವ ರೈತರಿಗೆ ಮಾಹಿತಿ ನೀಡಬೇಕು. ಅದನ್ನು ನೀಡದೆ ಅಕ್ರಮವಾಗಿ ಜಮೀನಿನಲ್ಲಿ ಗುರುತುಗಳನ್ನು ಹಾಕಲಾಗುತ್ತಿದೆ. ನಾವು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ರೈತರು ಅಧಿಕಾರಿಗಳಿಗೆ ಹೇಳಿದರು.
ಹತ್ತು ಸೆಂಟ್ಸ್ ಜಾಗದ ಗಡಿ ಗುರುತು ಮಾಡಲು ಕಂದಾಯ ಇಲಾಖೆಯ ಸರ್ವೇಯರ್ ಗಳಿಗೆ ಹತ್ತು ನೋಟಿಸ್ ನೀಡಬೇಕಾಗುತ್ತದೆ. ಆದರೆ ಕಂಪನಿ ಪರವಾಗಿ ಸರ್ವೇ ಕಾರ್ಯಕ್ಕೆ ಬೆರಳೆಣಿಕೆಯ ದಿನದಲ್ಲೇ ಆಗಮಿಸಿದ್ದಾರೆ. ನಾವು ರೈತರು, ಇದು ನಮ್ಮ ಭೂಮಿ, ನಮಗೆ ಬದುಕಲು ಹಕ್ಕಿದೆ, ಈ ಯೋಜನೆಗೆ ಸಂಪೂರ್ಣ ಆಕ್ಷೇಪಣೆ ಇದೆ ಎಂದು ಈ ಸಂದರ್ಭ ರೈತರು ತಿಳಿಸಿದರು.
ಈಗಾಗಲೇ ರೈತರ ಬಳಿ ಇರುವ ನಕ್ಷೆಗಳು ಸೂಕ್ತವಾಗಿರುವುದಲ್ಲ. ಈಗ ಜಿಪಿಎಸ್ ಮೂಲಕ ಸಿದ್ದಪಡಿಸಿದ ನಕ್ಷೆಗಿಂತ ೬ಮೀಟರ್ ಸ್ಥಳ ಬದಲಾವಣೆಯಾಗುವ ಸಾಧ್ಯವಿದೆ. ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ನಿಲುವು ತಿಳಿಸುತ್ತೇವೆ. ಸಮಸ್ಯೆ ಬಗೆ ಬರಿದ ಬಳಿಕ ಸರ್ವೇ ಕಾರ್ಯ ನಡೆಸುವುದಾಗಿ ಹೇಳಿ ಕಂಪನಿಯ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಸರ್ವೇಯರ್ ಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.