ವಿಟ್ಲ: ಉಡುಪಿ ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣದ ಖಾಸಗೀ ಕಂಪನಿ ಕೆಲಸಕ್ಕೆ ತಡೆವೊಡ್ಡುವಂತೆ ದೇವಾಲಯಗಳಿಗೆ ಹರಕೆ ಪ್ರಾರ್ಥನೆ ಕಾರ್ಯವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ಸಂತ್ರಸ್ತ ರೈತರು ಆರಂಭಿಸಿದೆ.
ಗುರುಪುರದ ಶ್ರೀ ಗಂಜಿಮಠದ ಗಣಪತಿ ದೇವರಲ್ಲಿ ಮೊದಲ ಹರಕೆ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಎಲ್ಲರಿಗೂ ಅನ್ನ ನೀಡುವ ರೈತರನ್ನು ಮುಟ್ಟಲು ಬರುವವರು ಸರ್ವ ನಾಶವಾಗಬೇಕು ಎಂದು ಪ್ರಾರ್ಥನೆಯಲ್ಲಿ ಕೇಳಿಕೊಳ್ಳಲಾಯಿತು. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮನೋಹರ್ ಶೆಟ್ಟಿ ನಡಿಕಂಬಳಗುತ್ತು, ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ, ವಿಟ್ಲ ಹೋರಾಟ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.
ಅನುಮತಿ ಹಿಂಪಡೆಯಲು ಆಗ್ರಹ:
ದ ಕ ಜಿಲ್ಲೆಯ 17 ಗ್ರಾಮಗಳಲ್ಲಿ ರೈತರ ಕೃಷಿ ಭೂಮಿಯಲ್ಲಿ 400ಕೆವಿ ವಿದ್ಯುತ್ ಪ್ರಸರಣ ಮಾರ್ಗಕ್ಕೆ ನೀಡಿದ ಅನುಮತಿಯನ್ನು ಹಿಂಪಡೆಯಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ದ ಕ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದಿದೆ.
400ಕೆವಿ ವಿದ್ಯುತ್ ಮಾರ್ಗದಲ್ಲಿ ಉಂಟಾಗುವ ಸೆಳೆತಗಳಿಂದ ಪರಿಸರದ ವಿವಿಧ ರೀತಿಯ ಜೀವರಾಶಿಗಳಿಗೆ ಹಾನಿಯಾಗಲಿದೆ. ರೈತರ ಕೃಷಿಬೆಳೆಗಳು ನಾಶವಾಗಲಿದ್ದರೂ, ರೈತರಿಗೆ ಯಾವುದೇ ಮಾಹಿತಿಯನ್ನು ನೀಡದೆ ಯೋಜನೆಗೆ ಅನುಮತಿ ನೀಡಿರುವುದು ಸರಿಯಲ್ಲ. ಸರ್ವೇಗೆ ಬಂದರೆ ರೈತರು ಖಾಸಗೀ ಜಮೀನಿಗಿ ನುಗ್ಗುವವರನ್ನು ಕಟ್ಟಿ ಹಾಕಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಬೋಗಸ್ ಕಂಪನಿಗಳಿಗೆ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಅಧಿಕಾರವನ್ನು ನೀಡಬಾರದು. ಜೀವ ಬಿಟ್ಟೇವು, ಜಾಗ ಕೊಡೆವು ಎನ್ನುವ ಘೋಷಣೆಯಲ್ಲಿ ಹೋರಾಟ ಆರಂಭಿಸಿದ್ದು, ತಕ್ಷಣ ನೀಡಿದ ಅನುಮತಿಯನ್ನು ಹಿಂಪಡೆಯಬೇಕೆಂದು ರೈತ ಸಂಘ ಆಗ್ರಹಿಸಿದೆ.