ಬಂಟ್ವಾಳ: ರಾಜಧರ್ಮ ಪಾಲಿಸುತ್ತೇನೆ ಎಂದು ಭಾಷಣದಲ್ಲಿ ಹೇಳಿದರೆ ಸಾಲದು, ಬಂಟ್ವಾಳದ ಹಾಲಿ ಶಾಸಕರು ಪಾಲನೆಯಲ್ಲೂ, ನಡವಳಿಕೆಯಲ್ಲೂ ಅದನ್ನು ಅನುಸರಿಸರಿಸಲಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಕಛೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ರಾಜೇಶ ನಾಯ್ಕ್ ಆಡಳಿತ ವೈಖರಿಯ ಕುರಿತು ವಾಗ್ದಾಳಿ ನಡೆಸಿದರು. ಸರ್ಕಾರದ ದುಡ್ಡಿನಲ್ಲಿ ನಡೆಯುತ್ತಿರುವ ಕೋವಿಡ್ ಬಸ್ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸುವಾಗ ಬಿಜೆಪಿ ಬೆಂಬಲಿತ ಪಂಚಾಯತ್ ವ್ಯಾಪ್ತಿಯಲ್ಲಿ ಆಯಾ ಗ್ರಾ.ಪಂ.ಅಧ್ಯಕ್ಷರೇ ಅದರ ಉಸ್ತುವಾರಿಗಳಾದರೆ, ಬಿಜೆಪಿ ಆಡಳಿತ ರಹಿತ ಪಂಚಾಯತ್ ಗಳಲ್ಲಿ ಬಿಜೆಪಿ ಕಾರ್ಯಕರ್ತರನ್ನು ಅದರ ಉಸ್ತುವಾರಿಗಳನ್ನಾಗಿ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ಕಾರ್ಮಿಕ ಇಲಾಖೆಯ ಕಿಟ್ ಗಳನ್ನು ಗ್ರಾ.ಪಂ.ಕಛೇರಿಯಲ್ಲಿ ವಿತರಿಸದೆ ಖಾಸಗಿ ವ್ಯಕ್ತಿಗಳ ಮನೆಗಳಲ್ಲಿ ವಿತರಿಸುವುದು ಯಾವ ರಾಜಧರ್ಮ ಎಂದು ರೈ ಪ್ರಶ್ನಿಸಿದರು.
ತಾನು ಜನಪ್ರತಿನಿಧಿಯಾಗಿ ಪಕ್ಷ, ಜಾತಿ, ಮತಗಳ ಕುರಿತಾಗಿ ಯಾವುದೇ ತಾರತಮ್ಯ ಮಾಡದೆ ಜನಹಿತಕ್ಕಾಗಿ ಕೆಲಸ ಮಾಡಿದ್ದೇನೆ, ರಾಜಧರ್ಮ ಪಾಲಿಸಿದ್ದೇನೆ, ಹಾಲಿಶಾಸಕರು ಇದೇ ನೀತಿ ಅನುಸರಿಸಿದರೆ ಅವರ ರಾಜಧರ್ಮವನ್ನು ಒಪ್ಪಬಹುದಿತ್ತು ಎಂದರು.
ಕಸಿದು ಕೊಡುವ ರಾಜಕೀಯ ಬಿಜೆಪಿಯದ್ದು..
ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ಅತ್ಯಂತ ಹೆಚ್ಚು ಬಿಪಿಎಲ್ ಕಾರ್ಡ್ ಒದಗಿಸಲು ಪ್ರಯತ್ನಿಸಲಾಗಿತ್ತು, ಆದರೂ ಆಗ ಕೆಲವರಿಗೆ ಸಿಕ್ಕಿಲ್ಲ ಎಂದು ಬಿಜೆಪಿ ರಾಜಕೀಯ ನಡೆಸಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬಡವರ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಲಾಗುತ್ತಿದೆ, ದಂಡ ವಿಧಿಸುವ ಪ್ರಕ್ರಿಯೆಯೂ ನಡೆಯುತ್ತಿದೆ. ಈ ನಡುವೆ ಕೆಲವು ಬಿಜೆಪಿ ಮುಖಂಡರು ಬಿಪಿಎಲ್ ಕಾರ್ಡ್ ಕೊಡಿ ಎಂದು ಒತ್ತಾಯಿಸುವ ನಾಟಕ ಮಾಡುತ್ತಿದ್ದಾರೆ. ಹಾಗಿದ್ದರೆ ರದ್ದು ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದ ರೈ, ಒಮ್ಮೆ ಕಸಿದು, ಮತ್ತೆ ಕೊಡುವ ಮೂಲಕ ಜನರನ್ನು ಮರುಳು ಮಾಡುವ ರಾಜಕೀಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಹೆದ್ದಾರಿ ಭೂ ಸ್ವಾಧೀನದ ಪರಿಹಾರ ವಿತರಣೆಯಲ್ಲೂ ಬಿಜೆಪಿ ಮುಖಂಡರು ಹೋರಾಟದ ನಾಟಕ ಮಾಡುತ್ತಿದ್ದು, ಅವರ ಹೋರಾಟ ಯಾವ ಸರ್ಕಾರದ ವಿರುದ್ಧ ಎಂದು ಸ್ಪಷ್ಟ ಪಡಿಸಲಿ ಎಂದರು.
ತನ್ನ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ, ತಾನು ಸ್ವಚ್ಛಂದ ರಾಜಕಾರಣ ನಡೆಸುತ್ತಾ ಬಂದಿದ್ದು, ತನಗ್ಯಾವುದೇ ಮಣ್ಣು ಅಥವಾ ಕಲ್ಲಿನ ವ್ಯಾಪಾರಗಳಿಲ್ಲ, ಗಣಿ ಇಲಾಖೆಯಲ್ಲೂ ವ್ಯವಹಾರ ನಡೆಸುತ್ತಿಲ್ಲ ಎಂದರು.
ಮರಳುಮಾಫಿಯಾಕ್ಕೆ ಶಾಸಕರ ಬೆಂಬಲ
ಹಾಲಿ ಶಾಸಕರು ಮರಳು ಮಾಫಿಯಾಕ್ಕೆ ಬೆಂಬಲನೀಡುತ್ತಿದ್ದು, ಅನಧಿಕೃತವಾಗಿ ಮರಳು ಸಾಗಿಸುವವರಿಗೆ ನೆರವಾಗುತ್ತಿದ್ದಾರೆ, ಈ ಕುರಿತಾಗಿ ಪೊಲೀಸರನ್ನೂ ತಮ್ಮ ನಿಯಂತ್ರಣದಲ್ಲಿ ಇರಿಸಿಕೊಂಡಿದ್ದಾರೆ ಎಂದ ಅವರು, ತನ್ನ ಹತ್ತು ವರ್ಷದ ಅವಧಿಯಲ್ಲಿ ನಡೆದ ವರ್ಗಾವಣೆಗಳಿಗಿಂತ ಅತ್ಯಂತ ಹೆಚ್ಚು ವರ್ಗಾವಣೆಗಳು, ಈ ಶಾಸಕರ ಎರಡು ವರ್ಷದ ಅವಧಿಯಲ್ಲೇ ಆಗಿ ಹೋಗಿದೆ ಎಂದು ರೈ ಟೀಕಿಸಿದರು.
ಶಾಸಕರಿಗೆ ಅನುಭವದ ಕೊರತೆ ಇದ್ದು, ನೊಂದವರಿಗೆ ಪರಿಹಾರ, ನ್ಯಾಯ ಒದಗಿಸುವುದು ರಾಜ್ಯದ ಸಜೀವ ಸರ್ಕಾರ ದ ಜವಬ್ದಾರಿ, ಅದನ್ನು ಮಾಡಬೇಕಾಗಿದೆ, ತಾನು ಯಾವ ಹೇಳಿಕೆಗಳನ್ನೂ ಕೇವಲ ಭರವಸೆಗಷ್ಟೇ ಸೀಮಿತಗೊಳಿಸಿಲ್ಲ. ಸೂಕ್ತ ದಾಖಲೆಗಳ ಜೊತೆಯಲ್ಲೇ ಪತ್ರಿಕಾಗೋಷ್ಟಿ ಮಾಡಿದ್ದೇನೆ ಎಂದ ಅವರು ಕೋವಿಡ್ ವ್ಯಾಕ್ಸಿನೇಶನ್ ಅನ್ನೂ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವುದು ತಪ್ಪು ಎಂದರು.
ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಶೆಟ್ಟಿ, ಮಹಿಳಾ ಕಾಂಗ್ರೇಸ್ ಅಧ್ಯಕ್ಷ ಲವೀನಾ ವಿಲ್ಮಾ ಮೋರಸ್, ಪುರಸಭಾ ಸದಸ್ಯ ಜನಾರ್ಧನ ಚೆಂಡ್ತಿಮಾರ್, ಮಾಜಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್,
ಪ್ರಮುಖರಾದ ಮಲ್ಲಿಕಾ ಶೆಟ್ಟಿ , ಧನಲಕ್ಷ್ಮಿ ಬಂಗೇರ, ಮಾಯಿಲಪ್ಪ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.