ಬಂಟ್ವಾಳ : ರಮಾನಾಥ ರೈ ರಾಜಕೀಯ ಕಾರಣಕ್ಕೆ ತಿರುಗಾಡುತ್ತಿರುವ ಕಾರು ಯಾವುದೋ ಖಾಸಗಿ ಸಂಸ್ಥೆಗೆ ಸೇರಿದ್ದು, ಅವರಿಗೂ ಆ ಸಂಸ್ಥೆಗೂ ಏನು ಸಂಬಂಧ ಎಂದು ರೈ ಯವರು ಜನತೆಗೆ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಒತ್ತಾಯಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು,
ಸಿ.ಡಿ.ಕನ್ಸ್ಟ್ ಟ್ರಕ್ಸನ್ ಹೆಸರಿನಲ್ಲಿರುವ 26 ರೂ ಲಕ್ಷದ ಮೌಲ್ಯದ ಕಾರನ್ನು ರೈ ಅವರಿಗೆ ಯಾಕೆ ಕೊಟ್ಟಿದ್ದಾರೆ? ಸಿ.ಡಿ.ಕನ್ಸ್ಟ್ ಟ್ರಕ್ಸನ್ ಅವರಿಗೂ ರೈ ಅವರಿಗೂ ಏನು ಸಂಬಂಧ ? ಈ ವಿಚಾರದ ಬಗ್ಗೆ ತನಿಖೆ ಮಾಡಿದರೆ ರಮಾನಾಥ ರೈ ಎಷ್ಟು ರಾಜಧರ್ಮ ಪಾಲಿಸಿದ್ದಾರೆ ಎಂದು ಅರ್ಥ ಅಗುತ್ತದೆ ಎಂದು ವ್ಯಂಗ್ಯ ವಾಡಿದ್ದಾರೆ.
ರಾಜಕೀಯವನ್ನೇ ವ್ಯಾಪಾರವಾಗಿರಿಸಿಕೊಂಡಿರುವ ಮಾಜಿಸಚಿವ ರೈ ಯವರು ಪ್ರಸ್ತುತ ನಿರುದ್ಯೋಗಿಯಾಗಿದ್ದು, ಕೇವಲ ತನ್ನ ಇರುವಿಕೆಯನ್ನು ಪ್ರಚುರಪಡಿಸಲು ಶಾಸಕ ರಾಜೇಶ್ ನಾಯ್ಕ್ ಹಾಗೂ ಬಿಜೆಪಿ ವಿರುದ್ಧ ನೀಡಿರುವ ಬಾಲಿಶ ಹೇಳಿಕೆಯನ್ನು ಬಿಜೆಪಿ ಖಂಡಿಸುತ್ತದೆ ಎಂದು ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ಹೇಳಿದ್ದಾರೆ. , ಬಿಜೆಪಿ ಹಾಗೂ ಶಾಸಕ ರಾಜೇಶ್ ನಾಯ್ಕ್ ವಿರುದ್ಧ ಮಾತನಾಡಲು ರೈಯವರು ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ ಎಂದರು.
ಆದಾಯ ತೆರಿಗೆ ಪಾವತಿಸುವವರ ಹಾಗೂ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಹೆಚ್ಚು ಇದ್ದಲ್ಲಿ ಕಾರ್ಡ್ ರದ್ದುಗೊಳ್ಳುವುದು ಯಾಂತ್ರಿಕೃತವಾಗಿದ್ದು, ಇದರಲ್ಲಿ ಶಾಸಕರ ಯಾವುದೇ ಪಾತ್ರವಿಲ್ಲ, ಆದರೆ ಶಾಸಕರೇ ಬಿಪಿಎಲ್ ಕಾರ್ಡ್ ರದ್ದು ಪಡಿಸುತ್ತಾರೆ ಎಂಬರ್ಥದಲ್ಲಿ ಮಾತನಾಡಿರುವುದು ಸರಿಯಲ್ಲ ಎಂದು ತಿಳಿಸಿದ ಅವರು,
ಅಕ್ರಮ ಮರಳುಗಾರಿಕೆ, ಅಕ್ರಮ ಗಣಿಗಾರಿಕೆ ನಡೆಸಿದವರನ್ನೇ ತಮ್ಮ ಅಕ್ಕಪಕ್ಕದಲ್ಲಿ ಕುಳ್ಳಿರಿಸಿಕೊಂಡು ಶಾಸಕರ ರಾಜಧರ್ಮದ ಬಗ್ಗೆ ರೈ ಮಾತನಾಡಿದ್ದಾರೆ ಎಂದು ದೇವಪ್ಪ ಪೂಜಾರಿ ಟೀಕಿಸಿದರು.
ಬಂಟ್ವಾಳ ಕ್ಷೇತ್ರದಲ್ಲಿ ಕೋಮುಗಲಭೆಗೆ ಪ್ರೇರಣೆ ನೀಡಿದ್ದು, ಅಕ್ರಮ ಮರಳುಗಾರಿಕೆಯನ್ನು ಬೆಂಬಲಿಸಿದ್ದು, ಕಲ್ಲಡ್ಕ ಶಾಲಾ ಮಕ್ಕಳ ಅನ್ನ ಕಸಿದದ್ದು, ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಐಬಿಯಲ್ಲಿ ಪ್ರಭಾಕರ್ ಭಟ್ ಬಂಧನಕ್ಕೆ ಸೂಚಿಸಿದ್ದು, ಸರ್ಕಾರಿ ಅಧಿಕಾರಿಗಳಿಗೆ ಬೆದರಿಸಿದ್ದು, ಮಾಣಿ ಹಾಗೂ ಕಳ್ಳಿಗೆಯಲ್ಲಿ ಪತ್ನಿಯ ಹೆಸರಲ್ಲಿ ಅಕ್ರಮ ಜಮೀನು ಮಂಜೂರು ಮಾಡಿಸಿಕೊಂಡಿರುವುದು ರೈ ಯವರ ರಾಜಧರ್ಮವೇ ಎಂದು ದೇವಪ್ಪ ಪೂಜಾರಿ ಪ್ರಶ್ನಿಸಿದರು.
ದಾಖಲೆಯೊಂದಿಗೆ ಮಾತನಾಡುತ್ತೇನೆ ಎಂದ ರೈಯವರು, ಸ್ವತಃ ತೆಂಗಿನಕಾಯಿ ಒಡೆದಿರುವ ಬೆಂಜನಪದವು ಕ್ರೀಡಾಂಗಣಕ್ಕೆ ಬಂದ ಹಣ ಎಲ್ಲಿಗೆ ಹೋಗಿದೆ ಎಂದು ತಿಳಿಸಬೇಕು ಎಂದರು.
ಮಾಜಿ ಸಚಿವ ರಮಾನಾಥ ರೈ ಯವರು ಇನ್ನಾದರೂ ಜವಬ್ದಾರಿಯುತವಾಗಿ ಮಾತನಾಡಬೇಕು, ರೈ ಯವರ ಸುಳ್ಳುಮಾತನ್ನು ಕ್ಷೇತ್ರದ ಜನತೆ ನಂಬುವ ಸ್ಥಿತಿಯಲ್ಲಿ ಇಲ್ಲ ಎಂದು ಅವರು ಹೇಳಿದರು. ರಾಜೇಶ್ ನಾಯ್ಕ್ ರಾಜಕೀಯ ಪ್ರವೇಶಿಸುವ ಮುನ್ನವೇ ಕಲ್ಲು ಮಣ್ಣಿನ ವ್ಯವಹಾರ ಮಾಡುತ್ತಿದ್ದು, ಜನಸೇವೆಯ ಉದ್ದೇಶದಿಂದ ಮಾತ್ರ ರಾಜಕೀಯ ಪ್ರವೇಶಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಯಾವುದೇ ಕೋಮುಗಲಭೆ ನಡೆಯದೇ ಇರುವುದು ರಾಜೇಶ್ ನಾಯ್ಕ್ ಅವರ ರಾಜಧರ್ಮ ಪಾಲನೆಗೆ ಸಾಕ್ಷಿ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ರವೀಶ್ ಶೆಟ್ಟಿ ಕರ್ಕಳ, ಡೊಂಬಯ್ಯ ಅರಳ, ವಜ್ರನಾಥ ಕಲ್ಲಡ್ಕ, ಸುದರ್ಶನ ಬಜ, ರೋನಾಲ್ಡ್ ಡಿ.ಸೋಜ ಬಂಟ್ವಾಳ, ಪುರುಷೋತ್ತಮ ಶೆಟ್ಟಿ ವಾಮದಪದವು, ಗಣೇಶ್ ರೈ ಉಪಸ್ಥಿತರಿದ್ದರು.