ಬಂಟ್ವಾಳ : 75 ವರ್ಷದ ಸ್ವಾತಂತ್ರ್ಯದ ಆಚರಣೆಯ ಈ ಶುಭಸಂದರ್ಭದಲ್ಲಿ ಹಿರಿಯ ರಾಜಕಾರಣಿ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ನಮ್ಮ ಬಂಟ್ವಾಳದ ಜೊತೆ ಮಾತನಾಡಿದ್ದಾರೆ.
1947 ರ ಸ್ವಾತಂತ್ರ್ಯ ಸಂದರ್ಭದಲ್ಲಿನ ಅನುಭವವನ್ನು ನಮ್ಮ ಜೊತೆ ಹಂಚಿಕೊಂಡ ಬಳಿಕ 75 ನೇ ವರ್ಷದ ಸ್ವಾತಂತ್ರ್ಯಕ್ಕೆ ಶುಭ ಹಾರೈಸಿದರು.
ಸಹಬಾಳ್ವೆ, ಸಹಿಷ್ಣುತೆ , ಸಮಭಾವ , ಸಮಬಾಳು ಈ ದೇಶದ ಸಂವಿಧಾನದ ಆಶಯ ಮತ್ತು ಅದು ಈ ನೆಲದ ಗುಣ ಎಂದು ಜನಾರ್ದನ ಪೂಜಾರಿ ಅವರು ತಿಳಿಸಿದ್ದಾರೆ.
ಅಂತಹ ಶ್ರೇಷ್ಠ ಪರಂಪರೆಯ ಭಾರತದ ರಾಜಕಾರಣದಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ .
ಸ್ವಾತಂತ್ರ್ಯ ಬರುವಾಗ ನನಗೆ ಹತ್ತು ವರ್ಷ. ಸ್ವಾತಂತ್ರ್ಯ ಬಂದು 75 ವರ್ಷ ಆಯಿತು . ಈ ದೀರ್ಘ ಕಾಲದಲ್ಲಿ ಭಾರತದ ರಾಜಕೀಯ ಸಾಂಸ್ಕೃತಿಕ ಸಾಮಾಜಿಕ ಜೀವನದಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ.
ಆದರೆ ಇಷ್ಟು ವರ್ಷವಾದರೂ ಸಂವಿಧಾನದ ಮೂಲ ಪರಿಕಲ್ಪನೆ ಹಾಗೇ ಉಳಿದಿದೆ. ಆದರೆ ಇತ್ತೀಚಿಗೆ ಅದಕ್ಕೆ ಘಾಸಿಗೊಳಿಸುವ ಸಂಗತಿಗಳು ನಡೆಯುತ್ತಿರುವುದು ಬೇಸರದ ಸಂಗತಿ.
ರಾಜಕಾರಣ ವಿಪರೀತ ಭ್ರಷ್ಟಗೊಂಡಿರುವುದು ಆಘಾತಕಾರಿ. ಮತ ಜಾತಿ ಹೆಸರಿನ ಕಚ್ಚಾಟ ಕೂಡಾ ಒಳ್ಳೆಯ ಸೂಚನೆಯಲ್ಲ.
ನಾವು ದೇಶದ ಅಭಿವೃದ್ಧಿ ಬಡವರ ಪರ ಕಾಳಜಿಯಿಂದ ಸೇವೆ ಸಲ್ಲಿಸಿದ್ದೇವೆ. ಅಂತಹ ಮನೋಭೂಮಿಕೆ ಮತ್ತಷ್ಟು ಗಟ್ಟಿಯಾಗಲಿ ಎಂದು ಹಾರೈಸುತ್ತೇನೆ.
ಈ ಸಂದರ್ಭದಲ್ಲಿ ನಾನು ಜೀವನ ಪರ್ಯಂತ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಉಳಿದುಕೊಂಡೇ ಬಂದಿದ್ದೇನೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಂತರ ನಿರಂತರವಾಗಿ ೪ ದಶಕಗಳ ಕಾಲ ದೇಶವನ್ನು ಮುನ್ನಡೆಸಿದ ಕಾಂಗ್ರೆಸ್ ಪಕ್ಷ ಎಲ್ಲಾ ಎಳು ಬೀಳುಗಳ ನಡುವೆ ತನ್ನ ಮೂಲ ಸೈದ್ಧಾಂತಿಕ ವಿಚಾರವನ್ನು ಉಳಿಸಿಕೊಂಡು ಬಂದಿದೆ. ಮತ್ತು ನಾನೂ ಕೂಡಾ ಅದೇ ಹಾದಿಯಲ್ಲಿ ನಡೆದುಬರುವಲ್ಲಿ ಯಶಸ್ವಿಯಾಗಿದ್ದೇನೆ. ಮಹಾತ್ಮ ಗಾಂಧೀಜಿಯವರ ಜೀವನ ಸಿದ್ದಾಂತದ ಅನುಯಾಯಿಯಾಗಿ ಪಕ್ಷ ಮತ್ತು ದೇಶದ ಒಳಿತಿಗೆ ಕರ್ತವ್ಯ ನಿಭಾಯಿಸಿದ ತೃಪ್ತಿಯೂ ಇದೆ. ಇಂದು ಮೂಲ ಕಾಂಗ್ರೆಸ್ ಹೊರತಾಗಿ ಪಕ್ಷದಲ್ಲೂ ಅನೇಕ ಬದಲಾವಣೆಯಾಗಿದೆ. ಬದಲಾವಣೆ ಜಗದ ನಿಯಮ . ಆದರೆ ಸ್ವಾತಂತ್ರ್ಯ ಭಾರತದ ಮೂಲ ಆಶಯಗಳಿಗೆ ಧಕ್ಕೆ ಬರದ ರೀತಿ ನಡೆದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.