ಬಂಟ್ವಾಳ: *ಪಾರ್ಕಿನ್‌ಸನ್*, ಇದೊಂದು ಅಪರೂಪದ ಖಾಯಿಲೆ ಆ ಮನೆಯವರನ್ನು ಹೈರಾಣಾಗಿಸಿದೆ. ವಂಶವಾಹಿಯಾಗಿ ಬಂದ ರೋಗ ಮನೆ ಮಂದಿಯನ್ನು ಮಖಾಡೆ ಮಲಗಿಸಿದೆ. ಇದಕ್ಕೆ ಇನ್ನೂ ಸೂಕ್ತ ಚಿಕಿತ್ಸೆ ಲಭ್ಯವಿಲ್ಲದ ಕಾರಣ ಮನೆಮಂದಿ ಕಂಗಾಲಾಗಿದ್ದಾರೆ.
ಬಂಟ್ವಾಳ ತಾಲೂಕಿನ ರಾಯಿ ಗ್ರಾಮದ ದೈಲ ಕ್ವಾಟ್ರರ್ಸ್ ನಿವಾಸಿ ವಿಶ್ವನಾಥ ಪೂಜಾರಿ(60) ಅವರ ಸಹಿತ ಮೂವರು ಮಕ್ಕಳು ಪಾರ್ಕಿನ್‌ಸನ್ ರೋಗಕ್ಕೆ ತುತ್ತಾಗಿ ದಾರಿ ಕಾಣದಾಗಿದಂತಾಗಿದ್ದಾರೆ.ಕುಟುಂಬವನ್ನು ಪೋಷಿಸಬೇಕಾದ ಯುವಕ, ಮನೆ ಬೆಳಗಬೇಕಾದ ಯುವತಿ, ಗೃಹಿಣಿ ಎಲ್ಲರನ್ನೂ ಪಾರ್ಕಿನ್‌ಸನ್ ಬಲಹೀನರನ್ನಾಗಿಸಿರುವ ದಾರುಣ ಪರಿಸ್ಥಿತಿ ಕರುಣಾಜನಕವಾಗಿದೆ.
*ಏನಿದು ಪಾರ್ಕಿನ್‌ಸನ್?*:ದೇಹದ ಚಲನೆಯ ಮೇಲೆ ಪರಿಣಾಮ ಬೀರುವ ಒಂದು ಪ್ರಕಾರದ ನರ ದೌರ್ಬಲ್ಯದ ಖಾಯಿಲೆ.ಮೆದುಳಿನಲ್ಲಿ ಉತ್ಪತ್ತಿಯಾಗಿ ದೇಹದ ಚಲನವನ್ನು ನಿಯಂತ್ರಿಸುವ ಡೋಪಮೈನ್ ಎಂಬ ರಾಸಾಯನಿಕದ ಕೊರತೆಯಾಗುವುದು ಇದಕ್ಕೆ ಕಾರಣ. ದಿನಕಳೆದಂತೆ ಖಾಯಿಲೆ ಉಲ್ಬಣಗೊಳ್ಳುತ್ತದೆ.ಸಂಪೂರ್ಣ ಗುಣಪಡಿಸಲಾಗದ, ಸಾಂಕ್ರಾಮಿಕವಲ್ಲದ ಈ ಖಾಯಿಲೆಗೆ ನಿಖರವಾದ ಕಾರಣ ಪತ್ತೆಯಾಗಿಲ್ಲವಾದರೂ ವಂಶವಾಹಿ ಕಾರಣವೆಂದು ವೈದ್ಯರ ಅಭಿಪ್ರಾಯ.
ಕೂಲಿ ಕಾರ್ಮಿಕರಾಗಿದ್ದ ವಿಶ್ವನಾಥ ಪೂಜಾರಿ ಅವರು ದೈಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಅಲ್ಪ ಜಾಗದಲ್ಲಿ ಮನೆ ಕಟ್ಟಿ ವಾಸವಾಗಿದ್ದಾರೆ. ಹಿರಿಯ ಪುತ್ರ ನವೀನ(35) ಮುಂಬಯಿಯಲ್ಲಿ ಉದ್ಯೋಗದಲ್ಲಿದ್ದರು. ಕಿರಿಯ ಪುತ್ರಿ ವಿವಾಹವಾಗಿ ಬೆಂಗಳೂರಲ್ಲಿ ಉದ್ಯೋಗದಲ್ಲಿದ್ದರು. ಮತ್ತೋರ್ವ ಪುತ್ರಿಗೂ ವಿವಾಹವಾಗಿ ಇಬ್ಬರು ಮಕ್ಕಳಿದ್ದಾರೆ.
ಸುಮಾರು 15ವರ್ಷದ ಹಿಂದೆ ವಿಶ್ವನಾಥ ಅವರು ಪಾರ್ಕಿನ್‌ಸನ್ ರೋಗಕ್ಕೆ ತುತ್ತಾದಾಗ ಅದರ ಅರಿವಿರಲಿಲ್ಲ. ಕೈ, ಕಾಲು ನಡುಕ, ದೇಹ ಕಂಪಿಸುವುದು ಹೆಚ್ಚಾಗಿ ಕೆಲಸಕ್ಕೆ ಹೋಗಲು ಅಸಾಧ್ಯವಾದಾಗ ವೈದ್ಯರನ್ನು ಸಂಪರ್ಕಿಸಿದಾಗ ರೋಗ ಪತ್ತೆಯಾಗಿದೆ. ಇದೇ ವೇಳೆ ಮುಂಬಯಿಯಲ್ಲಿದ್ದ ನವೀನ್‌ಗೂ ಈ ಲಕ್ಷಣಗಳು ಕಂಡು ಬಂದು ಊರಿಗೆ ವಾಪಾಸಾಗುತ್ತಾರೆ. ಬೆಂಗಳೂರಿನಲ್ಲಿ ಉತ್ತಮ ಉದ್ಯೋಗದಲ್ಲಿದ್ದ ಆ ಹೆಣ್ಣು ಮಗಳಿಗೂ ಇದೇ ರೀತಿಯಾಗಿ ಪ್ರಸ್ತುತ ತಾಯಿ ಮನೆಯಲ್ಲಿದ್ದಾರೆ. ಹಿರಿಯವಳಿಗೂ ರೋಗ ಲಕ್ಷಣಗಳು ಕಾಣಿಸುತ್ತಿದೆ. ಮುಂದಕ್ಕೆ ಮಕ್ಕಳಿಗೂ ಬರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.ಇವರೆಲ್ಲರಿಗೂ ದೈನಂದಿನ ಕೆಲಸ ಕಾರ್ಯಗಳನ್ನೂ ನಿರ್ವಹಿಸುವುದರ ಜತೆ ಮಾತನಾಡಲೂ ಅಸಾಧ್ಯವಾಗಿದೆ.
ಇದಕ್ಕೆ ಚಿಕಿತ್ಸೆಗೆ ವಿಶ್ವನಾಥ ಅವರ ಕುಟುಂಬ ಹೋಗದ ಆಸ್ಪತ್ರೆ ಇಲ್ಲ. ಹಲವಾರು ವೈದ್ಯರನ್ನು ಕಂಡಾಗಿದೆ. ಪ್ರಸ್ತುತ ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಯ ಚಿಕಿತ್ಸೆ ನಡೆಯುತ್ತಿದೆ.ಇವರನ್ನು ಕಂಡವರು ಯಾರಾದರೂ ಚಿಕಿತ್ಸೆ ಸೂಚಿಸಿದಾಗ ಆಶಾ ಕಿರಣವೊಂದು ಮೂಡುತ್ತದೆ. ಆದರೆ ಸಧ್ಯ ಮನೆಯಲ್ಲಿ ವಿಶ್ವನಾಥ ಅವರ ಪತ್ನಿ ಸುಂದರಿ ಓರ್ವರ ಆದಾಯದಿಂದ ಮನೆಖರ್ಚು, ಚಿಕಿತ್ಸಾ ವೆಚ್ಚ ಭರಿಸಬೇಕಾಗಿದೆ. ಕಡು ಬಡವರಾದ ಅವರ ಮುಂದಿನ ಚಿಕಿತ್ಸೆಗೆ, ಜೀವನ ನಿರ್ವಹಣೆಗೆ ದಾನಿಗಳ ಸಹಕಾರದ ಆವಶ್ಯಕತೆ ಇದೆ. ವಿಶ್ವನಾಥ ಅವರು ದಾನಿಗಳ ಸಹಕಾರದ ನಿರೀಕ್ಷೆಯಲ್ಲಿದ್ದಾರೆ. ಧನ ಸಹಾಯ ಮಾಡುವವರು ವಿಶ್ವನಾಥ ಅವರ ಪತ್ನಿಯ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು.
*ಸುಂದರಿ,* ಖಾತೆ ನಂ. 01372210021618, *ಕೆನರಾ ಬ್ಯಾಂಕ್*, ಬಂಟ್ವಾಳ ಶಾಖೆ, ಐಎಫ್‌ಎಸ್‌ಸಿ ಕೋಡ್: CNRB0010137
Phone: 9008357590