ಬಂಟ್ವಾಳ: ಬಂಟ್ವಾಳ ತಾಲೂಕಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಶಾರದ ಪ್ರೌಢ ಶಾಲೆಯ ಪಕ್ಕದಲ್ಲಿ ಬಿದ್ದಿರುವ ಕಸದ ರಾಶಿಯನ್ನು ದನಕರುಗಳ ಸಹಿತ ಇತರ ಪ್ರಾಣಿಗಳು ರಸ್ತೆಯ ಮೇಲೆ ಚೆಲ್ಲಿರುವ ದೃಶ್ಯ ಕಂಡು ಬಂದಿದೆ.
ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ನಂದಾವರ ಶ್ರೀವಿನಾಯಕ ಶಂಕರ ನಾರಾಯಣ ದುರ್ಗಾಂಭ ಕ್ಷೇತ್ರಕ್ಕೆ ಸಂಚರಿಸುವ ರಸ್ತೆಯ ಬದಿಯಲ್ಲಿ ನಿತ್ಯ ತ್ಯಾಜ್ಯ ಎಸೆಯಲಾಗುತ್ತಿದೆ.
ಈ ರಸ್ತೆ ಯ ಮೂಲಕ ಕ್ಷೇತ್ರ ಕ್ಕೆ ಸಂಚಾರ ಮಾಡುವ ಭಕ್ತರಿಗೆ ನಿತ್ಯ ತ್ಯಾಜ್ಯ ದ ದರ್ಶನದ ಜೊತೆ ಗಬ್ಬು ವಾಸನೆ.
ಸ್ವಚ್ಚತೆಗೆ ಹೆಚ್ವಿನ ಆದ್ಯತೆ ನೀಡಿ ಎಂದು ಸರಕಾರ ಹಲವಾರು ಯೋಜನೆಗಳನ್ನು ತಂದು ರಸ್ತೆಯ ಬದಿ ಕಸ ತ್ಯಾಜ್ಯ ಎಸೆಯಬೇಡಿ ಎಂದು ಎಷ್ಟೇ ಹೇಳಿದರು ಈ ಬಗ್ಗೆ ಕ್ಯಾರೇ ಎನ್ನದ ಪರಿಸರಕ್ಕೆ ಕೇಡು ಬಯಸುವ ಒಂದಷ್ಟು ಜನ ನಿತ್ಯ ಉದ್ದೇಶಪೂರ್ವಕವಾಗಿ ತ್ಯಾಜ್ಯವನ್ನು ರಸ್ತೆಯ ಬದಿಗೆ ಎಸೆದುಹೊಗುತ್ತಾರೆ ಎಂಬುದು ಸ್ಥಳೀಯ ರ ದೂರು.
ಹೀಗೆ ರಸ್ತೆಯ ಬದಿಯಲ್ಲಿ ಹಾಕಿ ಹೋದ ತ್ಯಾಜ್ಯವನ್ನು ಮೂಕ ಪ್ರಾಣಿಗಳು ಎಳೆದು ರಸ್ತೆ ಗೆ ತಂದು ಹಾಕುತ್ತದೆ.
ರಸ್ತೆಯಿಡಿ ತ್ಯಾಜ್ಯ ಚೆಲ್ಲಾಪಿಲ್ಲಿಯಾಗಿ ವಾಹನ ಸಂಚಾರಕ್ಕೆ ಒಂದಷ್ಟು ಕಿರಿಕಿರಿಯಾಗುತ್ತದೆ ಎಂದು ಸ್ಥಳೀಯ ರು ಆರೋಪ ವ್ಯಕ್ತಪಡಿಸಿದ್ದಾರೆ.
ಕೊರೊನಾ ಸಂಕಷ್ಟದ ದಿನಗಳಲ್ಲಿ ಹೆಚ್ಚಿನ ಸ್ವಚ್ಚತೆಗೆ ಆದ್ಯತೆ ನೀಡಿ ಎಂದು ಆರೋಗ್ಯ ಇಲಾಖೆ ಸೂಚನೆ ನೀಡುತ್ತಿದೆಯಾದರೂ ಜನ ಮಾತ್ರ ಕಸವನ್ನು ಸಿಕ್ಕಸಿಕ್ಕಲ್ಲಿ ಎಸೆಯುತ್ತಿರುವುದು ಬುದ್ದಿ ವಂತರ ಜಿಲ್ಲೆಗೆ ಅವಮಾನ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಇದೇ ಮಾರ್ಗವಾಗಿ ಸ್ಥಳೀಯ ಪುರಸಭಾ ಸದಸ್ಯ ಅನೇಕ ಬಾರಿ ಸಂಚಾರ ಮಾಡಿದರೂ ಈ ಬಗ್ಗೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಪುರಸಭೆ ಮೌನ
ಅನೇಕ ವರ್ಷಗಳಿಂದ ಪಾಣೆಮಂಗಳೂರು ಶಾರದ ಶಾಲೆಯ ಪರಿಸರದಲ್ಲಿ ತ್ಯಾಜ್ಯ ಎಸೆಯುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇದ್ದರೂ ಕೂಡ ಸಂಬಂಧಿಸಿದ ಪುರಸಭಾ ಇಲಾಖೆ ಮಾತ್ರ ಯಾವುದೇ ಕ್ರಮಕೈಗೊಳ್ಳದೆ ಮೌನವಾಗಿ ರುವ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದೆರಡು ಬಾರಿ ಈ ಭಾಗದಲ್ಲಿ ಪೋಲೀಸ್ ಸಹಕಾರದಿಂದ ದಂಡ ಹಾಕುವ ಕ್ರಮ ಅಥವಾ ಸಿ.ಸಿ.ಕ್ಯಾಮರಾ ಅಳವಡಿಸಿ ಅಮೂಲಕ ತ್ಯಾಜ್ಯ ಎಸೆದುಹೋಗುವವರ ಮೇಲೆ ಕಾನೂನು ಕ್ರಮ ಕೈಗೊಂಡರೆ ರಸ್ತೆಯ ಬದಿಯಲ್ಲಿ ದೂರದ ಊರಿನಿಂದ ಬಂದು ಕಸ ಎಸೆದುಹೋಗುವವರ ಆಟ ನಿಲ್ಲುತ್ತದೆ ಎಂಬುದು ಸ್ಥಳೀಯ ಲೆಕ್ಕಾಚಾರ ವಾಗಿದ್ದು ಇದಕ್ಕೆ ಪುರಸಭೆ ಮುಂದಾಗಬೇಕು ಎಂಬುದು ಅವರ ಮನವಿಯಾಗಿದೆ.