ಗ್ರಾಮದ ಅಭಿವೃದ್ಧಿಯ ಜೊತೆಗೆ ಕೊರೋನ ನಿರ್ವಹಣೆ, ಕೋವಿಡ್ ಲಸಿಕೆಯ ವಿಚಾರದಲ್ಲಿ ಮಾಣಿ ಗ್ರಾಮ ಪಂಚಾಯತ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಧ್ಯಕ್ಷ ಬಾಲಕೃಷ್ಣ ಆಳ್ವ, ಕೊಡಾಜೆ ಹೇಳಿದರು.
ಪಂಚಾಯತ್ ನ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿಯೇ ಗುರುತಿಸುವ ರೀತಿಯಲ್ಲಿ ಸಾವಿರದ ನೂರು ಡೋಸ್ ಗಳ ಕೋವಿಡ್ ಲಸಿಕಾ ಶಿಬಿರವನ್ನು ಗ್ರಾಮ ಪಂಚಾಯತ್ ವತಿಯಿಂದ ಬೆಂಗಳೂರಿನ ಪ್ರತಿಷ್ಠಿತ ಅಪೋಲೊ ಆಸ್ಪತ್ರೆಯ ಸಹಕಾರದೊಂದಿಗೆ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಸಲಾಗಿದೆ.
ಗ್ರಾಮ ಪಂಚಾಯತ್ ಕಛೇರಿಗೆ ಅಧಿಕೃತ ಭೇಟಿ ನೀಡಿದ ಎಸ್ ಐ ಆರ್ ಡಿ ನಿರ್ದೇಶಕಿ ಗಾಯತ್ರಿಯವರು, ಪಂಚಾಯತ್ ಕಾರ್ಯವೈಖರಿಯ ಬಗ್ಗೆ ಕಡತಗಳನ್ನು ಪರೀಶೀಲಿಸಿ ಅತೀವವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.
ತೆರಿಗೆ ಸಂಗ್ರಹ ವಿಚಾರದಲ್ಲಿ ಸದಸ್ಯರುಗಳಾದ ಸುದೀಪ್ ಶೆಟ್ಟಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ಇಬ್ರಾಹಿಂ.ಕೆ.ಮಾಣಿ ಇವರು ಸಂಬಂಧಪಟ್ಟ ಸಿಬ್ಬಂದಿಯವರನ್ನು ತರಾಟೆಗೆ ತೆಗೆದುಕೊಂಡಾಗ, ಅಧ್ಯಕ್ಷರು ಅಭಿವೃದ್ಧಿ ಅಧಿಕಾರಿಯವರಿಗೆ, ಅತೀ ಶೀಘ್ರವಾಗಿ ತೆರಿಗೆ ಪಾವತಿಸದೇ ಇರುವವರಿಗೆ ನೋಟಿಸು ಜಾರಿಗೊಳಿಸುವ ಮೂಲಕ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಸ್ವಾತಂತ್ರ್ಯೋತ್ಸವ ದಿನದಂದು ನೀರಿನ ಶುಲ್ಕ ಸಂಗ್ರಹಕ್ಕೆ ತಂತ್ರಾಂಶವನ್ನು ಜಾರಿಗೊಳಿಸಲಾಗುವುದು. ಆ ಮೂಲಕ ನೂರು ಶೇಕಡ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ ಎಂದು ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಹೇಳಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ, ಸದಸ್ಯರುಗಳಾದ ನಾರಾಯಣ ಶೆಟ್ಟಿ ತೋಟ, ರಮಣಿ.ಡಿ.ಪೂಜಾರಿ, ಸೀತಾ, ಸುಜಾತ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಗಟ್ಟಿ ಇಲಾಖೆ ಮತ್ತು ಸಾರ್ವಜನಿಕ ಅರ್ಜಿಗಳನ್ನು ಸಭೆಯಲ್ಲಿ ಮಂಡಿಸಿದರು ಮತ್ತು ಎಲ್ಲರನ್ನೂ ಸ್ವಾಗತಿಸಿದರು.
ಪಂಚಾಯತ್ ಸಿಬ್ಬಂದಿ ಸಹಕರಿಸಿದರು.