ವಿಟ್ಲ: ಕೃಷಿ ಭೂಮಿಯಲ್ಲಿ ವಿದ್ಯುತ್ ಟವರ್ ಗೆ ಅವಕಾಶ ನೀಡುವುದಿಲ್ಲ: ರೈತ ಸಂಘ ಎಚ್ಚರಿಕೆರೈತ ಸಂಘದ ವತಿಯಿಂದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ರೈತರಿಗೆ ಕಂಠಕವಾಗಿರುವ ಯೋಜನೆಗೆ ನಿರಾಪೇಕ್ಷಣೆ ನೀಡಬಾರದು ಎಂಬ ನಿಟ್ಟಿನಲ್ಲಿ ನೋಟೀಸ್ ನೀಡಲಾಗುವುದು. ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳನ್ನು ಬೇಟಿ ಮಾಡಿ ಈ ಯೋಜನೆಯ ಬಗ್ಗೆ ವಿರೋಧ ವ್ಯಕ್ತ ಪಡಿಸಲಾಗುವುದು. ಜಿಲ್ಲಾಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಅಂಚೆ ಕಾರ್ಡ್ ಚಳವಳಿಯನ್ನು ತಕ್ಷಣ ಆರಂಭಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮನೋಹರ್ ಶೆಟ್ಟಿ ನಡಿಕಂಬಳಗುತ್ತು ಹೇಳಿದರು.
ಅವರು ವಿಟ್ಲದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ರೈತರ ಆದಾಯದ ಮೂಲವಾದ ಕೃಷಿ ಭೂಮಿಯಲ್ಲೇ ವಿದ್ಯುತ್ ಟವರ್ ನಿರ್ಮಾಣ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಜಿಲ್ಲೆಯ ಶಾಸಕರು ಹಾಗೂ ಸಂಸದರ ಹೃದಯವಂತಿಕೆಯಿಂದ ಕೈಗಾರಿಕೆಗಳು ಜಿಲ್ಲೆಯಲ್ಲಿ ಕೃಷಿಕರ ವಿರೋಧದ ನಡುವೆಯೂ ತುಂಬುತ್ತಿದೆ. ರೈತ ಸಂಘದ ಹೋರಾಟ ಜಿಲ್ಲೆಯ ಸಂಸದರು ಎತ್ತಿನ ಹೋಳೆ ಹೋರಾಟದ ಮಾಡಿದ ಹಾಗಲ್ಲ ಇರುವುದಿಲ್ಲ. ರೈತರಿಗೆ ನ್ಯಾಯ ಸಿಗುವವರೆಗೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ ವಿದ್ಯುತ್ ಮಾರ್ಗದಿಂದ ಒಂದು ಸಾವಿರ ಹೆಕ್ಟೇರ್ ನಷ್ಟು ಕೃಷಿ ಭೂಮಿ ಯೋಜನೆಯಿಂದ ನಾಶವಾಗುತ್ತಿದೆ. ಯೋಜನೆಯ ಸಾಧಕ ಬಾದಕಗಳನ್ನು ವಿಮರ್ಷೆ ಮಾಡದೆ ಏಕಾಏಕಿ ಅನುಮತಿ ನೀಡಿರುವ ಕ್ರಮ ಸರಿಯಲ್ಲ. ಜೀವ ಬಿಟ್ಟೇವು ಜಾಗ ಬಿಡೆವು, ರಕ್ತ ಕೊಟ್ಟೇವು ಭೂಮಿ ಬಿಡೆವು ಎಂಬ ದ್ಯೇಯದಲ್ಲಿ ಹೋರಾಟ ನಡೆಯಲಿದೆ. ಕಂಪನಿಯ ಸಿಬ್ಬಂದಿಗಳು ಕೃಷಿ ಭೂಮಿಗೆ ಕಾಲಿಟ್ಟರೆ ಕಟ್ಟು ಹಾಕುವ ತೀರ್ಮಾನವನ್ನು ಮಾಡಲಾಗಿದೆ. ಈಗಾಗಲೇ ತೆಗೆದ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಸಂಘ ಮಾಡಲಿದೆ ಎಂದು ತಿಳಿಸಿದರು.
ರೈತ ಹೋರಾಟ ಸಂಘದ ಅಧ್ಯಕ್ಷ ರಾಜೀವ ಗೌಡ ಕೆ. ಮಾತನಾಡಿ ರೈತರ ಜಮೀನು ಹಾಗೂ ಮನೆಯ ಮೇಲೆ ವಿದ್ಯುತ್ ಮಾರ್ಗ ಹಾದುಹೋಗುತ್ತಿದ್ದು, ಈ ಭಾಗದಲ್ಲಿರುವ ರೈತರು ಯಾರೂ ಬಹಳಷ್ಟು ಭೂಮಿಯನ್ನೂ ಹೊಂದಿಲ್ಲ. ಈ ಕೃಷಿ ಭೂಮಿಯನ್ನೇ ಅವಲಂಬಿತರಾಗಿದ್ದು, ಜೀವನಕ್ಕೆ ಬೇರೆ ದಾರಿಯಿಲ್ಲ ಎಂದು ಹೇಳಿದರು.
ಸಂತ್ರಸ್ತ ರೈತ ಅನಿಲ್ ಮೆಲ್ವಿನ್ ರೆಗೋ ಮಾತಾಡಿ ಉಷ್ಣವಿದ್ಯುತ್ ಸ್ಥಾವರದಿಂದ ಈಗಾಗಲೇ ಸಾಕಷ್ಟು ಸಮಸ್ಯೆ ಇದೆ. ಇದರ ಬದಲಾಗಿ ಪರಿಸರಕ್ಕೆ ಪೂರಕವಾದ ಪರ್ಯಾಯ ಶಕ್ತಿ ಸಂಪನ್ಮೂಲಗಳನ್ನು ಕೇರಳದಲ್ಲಿ ಮಾಡಲಿ. ಭೌಗೋಳಿಕ ವ್ಯವಸ್ಥೆ ಮೇಲೆ ಕೃಷಿಯನ್ನು ನಡೆಸುತ್ತಿದ್ದು, ಈಗ ಕೃಷಿ ಬದಲಾವಣೆ ಮಾಡಿ ಎಂದರೆ ಅಸಾಧ್ಯ. ಕೃಷಿಕರು ಸ್ವಾವಲಂಬನೆಯ ಬದುಕು ನಡೆಸುವವರು, ಪರಿಹಾರ ಪಡೆದು ಬದುಕು ನಡೆಸಲು ಸಾಧ್ಯವಿಲ್ಲ ಎಂದರು.
ಹೋರಾಟ ಸಮಿತಿ ಕಾರ್ಯದರ್ಶಿ ರೋಹಿತಾಕ್ಷ ಬಂಗ ವೀರಕಂಭ ಹಸಿರು ಉಳಿಸಿ ಎಂದು ಹೇಳುವ ಸರ್ಕಾರ ಯೋಜನೆಗಳ ಹೆಸರಿನಲ್ಲಿ ಕೃಷಿ, ಗಿಡ ಮರ, ಪರಿಸರಗಳ ನಾಶಕ್ಕೆ ಮುಂದಾಗುತ್ತಿದೆ. ರೈತರ ಮೇಲೆ ಯೋಜನೆಗಳ ಹೆಸರಿನಲ್ಲಿ ದಬ್ಬಾಳಿಕೆಗಳನ್ನು ಬಿಟ್ಟು, ರೈತರನ್ನು ನ್ಯಾಯುತವಾಗಿ ಬದುಕಲು ಬಿಡಿ ಎಂದರು.
ಸಂತ್ರಸ್ತರ ರೈತ ಚಿತ್ತರಂಜನ್ ನೆಕ್ಕಿಲ್ಲಾರ್ ಮಾತನಾಡಿ ಜು.೧೨ರಂದು ೪ಗಂಟೆಗೆ ಸುಮಾರಿಗೆ ನಮ್ಮ ಖಾಸಗೀ ಜಮೀನಿಗೆ ಇಬ್ಬರು ವ್ಯಕ್ತಿಗಳು ಕಳ್ಳರ ಹಾಗೆ ಆಗಮಿಸಿದ್ದು, ತೋಟಕ್ಕೆ ಹೋಗುವಷ್ಟು ಹೊತ್ತಿಗೆ ಪಲಾಯನ ಮಾಡಿದ್ದಾರೆ. ಅಕ್ರಮವಾಗಿ ಖಾಸಗೀ ಜಮೀನಿಗೆ ಗುರುತು ಪರಿಚಯವಿಲ್ಲದವರು ನುಗ್ಗುತ್ತಿರುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುದ್ದೇಶ್ ಮಯ್ಯ, ವಿಟ್ಲ ತಾಲೂಕು ಕಾರ್ಯದರ್ಶಿ ಸುದೇಶ್ ಭಂಡಾರಿ, ಹೋರಾಟ ಸಮಿತಿ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ, ಕೃಷ್ಣ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.