Saturday, April 6, 2024

*ಪಡುಬಿದ್ರಿಯಿಂದ ಕೇರಳಕ್ಕೆ ವಿದ್ಯುತ್ ಲೈನ್* *ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಹತ್ತಾರು ಹಳ್ಳಿಗಳಲ್ಲಿ ಆತಂಕ*

– ನಿಶಾಂತ್ ಬಿಲ್ಲಂಪದವು ವಿಟ್ಲ

ಈಗಾಗಲೇ ಹಲವು ಕೈಗಾರಿಕೆಗಳು, ಪೈಪ್‌ಲೈನ್, ವಿದ್ಯುತ್ ಯೋಜನೆಗಳಿಂದ ನಲುಗಿರುವ ಕರಾವಳಿ ಜಿಲ್ಲೆಗಳ ಮೂಲಕ ಈಗ ಕೇರಳದ ಬೃಹತ್ ವಿದ್ಯುತ್ ಮಾರ್ಗ ನಿರ್ಮಾಣ ಯೋಜನೆಯು ಸದ್ದಿಲ್ಲದೆ ಜಾರಿಗೊಳ್ಳುತ್ತಿದೆ.

ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿರುವ ಯುಪಿಸಿಎಲ್‌ನಿಂದ ದಕ್ಷಿಣ ಕನ್ನಡ ಜಿಲ್ಲೆ ಮೂಲಕ ಕಾಸರಗೋಡು ಪ್ರವೇಶಿಸುವ 400 ಕೆ.ವಿ. ವಿದ್ಯುತ್ ಮಾರ್ಗ (ಎರಡು ಲೈನ್) ನಿರ್ಮಾಣದ ಯೋಜನೆಯಿದು. ಉತ್ತರ ಕೇರಳದ ವಿದ್ಯುತ್ ಸಮಸ್ಯೆ ನೀಗಿಸುವ ಹಾಗೂ ದಕ್ಷಿಣ ಭಾರತ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ಮಾರ್ಗದ ದಟ್ಟಣೆ ನಿವಾರಣೆಯ ಉದ್ದೇಶದಲ್ಲಿ ಕೈಗೊಳ್ಳಲಾಗುತ್ತಿರುವ ಈ ಯೋಜನೆಯ ಮೊತ್ತ 847 ಕೋಟಿ ರೂ.

ಈ ವಿಶೇಷ ವಿದ್ಯುತ್ ಮಾರ್ಗ ರಚನೆ ಹಾಗೂ ಕಾಸರಗೋಡಿನಲ್ಲಿ ಗ್ರಿಡ್ ನಿರ್ಮಾಣಕ್ಕಾಗಿ ‘ಉಡುಪಿ- ಕಾಸರಗೋಡು ಟ್ರಾನ್ಸ್‌ಮಿಶನ್ ಲಿಮಿಟೆಡ್’ ಎಂಬ ಕಂಪನಿ ಆರಂಭಿಸಲಾಗಿದೆ. ಕೇಂದ್ರ ಸರ್ಕಾರ, ಅರಣ್ಯ ಇಲಾಖೆ, ಜಿಲ್ಲಾಡಳಿತಗಳೂ ಡಬಲ್ ಸರ್ಕ್ಯೂಟ್ ಟ್ರಾನ್ಸ್‌ಮಿಷನ್ ಲೈನ್ ಯೋಜನೆಗೆ ಒಪ್ಪಿಗೆ ನೀಡಿರುವ ಮಾಹಿತಿ ಲಭಿಸಿದೆ.

ಸ್ಟೆರ್ಲೈಟ್ ಪವರ್ ಎಂಬ ಸಂಸ್ಥೆಯು ಟ್ಯಾರಿಫ್ ಆಧರಿತ ಸ್ಪರ್ಧಾತ್ಮಕ ಬಿಡ್ಡಿಂಗ್(ಟಿಬಿಸಿಬಿ)ನಲ್ಲಿ ಯೋಜನೆ ಜಾರಿಗೊಳಿಸುತ್ತಿದ್ದು, ಅವಧಿಗಿಂತ 8 ತಿಂಗಳು ಮೊದಲೇ, ಅಂದರೆ 2020ರ ಮಾರ್ಚ್ ಹೊತ್ತಿಗೆ ಕೆಲಸ ಪೂರ್ಣಗೊಳಿಸುವುದಾಗಿ ತಿಳಿಸಿದೆ.

ಸದ್ಯ ಸರ್ವೇ ಕಾರ್ಯ ನಡೆಯುತ್ತಿದ್ದು, ಕೆಲವು ಕಡೆ ಟವರ್ ನಿರ್ಮಾಣಕ್ಕೆ ಬೃಹತ್ ಗುಂಡಿಗಳನ್ನೂ ತೋಡಲಾಗುತ್ತಿದೆ. ಕೇಪು ಗ್ರಾಮದ ಕೊಲ್ಲಪದವು ಎಂಬಲ್ಲಿ ಖಾಸಗಿಯವರ ವಶದಲ್ಲಿರುವ ಕುಮ್ಕಿ ಜಾಗದಲ್ಲಿ ಯಾವುದೇ ಮಾಹಿತಿ ನೀಡದೆ, ಸರ್ವೇ ಕಾರ್ಯ ನಡೆಸಿ ರಸ್ತೆ ನಿರ್ಮಿಸಿ ಟವರ್ ನಿರ್ಮಾಣಕ್ಕೆ ಆಳೆತ್ತರದ ಗುಂಡಿ ತೆಗೆಯಲಾಗಿದೆ. ಪಂಜಿಕಲ್ಲು ಕಾಲೊನಿ ಭಾಗದಲ್ಲಿ ಪಂಚಾಯಿತಿ ನೀರಿನ ಟ್ಯಾಂಕ್ ಬಳಿಯಲ್ಲೂ ಸರ್ವೇ ಮಾಡಿ ಟವರ್ ಸ್ಥಳ ಗುರುತಿಸುವ ಕಾರ್ಯ ನಡೆದಿದೆ.

* ಸರ್ವೇಗೆ ಡಿಸಿ ಅನುಮತಿ: ಜಿಲ್ಲೆಯಲ್ಲಿ ಸಾರ್ವಜನಿಕ ಜನಜೀವನಕ್ಕೆ ತೊಂದರೆಯಾಗದಂತೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ನೀಡಿ ಸರ್ವೇ ನಡೆಸಲು ಸ್ಟೆರ್ಲೈಟ್ ಪವರ್ ಟ್ಸಾನ್ಸಿಶನ್ ಲಿ. ಕಂಪನಿಗೆ ದ.ಕ. ಜಿಲ್ಲಾಧಿಕಾರಿ ಅನುಮತಿ ಪತ್ರ ನೀಡಿದ್ದಾರೆಂದು ಸಂಸ್ಥೆ ಪ್ರತಿನಿಧಿಗಳು ದಾಖಲೆ ಪ್ರದರ್ಶಿಸುತ್ತಾರೆ. ಆದರೆ ಈ ಅನುಮತಿ ಪತ್ರದಲ್ಲಿ ದಿನಾಂಕ ಇಲ್ಲದಿರುವುದು ಅನುಮಾನಕ್ಕೆ ಕಾರಣವಾಗಿದೆ. ಸ್ಥಳೀಯ ಪಂಚಾಯಿತಿಗಳಿಗೂ ಕಂಪನಿ ಪ್ರತಿನಿಧಿಗಳು ಮಾಹಿತಿ ನೀಡುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದ್ದು, ಸ್ಥಳೀಯರಿಂದ ಅಲ್ಲಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಇತ್ತೀಚೆಗಷ್ಟೇ ನಿಡ್ಡೋಡಿಯಲ್ಲಿ ಗ್ರಾಮಸ್ಥರು ಸರ್ವೇ ತಂಡವನ್ನು ವಾಪಸ್ ಕಳುಹಿಸಿದ್ದನ್ನು ಸ್ಮರಿಸಬಹುದು. ತಾಕೊಡೆಯಲ್ಲಿ ಯಂತ್ರೋಪಕರಣಗಳನ್ನು ತಂದಿಟ್ಟಿರುವ ಮಾಹಿತಿಯೂ ಇದೆ.

 

310 ಕಡೆ ಟವರ್ ನಿರ್ಮಾಣ:

ಯೋಜನೆ ಆರಂಭಕ್ಕೆ ರೂಪುರೇಷೆ ಸಿದ್ಧವಾಗಿದ್ದು 2013ರಲ್ಲಿ. 2020ರ ಆಗಸ್ಟ್‌ನಲ್ಲಿ ಅಧಿಕೃತ ಚಾಲನೆ ಪಡೆದಿತ್ತು. ವಿದ್ಯುತ್ ಮಾರ್ಗ ಸಾಗುವ ಉಡುಪಿ, ದ.ಕ. ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಒಟ್ಟು 310 ಕಡೆ ಫೌಂಡೇಶನ್ ನಿರ್ಮಾಣ ನಡೆಯಬೇಕಿದೆ. 127 ಟವರ್‌ಗಳು ಕೇರಳ ವ್ಯಾಪ್ತಿಯಲ್ಲಿ ಹಾಗೂ 183 ಕರ್ನಾಟಕ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿವೆ. 24 ಟವರ್ ಸ್ಥಳಗಳು ಕರ್ನಾಟಕ ಅರಣ್ಯ ವ್ಯಾಪ್ತಿಯಲ್ಲಿ ಬರುತ್ತದೆ.

………..

ಕೃಷಿ ಭೂಮಿಗೆ ಹಾನಿ ಇಲ್ಲ?:

ಉಡುಪಿ-ಕಾಸರಗೋಡು ವಿದ್ಯುತ್ ಮಾರ್ಗದ ಉದ್ದ 68.191 ಕಿ.ಮೀ. (ಕರ್ನಾಟಕದಲ್ಲಿ) ಆಗಿದ್ದು, ಇದರಲ್ಲಿ 4.91 ಕಿ.ಮೀ. ಅರಣ್ಯ ಭೂಮಿ. ಉಳಿದ 63.281 ಕಿ.ಮೀ. ಅರಣ್ಯೇತರವಾಗಿದೆ. ಸುಮಾರು 313.675 ಹೆಕ್ಟೇರ್ ಜಾಗವನ್ನು ವಿದ್ಯುತ್ ಟವರ್‌ಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಅರಣ್ಯ ವ್ಯಾಪ್ತಿಯಲ್ಲಿ 22.585 ಹೆಕ್ಟೇರ್ ಜಾಗ ಬರುತ್ತದೆ. ಯೋಜನೆಗೆ ಬಳಕೆಯಾಗುವ ಕೃಷಿ ಹಾಗೂ ಖಾಸಗಿ ಜಮೀನು ಮಾಹಿತಿ ಇನ್ನೂ ಲಭ್ಯವಿಲ್ಲ. ಆದರೆ ಯೋಜನೆಯಿಂದ ಯಾರೂ ಸಂತ್ರಸ್ತರಾಗುವುದಿಲ್ಲ ಎಂದು ಕಂಪನಿ ಹೇಳುತ್ತಿದೆ. ಈ ಕುರಿತು ಕೆಲದಿನಗಳ ಹಿಂದಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ಮಾಜಿ ಸಚಿವ ರಮಾನಾಥ ರೈ, ತಂತಿ ಹೋಗುವ ಪ್ರದೇಶದಲ್ಲಿ 60 ಮೀಟರ್ (200 ಅಡಿ) ಜಾಗವನ್ನು ಕೃಷಿ ಮತ್ತಿತರ ಉದ್ದೇಶಗಳಿಗೆ ಬಳಸುವಂತಿಲ್ಲ, ಇದರಿಂದ ಕೃಷಿಕರಿಗೆ ತೊಂದರೆಯಾಗಲಿದೆ. ಇದರ ಬದಲು ಮಣ್ಣಿನ ಅಡಿಯಲ್ಲಿ ಕೇಬಲ್ ಹಾಕುವಂತೆ ಒತ್ತಾಯಿಸಿದ್ದರು.

……….

ಲೈನ್ ಸಾಗುವ ಹಾದಿ:

ವಿದ್ಯುತ್ ಲೈನ್ ಪಡುಬಿದ್ರಿ- ಮೂಡುಬಿದಿರೆ – ಬಂಟ್ವಾಳ ತಾಲೂಕುಗಳ ಮೂಲಕ ಕೇರಳಕ್ಕೆ ಸಾಗಲಿದೆ. ಈ ಮಾರ್ಗದಲ್ಲಿ ಬರುವ ಕೆಲವು ಗ್ರಾಮಗಳು ಇಂತಿವೆ: ಎಲ್ಲೂರು, ನಂದಿಕೂರು, ಸಾಂತೂರು, ಬಡಗ ಎಡಪದವು, ತೆಂಕ ಎಡಪದವು, ಕಿಲೆಂಜೂರು, ಕೊಳವೂರು, ಕರ್ವೆ, ಅರಳ, ಪಂಜಿಕಲ್ಲು, ಬಂಟ್ವಾಳ, ನರಿಕೊಂಬು, ಶಂಭೂರು, ಬಾಳ್ತಿಲ, ಅನಂತಾಡಿ, ವೀರಕಂಬ, ವಿಟ್ಲ, ವಿಟ್ಲಮುಡ್ನೂರು, ಕೇಪು, ಪುಣಚ.

………..

ಅದಿರಿನ ಹೆಸರಿನಲ್ಲಿ ನಡೆದಿತ್ತೇ ಸರ್ವೇ?

ಕೇಂದ್ರ ಸರ್ಕಾರದ ನಿರ್ದೇಶಾನುಸಾರ ಕೇರಳ ವಿಭಾಗದ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ 2015ರ ಜನವರಿಯಲ್ಲಿ 814 ಕಿ.ಮೀ. ವ್ಯಾಪ್ತಿಯ ಮಣ್ಣಿನ ಸ್ಯಾಂಪಲ್ ಪಡೆದುಕೊಂಡು ಮಣ್ಣಿನ ಗುಣ ಲಕ್ಷಣಗಳನ್ನು ಅಧ್ಯಯನ ನಡೆಸಿದ್ದ ಬಗ್ಗೆ ‘ವಿಜಯವಾಣಿ’ ಅಂದೇ ವರದಿ ಮಾಡಿತ್ತು. ಇದೇ ಸಮಯದಲ್ಲಿ ಹೆಲಿಕಾಪ್ಟರ್‌ಗಳ ಹಾರಾಟವೂ ಅನುಮಾನಾಸ್ಪದವಾಗಿ ಈ ಭಾಗದಲ್ಲಿ ನಡೆದಿತ್ತು. ವಿದ್ಯುತ್ ಟವರ್ ನಿರ್ಮಾಣಕ್ಕೆ ಅಗತ್ಯವಿರುವ ಜಾಗಗಳ ಮಣ್ಣಿನ ಗುಣ ಲಕ್ಷಣಗಳನ್ನು ಅದಿರಿನ ಹೆಸರಿನಲ್ಲಿ ಸರ್ವೇ ನಡೆಸುವ ಕಾರ್ಯಕ್ಕೆ ಕೇರಳ ಸರ್ಕಾರ ಮುಂದಾಗಿತ್ತಾ ಎಂಬ ಅನುಮಾನಕ್ಕೆ ಈಗ ಬಲ ಸಿಕ್ಕಿದೆ.

………..

* ಯೋಜನೆಗೆ ಬಳಕೆಯಾಗುವ ಭೂಮಿಯ ವಿವರ:

ಜಿಲ್ಲೆ ಅರಣ್ಯ ಭೂಮಿ ಅರಣ್ಯೇತರ ಲೈನ್ ಉದ್ದ

ದ.ಕ. 15.265 ಹೆಕ್ಟೇರ್ 186.400 ಹೆಕ್ಟೇರ್ 43.841 ಕಿ.ಮೀ.

ಉಡುಪಿ 7.320 ಹೆಕ್ಟೇರ್ 104.690 ಹೆಕ್ಟೇರ್ 24.35 ಕಿ.ಮೀ.

ಒಟ್ಟು 22.585 ಹೆಕ್ಟೇರ್ 291.09 ಹೆಕ್ಟೇರ್ 68.191 ಕಿ.ಮೀ.

More from the blog

ಮಂಗಳೂರು: ‘ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್’ ಸಂಸ್ಥೆಯ ಸಂಗೀತ ಕ್ಷೇತ್ರದಲ್ಲಿ ಸಂಪುಟ 2′ ರ ನೂತನ ಕೃತಿ ಲೋಕಾರ್ಪಣೆ

ಮಂಗಳೂರು: ಮಂಗಳೂರಿನ ಕುಲಶೇಖರದಲ್ಲಿರುವ 'ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್' ಸಂಸ್ಥೆಯ ಪ್ರಕಾಶನದಲ್ಲಿ ಇಂಗ್ಲಿಷ್, ಹಿಂದಿ ಮತ್ತು ಕನ್ನಡದ ಜನಪ್ರಿಯ ಹಾಡುಗಳನ್ನು ಪಾಶ್ಚಿಮಾತ್ಯ ನೊಟೇಶನ್ ಮೂಲಕ ವಯಲಿನ್, ಗಿಟಾರ್ ಮತ್ತು ಕೀಬೋರ್ಡ್ ನಲ್ಲಿ...

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌ : ವಾರಾಂತ್ಯದಲ್ಲಿ ಚಿನ್ನದ ದರ ತುಸು ಇಳಿಕೆ…

ಬೆಂಗಳೂರು: ಚಿನ್ನದ ದರದಲ್ಲಿ ಮತ್ತೆ ಹಾವು ಏಣಿಯಾಟ ಶುರುವಾಗಿದೆ. ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇದೀಗ ಇಳಿಕೆಯಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ 10ಗ್ರಾಂ ಚಿನ್ನದ ಮೇಲೆ 450 ರೂ...

ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ- ಹರೀಶ್ ಇಂಜಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ...

ಪ್ರಧಾನಿ ಮೋದಿ ಕರೆ : ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ “ಮೆಹಂದಿ ಅಭಿಯಾನ" ನಡೆಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಮೋದಿ...