ಬಂಟ್ವಾಳ: ಕೈಕುಂಜೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಈಗ ಬಣ್ಣ ಬಣ್ಣದಿಂದ ಕಂಗೋಳಿಸುತ್ತಿದೆ.
ಇಲ್ಲಿಗೆ ಬರುವ ಪ್ರತಿಯೊಬ್ಬರ ಮನಸ್ಸು ಸಂತೋಷ ತುಂಬಬೇಕು ಎಂಬ ಉದ್ದೇಶದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಅವರ ವಿಶಿಷ್ಟ ಚಿಂತನೆ ಕಚಯನ್ನು ಕಂಗೊಳಿಸಿದೆ.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯು ವರ್ಲಿ ಹಾಗೂ ಮಧುಬನಿ ಶೈಲಿಯ ಅಲಂಕಾರಿಕಾ ನಕ್ಷೆಗಳಿಂದ ಕಂಗೊಳಿಸುತ್ತಿದ್ದು, ತಾಲೂಕಿನ ಚಿತ್ರಕಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಚಿತ್ರಕಲಾ ಶಿಕ್ಷಕರೇ ಸೇರಿಕೊಂಡು ಕಚೇರಿಯ ಅಂದವನ್ನು ಹೆಚ್ಚಿಸಿದ್ದಾರೆ.
ಕೈಕುಂಜೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯಲ್ಲಿ ಈ ಹಿಂದೆಯೂ ವರ್ಲಿ ಚಿತ್ತಾರಗಳಿದ್ದರೂ, ಪ್ರಸ್ತುತ ಹೊಸದಾಗಿ ಮತ್ತು ಕೊಂಚ ಭಿನ್ನವಾಗಿ ರೇಖಾ ಚಿತ್ರಗಳನ್ನು ಬಿಡಿಸಲಾಗಿದೆ. ಕಚೇರಿಯ ಒಳ ಭಾಗ, ಬಿಇಒ ಚೇಂಬರ್, ಮೇಲಿನ ಮಹಡಿ ಹೀಗೆ ಎಲ್ಲಾ ಕಡೆಯೂ ಬಣ್ಣ ಬಣ್ಣದ ಚಿತ್ತಾರಗಳು ಕಂಗೊಳಿಸುತ್ತಿವೆ.
ಈಗಾಗಲೇ ಬಹುತೇಕ ೯೦ ಶೇ.ದಷ್ಟು ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುರಳಿಕೃಷ್ಣ ರಾವ್ ವಾಮದಪದವು ಅವರ ನೇತೃತ್ವದಲ್ಲಿ ಚಿತ್ರಕಲಾ ಶಿಕ್ಷಕರಾದ ಚೆನ್ನಕೇಶವ ಡಿ.ಆರ್. ಪೆರ್ನೆ, ತಾರಾನಾಥ ಕೈರಂಗಳ, ಧನಂಜಯ ಕೊಯಿಲ, ಉಮೇಶ್ ಬೊಳಂತಿಮೊಗರು, ಅಮೀನಾ ಶೇಖ್ ಸಿದ್ದಕಟ್ಟೆ ಹಾಗೂ ಬಾಲಕೃಷ್ಣ ಶೆಟ್ಟಿ ಸಜೀಪಮೂಡ ಹೀಗೆ ೭ ಮಂದಿ ಶಿಕ್ಷಕರು ಈ ಕಾರ್ಯದಲ್ಲಿ ತೊಡಗಿದ್ದಾರೆ.
ಒಟ್ಟು ೧೪ ದಿನಗಳ ಕಾಲ ಈ ತಂಡ ಚಿತ್ತಾರಗಳನ್ನು ಬಿಡಿಸುವ ಕೆಲಸ ಮಾಡಿದ್ದು, ಶಿಕ್ಷಣ, ಬಾಲ್ಯ, ಆಚರಣೆಗಳು ಮೊದಲಾದ ವಿಚಾರವನ್ನು ಚಿಂಬಿಸುವ ರೇಖಾ ಚಿತ್ರಗಳು ಗಮನ ಸೆಳೆಯುತ್ತಿವೆ. ಪ್ರಸ್ತುತ ಶಾಲೆಗಳು ಇಲ್ಲದೇ ಇರುವುದರಿಂದ ಚಿತ್ರಕಲಾ ಶಿಕ್ಷಕರು ತಮ್ಮ ಸಮಯವನ್ನು ಸದುಪಯೋಗ ಪಡಿಸಿಕೊಂಡಿದ್ದು, ಬಿಇಒ ಕಚೇರಿಯ ಅಂದವನ್ನು ಹೆಚ್ಚಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಿಬಂದಿಯ ಸಹಕಾರದಿಂದ ಈ ಕಾರ್ಯ ಯಶಸ್ವಿಯಾಗಿ ನಡೆದಿದೆ.
ಚಿತ್ರಕಲಾ ಶಿಕ್ಷಕರ ಸಂಘವು ಇದೇ ರೀತಿ ಹಲವು ಕಡೆಗಳಲ್ಲಿ ವರ್ಲಿ ಚಿತ್ತಾರಗಳನ್ನು ಬಿಡಿಸುವ ಕಾರ್ಯ ಮಾಡಿದ್ದು, ಸರಕಾರಿ ಕಚೇರಿಗಳು ಸೇರಿದಂತೆ ಇತರೆಡೆಗಳಲ್ಲಿ ಬಣ್ಣ ಹಚ್ಚುವ ಕಾರ್ಯ ಮಾಡಿದ್ದಾರೆ. ಜತೆಗೆ ತಮ್ಮ ವಿದ್ಯಾರ್ಥಿಗಳನ್ನೂ ಕೂಡ ಸೇರಿಸಿಕೊಂಡು ಹಲವೆಡೆ ಚಿತ್ರಗಳನ್ನು ಬಿಡಿಸುವ ಕಾರ್ಯ ನಡೆದಿದೆ.