ಬಂಟ್ವಾಳ, ಆ.11: ಹಿದಾಯ ಫೌಂಡೇಶನ್ ಮಂಗಳೂರು ಇದರ ವತಿಯಿಂದ ‘ಕುಟುಂಬ ಶೈಕ್ಷಣಿಕ ದತ್ತು ಯೋಜನೆ’ಗೆ ಚಾಲನಾ ಕಾರ್ಯಕ್ರಮ ಕಾವಳಕಟ್ಟೆಯ ಹಿದಾಯ ಶೇರ್ ಮತ್ತು ಕೇರ್ ಕಾಲೋನಿಯಲ್ಲಿ ಗುರುವಾರ ನಡೆಯಿತು.
ಯೋಜನೆಗೆ ಚಾಲನೆ ನೀಡಿದ ನಿವೃತ್ತ ಐ.ಎ.ಎಸ್. ಅಧಿಕಾರಿ ಎ.ಬಿ.ಇಬ್ರಾಹೀಂ ಬಳಿಕ ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿದಾಯ ಫೌಂಡೇಶನ್ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಲ್ತಮಜಲ್ ಮಾತನಾಡಿದರು.
ಶೈಕ್ಷಣಿಕ ತರಬೇತುದಾರ ರಫೀಕ್ ಮಾಸ್ಟರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಹಿದಾಯ ಫೌಂಡೇಶನ್ ಅನಿವಾಸಿ ಸದಸ್ಯ ಮುಹಮ್ಮದ್ ಶಮೀಮ್, ಹಿದಾಯ ಫೌಂಡೇಶನ್ ಕೋಶಾಧಿಕಾರಿ ಝಿಯಾವುದ್ದೀನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 15 ಕುಟುಂಬಗಳಿಗೆ ಜ್ಞಾನ ಕಿಟ್ ಗಳನ್ನು ವಿತರಿಸಲಾಯಿತು. ಹಿದಾಯ ಫೌಂಡೇಶನ್ ನಿಂದ ಪ್ರತೀ ತಿಂಗಳು ಆಹಾರ ಸಾಮಗ್ರಿಗಳನ್ನು ವಿತರಿಸುವ 250 ಕುಟುಂಬಗಳನ್ನು ಸಮೀಕ್ಷೆ ನಡೆಸಿ ಅವುಗಳ ಪೈಕಿ ಅರ್ಹ 15 ಕುಟುಂಬಗಳನ್ನು ಆಯ್ಕೆ ಮಾಡಿ ಅವರ ಮಕ್ಕಳಿಗೆ ಸಂಪೂರ್ಣ ಶಿಕ್ಷಣ ಒದಗಿಸಲು ‘ಕುಟುಂಬ ಶೈಕ್ಷಣಿಕ ದತ್ತು ಯೋಜನೆ’ ರೂಪಿಸಲಾಗಿದೆ.
ಹಿದಾಯ ಫೌಂಡೇಶನ್ ಕಾರ್ಯಕ್ರಮ ಸಂಯೋಜಕ ಅಬ್ದುಲ್ ರಝಾಕ್ ಮಾಸ್ಟರ್ ಅನಂತಾಡಿ ಪ್ರಸ್ತಾವಿಸಿ, ಸ್ವಾಗತಿಸಿದರು. ಹಿದಾಯ ಫೌಂಡೇಶನ್ ಆಡಳಿತ ಅಧಿಕಾರಿ ಆಬಿದ್ ಅಝ್ಗರ್ ಧನ್ಯವಾದಗೈದರು. ಮುಹಮ್ಮದ್ ತುಂಬೆ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.