ತುಳುವರ ತುಳುನಾಡಿನ ಪವಿತ್ರ12 ತಿಂಗಳುಗಳಲ್ಲಿ ಅಮಾವಾಸ್ಯೆ ಬರುವುದು ಪಂಚಾಂಗ ಮತ್ತು ತಿಂಗಳ ಮಾಪನದಲ್ಲಿ ಖಡ್ಡಾಯವಾದರೂ ಕೆಲವು ತಿಂಗಳ ಅಮವಾಸ್ಯೆಗಳು ತುಳುವರಿಗೆ ಭಕ್ತಿ ಭಾವುಕತೆಯ ದಿನಗಳು, ಪವಿತ್ರತೆ ಮತ್ತು ತೀರ್ಥ ಸ್ನಾನಕ್ಕೊಂದು ಹಿಂದೂ ಬಾಂಧವರ ಆರಾಧನಾ ದಿನ ಅಮವಾಸ್ಯೆಯ ದಿನದಲ್ಲಿ ಇದೆ. ಅಮವಾಸ್ಯೆ ಹೆದರಿಕೆಯ ಮತ್ತು ಅನಿಷ್ಟದ ದಿನವೆಂದು ಜನ ಭಯ ಪಡುವ ದಿನವೂ ಹೌದು. ಆದರೆ ಆಟಿಯ ಅಮಾವಾಸ್ಯೆಯಂದು ರೋಗ ನಿರ್ಮೂಲನಕ್ಕೆ ಆಟಿ ತೀರ್ಥ ಸ್ನಾನ ಮಾಡಿದರೆ, ಸೋಣ ಸಂಕ್ರಾಂತಿಯ ದಿನದಂದು ತೀರ್ಥ ಸ್ನಾನ ಮಾಡುವ ನಂಬಿಕೆ ತುಳುವರಲ್ಲಿದೆ. ಆಟಿಯಲ್ಲಿ ಮುಚ್ಚಿರುವ,ಅಥವಾ ಒಂದು ಪೂಜೆಯನ್ನು ಪಡೆಯುವ ದೈವ ದೇವಸ್ಥಾನಗಳು ಸೋಣದಲ್ಲಿ ನವ ಭಕ್ತಿ ಪಲ್ಲಂಗವನ್ನು ಹೊತ್ತು ಮುಂದಿನ ವರ್ಷದ ಜವಬ್ದಾರಿಯೊಂದಿಗೆ ನಮ್ಮೆಲ್ಲರನ್ನು ಶುಚಿರ್ಬೂತಗೊಳಿಸುವ ತಿಂಗಳು.
ಆಟಿ ಅಮವಾಸ್ಯೆ ತುಳುನಾಡಿನ ಸಂಸ್ಕ್ರತಿಯ ಆಚಾರಗಳಲ್ಲಿ ಆರೋಗ್ಯ ವ್ರದ್ದಿಯಲ್ಲಿ, ರೋಗ ರುಜಿನಗಳ ವೈರಸನ್ನು ಸಮರ ಸಾರಲು ಆಟಿ ತಿಂಗಳ ಆಟಿ ತಿಂಗಳ ಆಟಿ ಅಮವಾಸ್ಯೆ ಪ್ರಧಾನ ಪಾತ್ರ ವಹಿಸುತ್ತದೆ.
ಆಟಿ ಅಮಾವಾಸ್ಯೆಯಂದು ಹಾಳೆಯ( ಪಾಲೆದ) ಮರದ ತೊಗಟೆ (ಕೆತ್ತೆ) ಯ ಕಷಾಯವನ್ನು ಕುಡಿದರೆ ಜೀವದಲ್ಲಿರುವ ಸರ್ವ ರೋಗಗಳು ಮಾಯವಾಗುತ್ತದೆ ಎನ್ನುವ ನಂಬಿಕೆ ಗಟ್ಟಿಗೊಳಿಸಿದ್ದಾರೆ ಹಿರಿಯರು.
ಈ ದಿನ ಬ್ರಾಹ್ಮೀ ಮುಹೂರ್ತದ ಸಮಯದಲ್ಲಿ ಪಾಲೆದ ಕೆತ್ತೆಯನ್ನು ಬಿಳಿ ಕಲ್ಲಿನಿಂದ( ಬೊಲ್ಲು ಕಲ್ಲು) ಕೆತ್ತಿ ಮನೆಯ ಯಜಮಾನ ಮನೆಗೆ ತರುತ್ತಾನೆ, ಆಟಿ ಅಮವಾಸ್ಯೆಯ ದಿನ ಈ ಹಾಳೆಯ ಮರದಲ್ಲಿ ರೋಗ ನಿರೋಧಕ ಮದ್ದಿನ ಗುಣಗಳು ಶೇಖರವಾಗುವುದಂತೆ. ಅದನ್ನು ತಂದು ಚೆನ್ನಾಗಿ ತೊಳೆದು ಜಜ್ಜಿ ಅರೆದು ಅದಕ್ಕೆ ಬೆಳ್ಳುಳ್ಳಿ, ಒಳ್ಳೆಮೆಣಸು, ಓಮ, ಸೇರಿಸಿ ಅದೇ ಬಿಳಿಕಲ್ಲನ್ನು ಬೆಂಕಿಯಲ್ಲಿ ಕಾಯಿಸಿ ಬಿಸಿ ಮಾಡಿ ಒಗ್ಗರಣೆ ಕೊಟ್ಟು ಕಷಾಯವನ್ನು ತಯಾರು ಮಾಡುತ್ತಾರೆ, ನಂತರ ಖಾಲಿ ಹೊಟ್ಟೆಗೆ ಮಕ್ಕಳಿಂದ ಹಿರಿಯರ ವರೆಗೆ ಅಲ್ಪ ಪ್ರಮಾಣದಲ್ಲಿ ಸೇವಿಸುತ್ತಾರೆ. ಇದು ನಡು ಮಳೆಗಾಲದ ರೋಗ ರುಜಿನಗಳನ್ನು ಹೊಗಲಾಡಿಸುತ್ತದೆ ಅನ್ನುವುದು ಸತ್ಯ. ಕಹಿ ಮದ್ದಾಗಿರುವ ಇದನ್ನು ಮಕ್ಕಳು ಕುಡಿಯಲಾರರು ಎಂದು ಬೆಲ್ಲದ ಲಂಚ ತೋರಿಸಿ ಮಕ್ಕಳಿಗೆ ಕಷಾಯವನ್ನು ಕುಡಿಸುತ್ತಿದ್ದರು.
ಇದು ರೋಗ ನಿರೋಧಕ ಔಷಧಿ ಎಂದು ವೈಜ್ಞಾನಿಕವಾಗಿ ಹೇಳಲಾಗಿದೆ, ಪ್ರಕ್ರತಿದತ್ತವಾಗಿ ಬಂದ ಈ ಗಿಡ ಮೂಲಿಕೆ ಸೇವಿಸಿದರೆ ಜೀವ ಉಷ್ಣಗೊಳ್ಳುತ್ತದೆ ಎಂದು ಪಾಲೆದ ಕಷಾಯ ಕುಡಿದ ಬಳಿಕ ಮೆಂತೆ ಗಂಜಿಯನ್ನು ಸೇವಿಸುತ್ತಾರೆ. ಅದು ಜೀವಕ್ಕೆ ತಂಪು ನೀಡುತ್ತದೆ ಇದು ಆರೋಗ್ಯ ಪದ್ದತಿಯ ಪ್ರತೀತಿ.
ಆಟಿಯ ಅಮವಾಸ್ಯೆ ಯ ದಿನದಂದು ರಾಹು ಗುಳಿಗ ದೈವಕ್ಕೆ ಬಡಿಸುವ ಸಂಪ್ರದಾಯ ಗ್ರಾಮೀಣ ಪ್ರದೇಶಗಳಲ್ಲಿ ಇದೆ ಈ ದಿನ ಗುಡ್ಡೆಯಲ್ಲಿರುವ ರಾಹುವಿನ ಕಲ್ಲು ಅಥವಾ ಕಟ್ಟೆಗೆ ಮಧು- ಮಾಂಸದ ಆಹಾರವನ್ನು ಬಡಿಸಿ ದೈವ ತ್ರಪ್ತಿಗೋಳಿಸಿ ಹೊರಗಿನ ದನ ಜಾನುವಾರು, ಕ್ರಷಿ ಭೂಮಿಯ ಸಂಕಷ್ಟ ಪ್ರಾರ್ಥಿಸಿ ಪರಿಹಾರದ ಮುಖೇನ ಅರಿಕೆ ಸಲ್ಲಿಸಿ ಸಂಸಾರ ಸಮೇತ ಊಟ ಮಾಡುವ ಕ್ರಮ ತುಳುವರಲ್ಲಿದೆ..
ಈ ದಿನ ಮುಂಜಾನೆ ಪಾಲೆದ ಕಷಾಯವನ್ನು ಕುಡಿದು ನಂತರ ತೀರ್ಥ ಸ್ನಾನ ಮಾಡಲು ಹೋಗುತ್ತಾರೆ, ಸೋಮೇಶ್ವರ, ಕಾರಿಂಜ, ಮುಂತಾದ ಶಿವ ದೇಗುಲಗಳಿಗೆ ತೆರಳಿ ಕಾಣಿಕೆ ಹಾಕಿ, ತರ್ಪಣ ಬಿಟ್ಟು ತೀರ್ಥ ಕೆರೆಯಲ್ಲಿ, ಸಮುದ್ರದ ಹಿನ್ನೀರಿನಲ್ಲಿ ಸ್ನಾನ ಮಾಡಿ ದೇಹ ಶುದ್ಧೀಕರಣ ಮಾಡಿ ಮನ ಹಗುರಾಗಿಸುತ್ತಾರೆ ಭಕ್ತರು.
ಈ ದಿನದಂದು ದೇಗುಲಗಳು ಮನೆ-ಮನದ ಭಕ್ತಿಯಾಲಯಗಳು.
ಹೌದು ಹಾಳೆಯ ಮರದ ತೊಗಟೆ ಕಷಾಯ ಆರೋಗ್ಯ ಸಂಜೀವಿನಿ. ಪಾಲೆದ ಮರ ತೊಗಟೆ ಹಾಗೂ ಕಷಾಯವನ್ನು ಮಾಡುವ ರೀತಿ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಯಲ್ಲಿ ಇದ್ದರೂ, ಪೇಟೆ ಪಟ್ಟಣಗಳಲ್ಲಿ ಸಿಗುವುದು ಅಪರೂಪ. ಅದಕ್ಕಾಗಿ ಕೆಲವು ಸಂಘಟನೆಗಳು ಸಾರ್ವಜನಿಕವಾಗಿ ಕಷಾಯ ನೀಡುವ ವ್ಯವಸ್ಥೆ ಮಾಡುತ್ತಿದೆ. ಅದನ್ನು ತಿಳಿದು ಆ ಮೂಲಕ ಕಷಾಯವನ್ನು ಸೇವಿಸಿ, ಇಂದಿನ ಕೋವಿಡ್ ಪರಿಸ್ಥಿತಿಯಲ್ಲಿ ಆರೋಗ್ಯ ಭಾಗ್ಯಕ್ಕೆ ಇದೂ ಸಹಕಾರಿಯಾಗ ಬಹುದು.
ಹಾಳೆಯ ಮರದಿಂದ ತೊಗಟೆಯನ್ನು ಮನೆಗೆ ಅಥವಾ ಸಾರ್ವಜನಿಕವಾಗಿ ಬಳಸುವವರು ದಯವಿಟ್ಟು ಮರವನ್ನು ಸರಿಯಾಗಿ ಗುರುತಿಸಿ, ಹಾಳೆಯ ಮರದ ತೊಗಟೆ ಸಂಗ್ರಹಿಸಿ, ಮರ ಬದಲಾಗಿ, ಕಷಾಯವನ್ನು ಮಾಡಿ ಅನುಭವವಿಲ್ಲದೆ ಆದ ಅದೆಷ್ಟೋ ಮ್ರತ್ಯುಗಳ ಉದಾಹರಣೆ ನಡೆದಿದೆ. ಜಾಗ್ರತೆಯೊಂದಿಗೆ ಆಟಿ ಅಮವಾಸ್ಯೆಯ ಪಾಲೆದ ಕೆತ್ತೆಯ ಕಷಾಯ ಸೇವಿಸಿ ಇದು ತುಳುನಾಡಿನ ಸಂಪ್ರದಾಯದ ರೋಗ ಸಂಜೀವಿನಿ. ಹಿರಿಯರ ಸಂಪ್ರದಾಯ ನಾವು ಆಚರಿಸುವುದು ತಪ್ಪೇನಿದೆ.
ಎಚ್ಕೆ ನಯನಾಡು