ಯುಎಇ, ಜು.9: ವಿಮಾನಯಾನ ರದ್ದುಗೊಂಡ ಹಿನ್ನೆಲೆಯಲ್ಲಿ ಭಾರತದಲ್ಲಿ ಬಾಕಿಯಾಗಿದ್ದ ಮೊದಲ ಹಂತದ 73 ಭಾರತೀಯ ಆರೋಗ್ಯ ಕಾರ್ಯಕರ್ತರನ್ನು ದುಬೈ ಆರೋಗ್ಯ ಪ್ರಾಧಿಕಾರ (ಡಿ.ಎಚ್.ಎ.)ಯಿಂದ ವಿಶೇಷ ಅನುಮತಿ ಪಡೆದು ಯು.ಎ.ಇ.ಗೆ ಕರೆಸಲಾಗಿದೆ ಎಂದು ಪ್ರತಿಷ್ಠಿತ ಆಸ್ಟರ್ ಡಿಎಂ ಸಂಸ್ಥೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಬಶೀರ್ ಬಂಟ್ವಾಳ ತಿಳಿಸಿದ್ದಾರೆ.
ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಏಪ್ರಿಲ್ 25ರಂದು ಭಾರತ – ಯು.ಎ.ಇ. ನಡುವಿನ ವಿಮಾನಯಾನ ರದ್ದುಗೊಂಡಿತ್ತು. ಇದರ ಪರಿಣಾಮ ಆಸ್ಟರ್ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳ ಒಟ್ಟು 250 ವೈದ್ಯಕೀಯ ಸಿಬ್ಬಂದಿ ಯು.ಎ.ಇ.ಗೆ ತೆರಳಲು ಸಾಧ್ಯವಾಗದೆ ಭಾರತದಲ್ಲಿ ಸಿಲುಕಿಕೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.
ಸಕಲ ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ವೈದ್ಯರು, ದಾದಿಯರು ಮತ್ತು ಅರೆವೈದ್ಯರು ಸೇರಿದ 73 ಮಂದಿಯ ಮೊದಲ ತಂಡವನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಅವರೆಲ್ಲೂ ಬುಧವಾರ ಮುಂಜಾನೆ ದುಬೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎರಡು ವಿಶೇಷ ಎಮಿರೇಟ್ಸ್ ವಿಮಾನಗಳಲ್ಲಿ ಬಂದಿಳಿದರು ಎಂದು ಬಶೀರ್ ಬಂಟ್ವಾಳ ಹೇಳಿದ್ದಾರೆ.
ವಿಮಾನ ಹಾರಾಟ ರದ್ದು ಆದೇಶ ಘೋಷಣೆಯಾದಾಗ ವಾರ್ಷಿಕ ಅಥವಾ ತುರ್ತು ರಜೆಯಲ್ಲಿ ತೆರಳಿದ್ದ ವೈದ್ಯಕೀಯ ವೃತ್ತಿಪರರು, ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡುವ ಅನುಭವ ಹೊಂದಿದವರು, ಕೋವಿಡ್ – 19 ರೋಗಿಗಳಿಗೆ ಚಿಕಿತ್ಸೆ ನೀಡಲು ಪರಿಣತಿಯನ್ನು ಹೊಂದಿದವರು ಸಹಿತ ಹೆಚ್ಚಿನ ಆರೋಗ್ಯ ಕಾರ್ಯಕರ್ತರು ಮತ್ತು ಕೆಲವು ಹೊಸ ನೇಮಕಾತಿಗಳು ಭಾರತದಲ್ಲಿ ಸಿಲುಕಿಕೊಂಡಿದ್ದರು.
ಈ ವ್ಯವಸ್ಥೆಯನ್ನು ಸಾಧ್ಯವಾಗಿಸುವಲ್ಲಿ ಆಸ್ಟರ್‌ಗೆ ನೀಡಿದ ಎಲ್ಲ ಬೆಂಬಲಕ್ಕಾಗಿ ದುಬೈ ಸರಕಾರ, ಡಿಎಚ್‌ಎ, ದುಬೈ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಎಮಿರೇಟ್ಸ್ ವಿಮಾನಯಾನ ಸಂಸ್ಥೆಗಳನ್ನು ಅಭಿನಂದಿಸಿರುವ ಬಶೀರ್ ಬಂಟ್ವಾಳ ಅವರು, ಭಾರತದಲ್ಲಿ ಇನ್ನೂ 250 ಸಿಬ್ಬಂದಿ ಸಿಲುಕಿಕೊಂಡಿದ್ದಾರೆ. ಅವರನ್ನೂ ಆದಷ್ಟು ಬೇಗ ಯು.ಎ.ಇ.ಗೆ ಕರೆ ತರಲು ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದಾರೆ.