ಬಂಟ್ವಾಳ: ಬಿ.ಸಿ.ರೋಡು-ಪೂಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದರೂ ನಮಗೆ ಇಲಾಖೆಯಿಂದ ಸಿಗಬೇಕಾದ ಪರಿಹಾರದ ಮೊತ್ತ ಬಂದಿಲ್ಲ ಎಂದು ಆರೋಪಿಸಿ ಪ್ರತಿಭಟನೆ ಸಿದ್ದವಾಗುತ್ತಿದ್ದಾರೆ ಮೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಇನ್ನೂರುಕ್ಕೂ ಮಿಕ್ಕಿದ ಸಂತ್ರಸ್ತರು.
ಮುಂದಿನ 15 ದಿನಗಳೊಳಗೆ ಸಂಬಂಧಿಸಿದ ಅಧಿಕಾರಿ ಗಳು ಸ್ಥಳಕ್ಕೆ ನೀಡಿ ಪರಿಹಾರದ ಬಗ್ಗೆ ಸ್ಪಷ್ಟವಾಗಿ ತಿಳಿಸದೆ ಇದ್ದಲ್ಲಿ ಭೂಸ್ವಾಧೀನ ಗೊಂಡ ನಮ್ಮ ಜಮೀನಿಗೆ ಜುಲೈ 20 ರಂದು ಬೇಲಿ ಹಾಕುವ ಮೂಲಕ ಪ್ರತಿಭಟನೆ ಮಾಡುತ್ತೇವೆ ಎಂದು ಸಂತ್ರಸ್ತರು ಎಚ್ಚರಿಕೆ ನೀಡಿದ್ದಾರೆ. ನಾವೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಅಳಲು ತೋಡಿಕೊಂಡ ಸಂತ್ರಸ್ತರು ಹೆದ್ದಾರಿ ಪ್ರಾಧಿಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸಂತ್ರಸ್ತರ ಪರವಾಗಿ ಸಿಪ್ರಿಯನ್ ಸಿಕ್ವೇರಾ ಮಾತನಾಡಿ, ಕಾಮಗಾರಿ ಆರಂಭಿಸುವ ಮೊದಲು ಭೂಸ್ವಾಧೀನ ಪ್ರಕ್ರಿಯೆಯ ಬಗ್ಗೆ ಸ್ಪಷ್ಟವಾದ ಮಾಹಿತಿ ಸಂತ್ರಸ್ತರಿಗೆ ನೀಡಿಲ್ಲ, ಕಾನೂನು ಪ್ರಕಾರ ಸರ್ವೆ ಕಾರ್ಯವನ್ನು ಇಲಾಖೆ ಮಾಡದೆ ಇದ್ದ ಪರಿಣಾಮವೇ ಇಂದು ನಮಗೆ ಮುಳುವಾಗಿದೆ ಎಂದು ಆರೋಪಿಸಿದರು.
ಸದಾನಂದ ನಾವೂರು ಮಾತನಾಡಿ,ಕೋವಿಡ್ ಕಾರಣದಿಂದ ಅಧಿಕಾರಿಗಳು ಆಸ್ಪತ್ರೆ ಸೇರಿದ್ದ ಹಿನ್ನೆಲೆಯಲ್ಲಿ ಪರಿಹಾರ ವಿತರಣೆ ವಿಳಂಬವಾಗಿದ್ದು, ಶೀಘ್ರದಲ್ಲಿ ಅವರ ಜಾಗದ ಮೊತ್ತ ಜಮೆಯಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಹೇಳುತ್ತಲೆ ಬಂದಿದ್ದಾರೆ ವಿನಹ ಪರಿಹಾರ ಮಾತ್ರ ನಮ್ಮ ಕೈ ಸೇರಲೇ ಇಲ್ಲ.
ಕಳೆದ ಎರಡು-ಮೂರು ವರ್ಷಗಳ ಹಿಂದೆ ಹೆದ್ದಾರಿಯ ಅಭಿವೃದ್ಧಿಗಾಗಿ ಬಂಟ್ವಾಳ ಪುರಸಭೆ ಸೇರಿದಂತೆ ತಾಲೂಕಿನ ನಾವೂರು, ಕಾವಳಮೂಡೂರು, ಕಾವಳಪಡೂರು ಹಾಗೂ ಪಿಲಾತಬೆಟ್ಟು ಗ್ರಾ.ಪಂ.ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂಸ್ವಾಧ್ವೀನಾಧಿಕಾರಿಯವರ ಮೂಲಕ ಹಲವಾರು ಮಂದಿಯ ಭೂಮಿಯನ್ನು ಸ್ವಾಧ್ವೀನ ಪಡಿಸಿಕೊಳ್ಳಲಾಗಿತ್ತು.
ಈ ರೀತಿ ಭೂಮಿ ಕಳೆದುಕೊಂಡವರ ದಾಖಲೆಯನ್ನು ಪಡೆದು ಕಳೆದ ಡಿಸೆಂಬರ್‌ನಲ್ಲಿ ಪ್ರತಿ ಭೂ ಮಾಲಕರಿಗೂ ಕೂಡ ಅವರ ಭೂಮಿಗೆ ನಿಗದಿ ಪಡಿಸಿದ ಮೊತ್ತವನ್ನು ನಮೂದಿಸಿ ನೋಟಿಸ್‌ವೊಂದನ್ನು ನೀಡಲಾಗಿದ್ದು, ಆದರೆ ಈ ತನಕ ಪರಿಹಾರ ಸಿಕ್ಕಿಲ್ಲ ಎಂದರು.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮೂಲಕ ಸ್ವಾಧ್ವೀನ ಪಡಿಸಿಕೊಂಡ ಭೂಮಿಗೆ ಬೆಂಗಳೂರಿನಿಂದಲೇ ವಿಶೇಷ ಭೂಸ್ವಾಧೀನಾಧಿಕಾರಿಗಳ ಮೂಲಕ ಪರಿಹಾರ ಮೊತ್ತ ನಿಗದಿಯಾಗುತ್ತಿದ್ದು, ಪಾವತಿಯ ಪ್ರಕ್ರಿಯೆಯನ್ನೂ ಅವರೇ ನೋಡಿಕೊಳ್ಳುತ್ತಾರೆ. ಆದರೆ ಕೋವಿಡ್ ಕಾರಣಕ್ಕೆ ಅಧಿಕಾರಿಗಳು ಹಾಸ್ಪಿಟಲೈಸ್ಡ್ ಆದ ಕಾರಣ ವಿಳಂಬವಾಗಿದೆ. ನಿಗದಿ ಪಡಿಸಿದ ಮೊತ್ತ ಭೂಮಾಲಕರಿಗೆ ಸಿಕ್ಕೇ ಸಿಗುತ್ತದೆ. ಕಡಿಮೆಯಾಗಿದ್ದರೆ ಕಾನೂನು ಹೋರಾಟಕ್ಕೇ ಅವಕಾಶವಿದೆ ಎಂಬುದು ಹೆದ್ದಾರಿ ಇಲಾಖೆ ಅಧಿಕಾರಿಗಳು ಹೇಳಿ ನಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದ್ದಾರೆ.
ಪ್ರತಿ ಭೂಮಾಲಕರಿಗೂ ಇಲಾಖೆ ಪತ್ರವೊಂದನ್ನು ನೀಡಿದ್ದು, ಗ್ರಾಮಾಂತರ ಭಾಗದಲ್ಲಿ ಎಕರೆಗೆ ನಿಗದಿ ಪಡಿಸಿದ ಮೌಲ್ಯ, ಗುಂಟೆಯೊಂದಕ್ಕೆ ನಿಗದಿ ಪಡಿಸಿದ ಮೌಲ್ಯ, ನಗರ ವ್ಯಾಪ್ತಿಯಿಂದ ಇರುವ ದೂರ, ಕಟ್ಟಡದ ಮೌಲ್ಯ, ಮರಗಳ ಮೌಲ್ಯ(ತೋಟಗಾರಿಕೆ), ಇತರ ಮರಗಳ ಮೌಲ್ಯ ನಿಗದಿ ಪಡಿಸಿ ಒಟ್ಟು ಪರಿಹಾರವನ್ನು ತಿಳಿಸಿದ್ದಾರೆ.
ನಮ್ಮ ಭೂಮಿಯ ಪರಿಹಾರ ಮೊತ್ತಕ್ಕೆ ೨೦೧೯-೨೦ನೇ ಸಾಲಿನ ಬಡ್ಡಿಯನ್ನು ನೀಡುವುದಾಗಿ ತಿಳಿಸಿದ್ದು, ೨೦೨೦-೨೧ನೇ ಸಾಲಿನ ಬಡ್ಡಿಯ ಕುರಿತು ಮಾಹಿತಿ ನೀಡಿಲ್ಲ. ಅಭಿವೃದ್ಧಿಗೆ ಅಡ್ಡಿಯಾಗಬಾರದು ಎಂದು ನಮ್ಮ ಪಟ್ಟಾ ಜಾಗ ಬಿಟ್ಟಿದ್ದೇವೆ, ಆದರೆ ಈಗ ಪರಿಹಾರ ನೀಡುವುದಕ್ಕೆ ವಿಳಂಬ ಮಾಡುತ್ತಿದ್ದಾರೆ ಎಂಬುದು ಭೂ ಮಾಲಕರ ಆರೋಪ.
ಹಾಗಾಗಿ ಇನ್ನು 15 ದಿನಗಳ ಕಾಲ ನೀಡುತ್ತೇವೆ ಅಧಿಕಾರಿಗಳ ಸ್ಪಂದನೆ ಸಿಗದಿದ್ದರೆ ಜುಲೈ 20 ರಂದು ಕಾವಳಮೂಡೂರು, ಕಾವಳಮೂಡೂರು, ಪಿಲಾತಬೆಟ್ಟು, ನಾವೂರ , ಹಾಗೂ ಬಂಟ್ವಾಳ ಪುರಸಭಾ ವ್ಯಾಪ್ತಿಯ ಗ್ರಾಮಸ್ಥರು
ನಮ್ಮ ಜಮೀನಿಗೆ ಅಂದರೆ ರಸ್ತೆಗೆ ಬೇಲಿ ಹಾಕಿ ಸಾಂಕೇತಿಕ ಪ್ರತಿಭಟನೆ ಮಾಡುವುದಾಗಿ ಸಂತಸ್ತರು ತಿಳಿಸಿದ್ದಾರೆ. ಸಂತ್ರಸ್ತರಾದ ಇಸ್ಮಾಯಿಲ್, ಪವನ್ ಕುಮಾರ್, ವಿಲ್ಫಟ್ರೆಡ್, ಪ್ರಭಾಕರ ಪೂಜಾರಿ, ರಾಮಚಂದ್ರ ಕುಲಾಲ್, ಜಯರಾಮ್, ಪ್ರವೀಣ್ ರೋಡ್ರಿಗಸ್, ಪ್ರವೀಣ್ ಸೋಮಯಾಜಿ, ಗೋಪಾಲ ಸಫಲ್ಯ, ವಸಂತ ಮೂಲ್ಯ, ನಾರಾಯಣ ಮೂಲ್ಯ, ವೆಂಕಪ್ಪ ಗೌಡ, ಮೋಹನ ಮತ್ತಿತರರು ಉಪಸ್ಥಿತರಿದ್ದರು.