ಮಂಗಳೂರು, ಜು. ೧೧: ವೃತ್ತಿ, ಪ್ರವೃತ್ತಿ, ಸಂಸಾರ ಸಮತೋಲನದಲ್ಲಿ ಇರಬೇಕು. ಬರಹಗಳು ಕತ್ತಲಲ್ಲಿ ಬೆಳಕನ್ನು ಬಗೆಯುವ ಕೆಲಸವನ್ನು ಮಾಡುತ್ತವೆ. ಪುಸ್ತಕ ಓದಿದರೆ ಮನಸ್ಸು ಪ್ರಫುಲ್ಲವಾಗುತ್ತದೆ. ಸುಘಾತ ಪುಸ್ತಕ ಲಯವಾದ್ಯದ ಆಳ, ಹರಹು, ಅರ್ಥ ಹಾಗೂ ವಿಷಯ ವ್ಯಾಪ್ತಿಯನ್ನು ಹೆಚ್ಚಾಗಿ ಹೊಂದಿ, ಕಲಾಮೌಲ್ಯವನ್ನು ವೃದ್ಧಿಸಿದೆ. ಹೋಗೋಣ ಜಂಬೂ ಸವಾರಿ ಪುಸ್ತಕ ಸರಳ ನಿರೂಪಣೆಯಿಂದ ಓದಿಸಿಕೊಂಡು ಹೋಗುತ್ತದೆ. ಲಘುಬರಹದಲ್ಲೂ ಜೀವನಪ್ರೀತಿ, ಜೀವನಮೌಲ್ಯಗಳನ್ನು ಇಲ್ಲಿ ಕಾಣಬಹುದು ಎಂದು ಕರ್ಣಾಟಕ ಬ್ಯಾಂಕ್ ಸಿಇಒ ಹಾಗೂ ಎಂಡಿ ಮಹಾಬಲೇಶ್ವರ ಎಂ.ಎಸ್. ಅವರು ಹೇಳಿದರು.
ಅವರು ಜು.೧೦ರ ಸಂಜೆ ವಾಮಂಜೂರಿನ ಪೆರ್ಮಂಕಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆದ , ಆನ್‌ಲೈನ್ ಮೂಲಕ ಪ್ರಸಾರವಾದ , ಉಜಿರೆ ಅಶೋಕ ಭಟ್ಟರಿಗೆ ಈಶಾವಾಸ್ಯ ಪುರಸ್ಕಾರ ನೀಡಿ, ಚೆಂಡೆ ಮದ್ದಳೆಗಳ ನಾದಾನುಸಂಧಾನ ಸುಘಾತ ಹಾಗೂ ಲಲಿತ ಪ್ರಬಂಧಗಳ ಸಂಕಲನ ಹೋಗೋಣ ಜಂಬೂಸವಾರಿ ಪುಸ್ತಕ ಅನಾವರಣಗೊಳಿಸಿ ಮಾತನಾಡಿದರು.
ಯಕ್ಷಗಾನ ಕಲಾವಿದ, ಸಂಘಟಕ ಉಜಿರೆ ಅಶೋಕ ಭಟ್ ಅವರಿಗೆ ಈಶಾವಾಸ್ಯ ಪುರಸ್ಕಾರ ನೀಡಲಾಯಿತು.
ಕರ್ಣಾಟಕ ಬ್ಯಾಂಕ್ ಅಧಿಕಾರಿ, ಲೇಖಕ, ಕಲಾವಿದ ಕೃಷ್ಣಪ್ರಕಾಶ್ ಉಳಿತ್ತಾಯ ಬರೆದ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಕಾಶಿಸಿದ ಸುಘಾತ ಪುಸ್ತಕ ಹಾಗೂ ಕರ್ಣಾಟಕ ಬ್ಯಾಂಕ್ ಉದ್ಯೋಗಿ, ಲೇಖಕಿ ವಿಭಾ ಕೃಷ್ಣಪ್ರಕಾಶ ಉಳಿತ್ತಾಯ ಬರೆದ, ಸಾಧನಾ ಪ್ರಕಾಶನ ಹೊರತಂದ ಹೋಗೋಣ ಜಂಬೂ ಸವಾರಿ ಪುಸ್ತಕಗಳನ್ನು ಅನಾವರಣಗೊಳಿಸಲಾಯಿತು.
ವಿಮರ್ಶಕ ಡಾ| ಎಂ. ಪ್ರಭಾಕರ ಜೋಷಿ ಅಧ್ಯಕ್ಷತೆ ವಹಿಸಿದ್ದರು.
ಚಿಂತಕ ಲಕ್ಷ್ಮೀಶ ತೋಳ್ಪಾಡಿ ವಿಶೇಷ ಅಭ್ಯಾಗತರಾಗಿದ್ದರು.
ಕೃಷ್ಣಪ್ರಕಾಶ ಉಳಿತ್ತಾಯ ಸ್ವಾಗತಿಸಿ, ವಿಭಾ ಕೃಷ್ಣ ಪ್ರಕಾಶ ಉಳಿತ್ತಾಯ ವಂದಿಸಿದರು. ಪತ್ರಕರ್ತ ಲಕ್ಷ್ಮೀ ಮಚ್ಚಿನ ನಿರ್ವಹಿಸಿದರು.
ಹಿರಿಯ ಕಲಾವಿದರ ಒಗ್ಗೂಡುವಿಕೆಯಲ್ಲಿ ಮಂಗಲ ಸೌಗಂಧಿಕಾ ಯಕ್ಷಗಾನ ತಾಳಮದ್ದಳೆ ನಡೆಯಿತು.