ಬಂಟ್ವಾಳ : ಕಳೆದೊಂದು ವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಒಮ್ಮಿಂದೊಮ್ಮೆ ನೆರೆಯ ಭೀತಿ ಎದುರಾದ ಸ್ಥಿತಿ ಬಂದಿದ್ದರೂ ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೆಲವೆಡೆಗಳಲ್ಲಿ ಕುಡಿಯಲು ನೀರಿಲ್ಲ ಎನ್ನುವ ಕೂಗು ಕೇಳಿಬಂದಿದೆ.
ಇದು ನಂಬಲಸಾಧ್ಯವಾದ ವಿಚಾರವಾದರೂ, ಸ್ಥಳೀಯಾಡಳಿತದ ನಿರ್ಲಕ್ಷ್ಯದಿಂದ ಈ ದುರ್ಗತಿ ಎದುರಾಗಿರುವುದಂತೂ ಸತ್ಯ. ಪುರಸಭಾ ವ್ಯಾಪ್ತಿಯ ಕಾಮಾಜೆ ಪರಿಸರದಲ್ಲಿ ಕಳೆದ ಮೂರು ದಿನಗಳಿಂದ ಕುಡಿಯುವ ನೀರಿಗೆ ತತ್ವಾರ ಉಂಟಾಗಿದ್ದು ಈ ಕುರಿತು ಪುರಸಭೆಯಲ್ಲಿ ವಿಚಾರಿಸಿದರೆ ಪಂಪ್ ಹಾಳಾಗಿದೆ ಎಂಬ ಉತ್ತರ ಬಂದಿದೆಯಂತೆ. ವಿಜ್ಞಾನ ತಂತ್ರಜ್ಞಾನ ಮುಂದುವರಿದಿರುವ ಈ ಕಾಲದಲ್ಲಿ ಸ್ಥಳೀಯಾಡಳಿತ ಮೂಲಭೂತ ಅಗತ್ಯಗಳನ್ನೇ ಪೂರೈಸುವಲ್ಲಿ ವಿಫಲವಾಗಿ ನೆಪಗಳನ್ನುನೀಡುತ್ತಿರುವುದು ಇಲ್ಲಿನನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ಜನಪ್ರತಿನಿಧಿಗಳೂ ತಮ್ಮ ಅಳಲು ಕೇಳುತ್ತಿಲ್ಲ, ಆದರೆ ತಿಂಗಳಿಗೊಮ್ಮೆ ನೀರಿನಬಿಲ್ ವಸೂಲಿಗೆ ಅಧಿಕಾರಿಗಳು ಬರುವುದನ್ನು ಮಾತ್ರ ತಪ್ಪಿಸುವುದಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.