ಬಂಟ್ವಾಳ: ಇಲ್ಲಿನ ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕಳೆದ ಹಲವು ವರ್ಷಗಳಿಂದ ಕೋಟಿಗೂ ಮಿಕ್ಕಿ ಮೊತ್ತದ ಅವ್ಯವಹಾರ ನಡೆದಿದ್ದು, ಇದನ್ನು ಸಹಕಾರ ಇಲಾಖೆ ಗಂಬೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯ ಜೊತೆಗೆ ಆಡಳಿತ ಮಂಡಳಿ ಬರ್ಖಾಸ್ತುಗೊಳಿಸಬೇಕು ಎಂದು ಆರ್ ಟಿ ಐ ಕಾರ್ಯಕರ್ತ ಪದ್ಮನಾಭ ಮಯ್ಯ ಆಗ್ರಹಿಸಿದ್ದಾರೆ. ಬಿ.ಸಿ.ರೋಡಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜು.14ರಂದು ಸೊಸೈಟಿ ಎದುರು ನಡೆದ ಪ್ರತಿಭಟನೆಯಲ್ಲಿ ನಮ್ಮ ಮೇಲೆ ಗೂಂಡಾಗಳು ಹಲ್ಲೆ ನಡೆಸಿದ್ದರೂ ಪುಂಜಾಲಕಟ್ಟೆ ಪೊಲೀಸರು ನಮ್ಮ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪರವಾಗಿ ವರ್ತಿಸಿದ್ದಾರೆ ಮತ್ತು ಅಂದು ಸ್ಥಳದಲ್ಲಿದ್ದ ಪೊಲೀಸರು ಹಲ್ಲೆಕೋರರಿಂದ ನನ್ನನ್ನು ರಕ್ಷಿಸದೆ ವೀಡಿಯೋ ಚಿತ್ರೀಕರಣದಲ್ಲಿ ತೊಡಗಿ ಬೇಜವಾಬ್ದಾರಿಯಿಂದ ವರ್ತಿಸಿದ್ದರು ಎಂದು ಆರೋಪಿಸಿದರು.
ಸಂಘದ ಸದಸ್ಯ ಕೃಷಿಕ ಜಯರಾಮ ನಾಯ್ಕ್ ಇವರ ಹೆಸರಿನಲ್ಲಿ ಅಲ್ಲಿನ ಸಿಬ್ಬಂದಿಯೇ ಶೂನ್ಯ ಬಡ್ಡಿದರದಲ್ಲಿ ರೂ 5ಲಕ್ಷ ಮೊತ್ತ ಸಾಲ ಪಡೆದಿದ್ದಾರೆ. ಇಲ್ಲಿನ ಅಕ್ರಮ ಬಯಲುಗೊಳ್ಳುವ ಭೀತಿಯಿಂದ ಮಾಹಿತಿ ಹಕ್ಕಿನಡಿ ಸದಸ್ಯರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಸದಸ್ಯ ವಿಜಯ ಪ್ರಭು ದೂರಿದರು. ಶೇರುದಾರರಿಗೆ ಸರಿಯಾಗಿ ಲಾಭಾಂಶ ನೀಡುತ್ತಿಲ್ಲ ಎಂದು ಹಿರಿಯ ಸದಸ್ಯ ಸೀತಾರಾಮ ಶೆಟ್ಟಿ ದೋಟ ಆರೋಪಿಸಿದರು. ನಾನು ಕೃಷಿಕನಾಗಿದ್ದರೂ ನನಗೆ ಸದಸ್ಯತನ ನೀಡಿಲ್ಲ ಎಂದು ಗಣೇಶ ಭಟ್ ಕೆದ್ದಳಿಕೆ ದೂರಿಕೊಂಡರು. ಸಿಒ ಅಮಾನತು: ಸೊಸೈಟಿಯ ಸುಪರ್ ವೈಸರ್ ಅವರ ದೂರಿನ ಹಿನ್ನಲೆಯಲ್ಲಿ ಸಿಒ ಕೇಶವ ಎಂಬವರನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದ ಸದಸ್ಯರು ಮತ್ತು ರೈತರು ಇದೀಗ ಅಮಾನತಾದ ಸಿಒ ಅವರು ಸೂಸೈಟಿಗೆ ಬಂದು ದಾಖಲೆಗಳನ್ನು ತಿದ್ದುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಎಂದು ಸದಸ್ಯ ಚಂದ್ರಶೇಖರ ಶೆಟ್ಟಿ ಪುಲಿಮಜಲು ಆರೋಪಿಸಿದರು. ಈ ಬಗ್ಗೆ ಸಹಕಾರ ಸಚಿವರಿಗೆ ದೂರು ಸಲ್ಲಿಸಲಾಗಿದ್ದು, ಶೀಘ್ರವೇ ತನಿಖೆ ನಡೆಸಿ ಸಂಘದ ಸದಸ್ಯರಿಗೆ ನ್ಯಾಯ ನೀಡದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ವಕೀಲ ರಾಜಾರಾಮ ನಾಯಕ್, ಸಂಘದ ಸದಸ್ಯರಾದ ವೆಂಕಟರಮಣ ಮುಚ್ಚಿನ್ನಾಯ, ಗಣೇಶ ನಾಯಕ್, ಸೀತಾರಾಮ ಗೌಡ, ಚಂದ್ರಶೇಖರ ಶೆಟ್ಟಿ ಕುತ್ತಿಮಾರು, ಪ್ರಶಾಂತ ಶೆಟ್ಟಿ ಪೆರುಮಾರು, ಗೌರಿ ಶಂಕರ್, ಅಜಿತ ಶೆಟ್ಟಿ, ಶೇಷಗಿರಿ ಮನ್ಯೇವು ಮತ್ತಿತರರು ಇದ್ದರು.