ಬಂಟ್ವಾಳ: ನೇತ್ರಾವತಿ ನದಿ ಕಿನಾರೆಯ ಮೂಲಕ ನಂದಾವರ ಶ್ರೀ ಶಂಕರನಾರಾಯಣ ವಿನಾಯಕ ದುರ್ಗಾಂಬ ಕ್ಷೇತ್ರಕ್ಕೆ ನೇರ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯ ಮೂಲಕ ಸರಕಾರಕ್ಕೆ ೧೦ ಕೋ.ರೂ.ಗಳ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಇದೀಗ ನದಿ ಕಿನಾರೆಯಲ್ಲಿ ಸರ್ವೇ ಕಾರ್ಯ ಆರಂಭಗೊಂಡಿದೆ.
ಬಂಟ್ವಾಳ ಶಾಸಕ ರಾಜೇಶ್ ನಾÊಕ್ ಉಳಿಪ್ಪಾಡಿಗುತ್ತು ಅವರು ಈಗಾಗಲೇ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಅದಕ್ಕೆ ಸರಕಾರದಿಂದ ಅನುಮೋದನೆ ದೊರಕಿ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸುವುದಕ್ಕೆ ಪೂರ್ವಭಾವಿಯಾಗಿ ಇಲಾಖೆಯು ಸರ್ವೇ ಕಾರ್ಯ ಪ್ರಾರಂಭಿಸಿದೆ.
ಪ್ರಸ್ತುತ ನಂದಾವರ ಕ್ಷೇತ್ರವನ್ನು ಸಂಪರ್ಕಿಸಬೇಕಾದರೆ ಪಾಣೆಮಂಗಳೂರು ಪೇಟೆಯ ಮೂಲಕ ಸುತ್ತುಬಳಸಿ ಸಾಗಬೇಕಿದ್ದು, ಈ ಹಿನ್ನೆಲೆಯಲ್ಲಿ ನದಿ ಕಿನಾರೆಯ ಮೂಲಕವೇ ನೇರ ಸಂಪರ್ಕ ರಸ್ತೆ ನಿರ್ಮಾಣದ ಪ್ರಸ್ತಾಪವಿತ್ತು. ಈ ರಸ್ತೆಯು ಪಾಣೆಮಂಗಳೂರು ಶ್ರೀ ವೀರ ವಿಠಲ ದೇವಸ್ಥಾನದ ಬಳಿಯಿಂದ ಸಾಗಿ ಕ್ಷೇತ್ರವನ್ನು ಸಂಪರ್ಕಿಸಲಿದೆ.
ಸುಮಾರು ೮೦೦ ಮೀ. ಉದ್ದದ ರಸ್ತೆ ನಿರ್ಮಾಣವಾಗಲಿದ್ದು, ಒಂದು ಕಿರುಸೇತುವೆ ಕೂಡ ನಿರ್ಮಾಣವಾಗಬೇಕಿದೆ. ಹೊಸ ರಸ್ತೆಯು ನದಿ ಕಿನಾರೆಯಲ್ಲೇ ಸಾಗುವುದರಿಂದ ಮನಸ್ಸಿಗೂ ವಿಶೇಷ ಆನಂದವನ್ನು ಉಂಟು ಮಾಡಲಿದ್ದು, ನಂದಾವರ ಪ್ರವಾಸಿ ಕ್ಷೇತ್ರವಾಗಿಯೂ ಗುರುತಿಸುವುದಕ್ಕೆ ಅನುಕೂಲವಾಗಿದೆ.
ಪ್ರಸ್ತುತ ಶಾಸಕರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದು, ಬಜೆಟ್‌ನಲ್ಲಿ ಅನುದಾನ ಇಟ್ಟು ಮಂಜೂರಾಗಬೇಕಿದೆ. ಅದಕ್ಕೆ ಪೂರ್ವಭಾವಿಯಾಗಿ ಇಲಾಖೆಯ ಮೂಲಕ ಸರ್ವೇ ಕಾರ್ಯವನ್ನು ಆರಂಭಿಸಿದ್ದೇವೆ. ಅದರ ಬಳಿಕ ಕ್ರೀಯಾಯೋಜನೆ ಸಲ್ಲಿಕೆಯಾಗುತ್ತದೆ. ೮೦೦ ಮೀ. ಉದ್ದದ ರಸ್ತೆಯ ಜತೆಗೆ ಒಂದು ಕಿರು ಸೇತುವೆ ಕೂಡ ನಿರ್ಮಾಣವಾಗಬೇಕಿದೆ ಎಂದು ಬಂಟ್ವಾಳ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಷಣ್ಮುಗಂ ತಿಳಿಸಿದ್ದಾರೆ.
ಇಂಜಿನಿಯರುಗಳಾದ ಅಮೃತ್ ಕುಮಾರ್, ಅರುಣ್ ಪ್ರಕಾಶ್, ಸರ್ವೆ ಇಲಾಖೆಯ ಸನತ್ ಶೆಟ್ಟಿ, ಹಾಗೂ ಪ್ರಿತೇಶ್, ಗ್ರಾ.ಪಂ.ಸದಸ್ಯ ರಾದ ಪ್ರವೀಣ್ ಗಟ್ಟಿ ಉಪಸ್ಥಿತರಿದ್ದರು.