ಬಂಟ್ವಾಳ ಶಾಸಕರ ಕಚೇರಿಯಲ್ಲಿ ನಡೆದ ಹೆದ್ದಾರಿ ಇಲಾಖೆ ಅಧಿಕಾರಿಗಳು ಮತ್ತು ಕಳ್ಳಿಗೆ ಗ್ರಾಮದ ಪ್ರತಿನಿಧಿಗಳ ಸಭೆಯಲ್ಲಿ ಜನಪರ ಕಾಳಜಿ ತೋರಿದ ರಾಜೇಶ್ ನಾಯ್ಕ್
ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಗೇಟ್ ಅವೈಜ್ಞಾನಿಕ, ಇಡೀ ರಾಜ್ಯದಲ್ಲೇ ಈ ರೀತಿಯ ಟೋಲ್ ಗೇಟ್ ಎಲ್ಲೂ ಇಲ್ಲ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕಿಡಿಕಾರಿದರು.
ಅವರು ಶಾಸಕರ ಕಚೇರಿಯಲ್ಲಿ ಇಂದು ನಡೆದ ಹೆದ್ದಾರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಈ ರೀತಿ ನುಡಿದರು.
ಟೋಲ್ ಗೇಟ್ ಜನಸಂಚಾರ ಪ್ರದೇಶದಲ್ಲಿ ನಿರ್ಮಿಸಿದ್ದು ಸರಿಯಲ್ಲ. ಅಲ್ಲದೆ ಇಲ್ಲಿ ಜನಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಕೇವಲ ಟೋಲ್ ಗೇಟ್ ಗುತ್ತಿಗೆದಾರರಿಗೆ ಹಣಗಳಿಸುವ ಉದ್ದೇಶದಿಂದ ಏಕಾಏಕಿ ಡಿವೈಡರ್ ಅಳವಡಿಸಿ ಸಾರ್ವಜನಿಕರಿಗೆ ಅದರಿಂದ ತೊಂದರೆಯಾಗುವುದಾದರೆ ನಮ್ಮ ಒಪ್ಪಿಗೆಯಿಲ್ಲ. ಮುಂದಿನ ದಿನಗಳಲ್ಲಿ 3 ಲೇನ್ ಕಾಮಗಾರಿ ನಡೆಯುವಾಗ ಸ್ಥಳಿಯರ ಜೊತೆ ಚರ್ಚಿಸಿ ಅವರ ಸಹಕಾರವನ್ನು ಪಡೆದು ಸೂಕ್ತ ಕ್ರಮಕೈಗೊಳ್ಳುವಂತೆ ಹಾಗೂ ಅಲ್ಲಿಯವರೆಗೂ ಡಿವೈಡರ್ ಅಳವಡಿಸದಂತೆ ಆದೇಶಿಸಿ ಮತ್ತೊಮ್ಮೆ ಜನಪರ ಕಾಳಜಿ ತೋರಿದರು.
ಸಭೆಯಲ್ಲಿ ಹಾಜರಿದ್ದ ಕಳ್ಳಿಗೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ದಾಮೋದರ ನೆತ್ತರಕೆರೆ ಮಾತನಾಡಿ
ಕಳೆದ 10 ವರ್ಷಗಳಿಂದ ಹೆದ್ದಾರಿ ಇಲಾಖೆ ಕೊಟ್ಟ ಭರವಸೆಯಂತೆ ಜನರ ಬೇಡಿಕೆ ಸ್ಪಂದಿಸಿಲ್ಲ. ಅಂಡರ್ ಪಾಸ್ ನಿರ್ಮಿಸಿಲ್ಲ. ಸೂಕ್ತ ಬೀದಿದೀಪ ವ್ಯವಸ್ಥೆ ಇಲ್ಲ. ಮೂಲಸೌಕರ್ಯ ಕೊರತೆ ಇದೆ. ಚತುಷ್ಪಥ ರಸ್ತೆಯಾದರೂ ಬ್ರಹ್ಮ ಸನ್ನಿಧಿಯಲ್ಲಿ ದ್ವಿಪಥ ಸಂಚಾರಕ್ಕೆ ಮಾತ್ರ ಅವಕಾಶವಿದೆ. ಅದಕ್ಕೂ ಪರಿಹಾರ ಸಿಗಲಿಲ್ಲ. ಅಪಘಾತ ವಲಯದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ. ಸಾವಿರಾರು ಗ್ರಾಮಸ್ಥರಿಗೆ ಸೇರಿದಂತೆ ಹೆದ್ದಾರಿಯಲ್ಲಿ ನಿತ್ಯ ಸಂಚರಿಸುವ ವಾಹನಗಳಿಗೂ ಇದರಿಂದ ತೊಂದರೆಯಾಗುತ್ತಿದೆ. ಅಭಿವೃದ್ಧಿಗೆ ವಿರೋಧವಿಲ್ಲ. ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ ಕಾಮಗಾರಿ ಕೈಗೊಳ್ಳಬೇಕಾಗಿ ವಿನಂತಿಸಿದರು.
ಶಾಸಕರ ಆದೇಶದ ಮೇರೆಗೆ ಇಲಾಖೆ ಅಧಿಕಾರಿಗಳು ಸಮ್ಮತಿ ಸೂಚಿಸಿದರು.
ಈ ಸಂದರ್ಭದಲ್ಲಿ ಎಸಿ ಮದನ್, ತಹಶಿಲ್ದಾರ್ ರಶ್ಮಿ ಎಸ್ ಆರ್, ತಾಲೂಕು ಪಂಚಾಯತ್ ಇಒ ರಾಜಣ್ಣ ಹೆದ್ದಾರಿ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು, ಕಳ್ಳಿಗೆ ಗ್ರಾಪಂ ಅಧಕ್ಷೆ ಯಶೋಧಾ ಜಾರಂದಗುಡ್ಡೆ, ಪಂಚಾಯತ್ ಸದಸ್ಯರಾದ ಮನೋಜ್ ವಳವೂರು, ಪುರುಷೋತ್ತಮ ಕೊಟ್ಟಾರಿ ಮಾಡಂಗೆ ಮತ್ತಿತರರು ಉಪಸ್ಥಿತರಿದ್ದರು.