ಬಂಟ್ವಾಳ: ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಸರಕಾರ ಮುಂದಿನ ಜುಲೈ 21 ರೊಳಗಾಗಿ ರಾಜ್ಯಾದ್ಯಂತ ಶಾಲೆಗಳನ್ನು ಪುನಾರಂಭಿಸಬೇಕು, ತಪ್ಪಿದ್ದಲ್ಲಿ ಹೋರಾಟ ಹಮ್ಮಿಕೊಳ್ಳಲು ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಹಾಗೂ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ತೀರ್ಮಾನಿಸಿದೆ.
ಜಂಟಿ ಸಮಿತಿಯ ತುರ್ತು ಸಭೆ ಅಧ್ಯಕ್ಷ ಪ್ರಕಾಶ್ ಅಂಚನ್ ಅಧ್ಯಕ್ಷತೆಯಲ್ಲಿ ಭಾನುವಾರ ಸಂಜೆ ದಡ್ಡಲಕಾಡು ಸರಕಾರಿ ಶಾಲೆಯಲ್ಲಿ ನಡೆದಿದ್ದು ಸಮಿತಿ ಈ ನಿರ್ಣಯ ಕೈಗೊಂಡಿದೆ.
ಕೋವಿಡ್ ಅನ್ ಲಾಕ್ ಪ್ರಕ್ರಿಯೆ ಆರಂಭಗೊಂಡಿದ್ದು ಎಲ್ಲ ವಲಯಗಳಲ್ಲಿ ಚಟುವಟಿಕೆಗಳು ಆರಂಭಗೊಂಡಿದೆ. ಆದರೆ ಶಾಲೆಗಳನ್ನು ಪುನಾರಂಭಿಸುವ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರವನ್ನು ಸರಕಾರ ಕೈಗೊಳ್ಳದೇ ಇರುವ ಬಗ್ಗೆ ಸಮಿತಿಗೆ ರಾಜ್ಯದ್ಯಂತ ಹಲವಾರು ಪೋಷಕರು ಅಳಲು ತೋಡಿಕೊಂಡಿರುವ ಹಿನ್ನಲೆಯಲ್ಲಿ ತುರ್ತು ಸಭೆ ನಡೆಸಲಾಗಿದೆ. ಆನ್ ಲೈನ್ ಹಾಗೂ ವಿದ್ಯಾಗಮ ಶಿಕ್ಷಣ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸಿರುವ ಸಮಿತಿ ಶಾಲೆಗಳನ್ನು ಪುನಾರಂಭಿಸಿ ಮುಖಾಮುಖಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು, ಇದೇ ಪರಿಣಾಮಕಾರಿ ಹಾಗೂ ಸುರಕ್ಷಿತ ವಿಧಾನ ಎನ್ನುವ ಅಂಶ ಪೋಷಕರಿಂದಲೂ ಕೇಳಿ ಬಂದಿದ್ದು ಸರಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಸಮಿತಿಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ, ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲು ಸಮಿತಿ ತೀರ್ಮಾನಿಸಿದೆ.
ಕಾರ್ಡ್ ಅಭಿಯಾನ: ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಡಿಯಿಂದ ಶಾಲೆಯನ್ನು ಪುನಾರಂಭಿಸುವ ಬಗ್ಗೆ ಸರಕಾರದ ಗಮನ ಸೆಳೆಯಲು ಕಾರ್ಡ್ ಅಭಿಯಾನ ಆರಂಭಿಸಲು ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಹಾಗೂ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ತೀರ್ಮಾನಿಸಿದೆ. ಶೀಘ್ರವೇ ಅಭಿಯಾನ ಆರಂಭಗೊಳ್ಳಲಿದ್ದು ಶಾಲೆ ಪ್ರಾರಂಭಿಸುವ ಬಗ್ಗೆ ಸಹಮತ ವ್ಯಕ್ತಪಡಿಸುವ ಪಾಲಕರು ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಅಧ್ಯಕ್ಷ ಪ್ರಕಾಶ್ ಅಂಚನ್ ಮನವಿ ಮಾಡಿದ್ದಾರೆ.
ಶಾಲೆ ಆರಂಭಿಸುವುದೇ ಸುರಕ್ಷಿತ ಹಾಗೂ ಪರಿಣಾಮಕಾರಿ: ಎಸ್. ಎಲ್. ಭೋಜೆಗೌಡ
ಆನ್ ಲೈನ್ ಅಥವಾ ವಿದ್ಯಾಗಮ ಶಿಕ್ಷಣ ವ್ಯವಸ್ಥೆಯನ್ನು ಅವಲಂಬಿಸುವ ಬದಲು ಶಾಲೆ ಆರಂಭಿಸಿ ಮುಖಾ ಮುಖಿ ಶಿಕ್ಷಣ ಪ್ರಾರಂಭಿಸುವುದೇ ಹೆಚ್ಚು ಸೂಕ್ತ ಎಂದು ವಿಧಾನಪರಿಷತ್ ಸದಸ್ಯ ಎಸ್. ಎಲ್. ಭೋಜ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೂರವಾಣಿಯಲ್ಲಿ ಸಂಪರ್ಕಿಸಿದ ವೇಳೆ ಜಂಟಿ ಸಮಿತಿಯ ತೀರ್ಮಾನಕ್ಕೆ ಸಹಮತ ವ್ಯಕ್ತಪಡಿಸಿದ ಅವರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಶಾಲೆ ಆರಂಭಿಸುವ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕಾಗಿದೆ. ಸಮಿತಿಯ ಈ ತೀರ್ಮಾನವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಡಿಯಿಂದ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಹಾಗೂ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಕೈಗೊಳ್ಳುವ ನಿರ್ಧಾರಗಳಿಗೆ ತನ್ನ ಬೆಂಬಲ ಇರುವುದಾಗಿ ತಿಳಿಸಿದರು.
ಈ ಸಂದರ್ಭ ರಾಜ್ಯ ಸಮಿತಿ ಕಾರ್ಯದರ್ಶಿ ಪುರುಷೋತ್ತಮ ಅಂಚನ್, ಸದಸ್ಯರಾದ ರಾಮಚಂದ್ರ ಪೂಜಾರಿ ಕರೆಂಕಿ, ಪೂವಪ್ಪ ಮೆಂಡನ್, ನವೀನ್ ಸೇಸಗುರಿ, ಅಶ್ವತ್ ಡೆಚ್ಚಾರ್, ಬಾಲಕೃಷ್ಣ ಜಿ., ಮೊದಲಾದವರು ಉಪಸ್ಥಿತರಿದ್ದರು.