✍️ಎಚ್ಕೆ ನಯನಾಡು.
ಗರ ಗರ ಗಸ್, ಗರ ಗರ ಗಸ್, ಕೇಳುತ್ತಿದ್ದ ಶಬ್ದ, ನೋಡುತ್ತಿದ್ದ ದ್ರಶ್ಯ ಇಂದು ಮರೆಯಾಗಿದೆ. ಗರಗಸದ ಮೂಲಕ ಮರ ಕತ್ತರಿಸುವ ಸಾಧಕರು ಈಗ ಸಿಗುವುದು ಅಪರೂಪ. ಪೇಟೆಯಲ್ಲಂತೂ ಬಿಡಿ ಹಳ್ಳಿಯಲ್ಲಂತೂ ಇಂತಹ ಪರಾಕ್ರಮದ ಸಾಧನೆಯ ಕರ್ಮಜೀವಿಗಳು ಇಲ್ಲ. ಕಾಲ ಬದಲಾಗಿದೆ, ಆಧುನಿಕತೆಯ ಸ್ಪರ್ಶದಲ್ಲಿ ಇಂತಹ ಕೆಲಸಗಳು ಮಿಲ್ಲ್, ಬಕ್ಕರ್ ನಲ್ಲಿ ನಡೆಯುತ್ತಿದೆ..
ಹಿಂದೆ ದೊಡ್ಡ ಗಾತ್ರದ ಮರದ ದಿಮ್ಮಿಗಳನ್ನು ಬಿಚ್ಚಿಸಿ ಅದನ್ನು ಹಲಗೆ,ರೀಪು, ಪಕ್ಕಾಸುಗಳಾಗಿ ಮಾಡಲು ಗ್ರಾಮೀಣ ಭಾಗದ ಹಳ್ಳಿಗರ ಜ್ಞಾನದಲ್ಲಿ ಇಂತಹ ತಂತ್ರಜ್ಞಾನ ಅಳವಡಿಸುತ್ತಿದ್ದರು.
ಅಡ್ಡಮುರಿ ಹಾಕಿ ಬ್ರಹತ್ ಗಾತ್ರದ ಮರಗಳನ್ನು ಗರಗಸದ ಮೂಲಕ ಕೊಯ್ದು ಈ ಮುಖೇನ ಊರಿನ ಗರಗಸ ಎಳೆಯುವ ಚಾಣಕ್ಷರಿಗೆ ವ್ರತ್ತಿಯೂ ಆಗುತಿತ್ತು, ಉತ್ಪತ್ತಿಯೂ ಆಗುತಿತ್ತು. ಕೇವಲ ಇಬ್ಬರು ವ್ಯಕ್ತಿ ಆಳುಗಳು ಶ್ರಮ ವಹಿಸಿ, ನಾಜೂಕಿನಿಂದ ಅಟ್ಟನಿಗೆ ಸ್ರಷ್ಟಿಸಿ ಅದರಲ್ಲಿ ಹಿರಿ ಗಾತ್ರದ ಮರದ ದಿಮ್ಮಿಗಳನ್ನು ಮಲಗಿಸಿ,ಉದ್ದನೆಯ ಗರಗಸದ ಮೂಲಕ ಅದನ್ನು ಕತ್ತರಿಸುತ್ತಿದ್ದರು, ಅದನ್ನು ನೋಡುವುದೇ ಚೆಂದ, ಅದರ ಶಬ್ದವೇ ನಾದ. ಗರ್ ಗರ್ ಗಸ್…
ಬೆಳೆದ ಬ್ರಹತ್ ಗಾತ್ರದ ಮರಗಳನ್ನು ಕಡಿಯುವುದು ಅಷ್ಟು ಸುಲಭವೇನಲ್ಲ,ಅದಕ್ಕೆ ಚಾಣಾಕ್ಷಕತೆ ಬೇಕು. ಅದಕ್ಕೆ ಬೇಕಾದಂತಹ ಸಿದ್ದ ಹಸ್ತ ಜನರು ಅಂದು ಇದ್ದರು. ಗೆಲ್ಲುಗಳನ್ನು ಕಡಿದು,ರೊಂಬೆ ಕೊಂಬೆಗಳನ್ನು ಬಗೆದು ಅವರದೇ ತಂಡದ ಮುಖಾಂತರ ಹಗ್ಗಕಟ್ಟಿ ಕೆಳಗಿಳಿಸಿ ಅಡ್ಡ ಮುರಿ ಹಾಕಿ ಯಾವುದೇ ಹತ್ತಿರದ ಮರ,ಸಸ್ಯ, ಮನೆ, ಕಟ್ಟಡಗಳಿಗೆ ಹಾನಿಯಾಗದಂತೆ ಮರವನ್ನು ಧರಾಶಾಯಿಯಾಗಿಸುವ ನೈಪುಣ್ಯತೆ ಅವರಲ್ಲಿತ್ತು.
ಎಂತಹಾ ಕೈ ಚಳಕ ಸಾವಧಾನವಾಗಿ ಯಾರದೂ ನಿರ್ದೇಶನವಿಲ್ಲದೆ ಟೀಂ ವರ್ಕ್ ಮೂಲಕ ಮರ ನೆಲ ಸೇರುತಿತ್ತು. ಇಂದು ಅದಕ್ಕೆ ತಂತ್ರ ಉಪಕರಣಗಳು ಬಂದಿದೆ.
ಭೂಮಿಗೊರಗಿದ ಮರ ಉಪಯೋಗದ ವಸ್ತುವಾಗಬೇಕಾದರೆ ಅದನ್ನು ಕತ್ತರಿಸಬೇಕು, ಆಗ ಗರಗಸ ಗ್ಯಾಂಗಿಗೆ ಬುಲಾವ್, ಊರು, ಪರವೂರಿನ ಗರಗಸ ಕಾರ್ಮಿಕರನ್ನು ಹಿಡಿದು ಮರ ಕೊಯ್ಯಲು ತಯಾರಾಗುತ್ತಿದ್ದರು. ಅಂದು ಗರಗಸ ಮೇಧಾವಿಗಳಿಗೆ ಒಳ್ಳೆಯ ಹೆಸರಿತ್ತು. ಅವರ ಹೆಸರ ಮುಂದೆ ಗರ್ಗಸ್ ಎನ್ನುವ ಪದ ಸೇರಿ ಎಲ್ಲರಿಗೂ ಪರಿಚಯಸ್ಥವಾಗಿದ್ದ.
ಅಡ್ಡ ಮರದಲ್ಲಿ ಹಲಗೆ ವೈಜ್ಞಾನಿಕವಾಗಿ ಕಟ್ಟಿದ ಅಟ್ಟಣಿಗೆ ಮುಖಾಂತರ ಅದರಲ್ಲಿ ಮರದ ಅಡ್ಡ ದಿಮ್ಮಿಗಳನ್ನು , ಅದನ್ನೂ ಇಡುವುದು ಸುಲಭವೇನಲ್ಲಾ. ನಾಜೂಕಾಗಿ ಅದನ್ನು ಕೆಲವೇ ಜನರ ಜತೆ ಮೇಲೇರಿಸಿ ಅಟ್ಟಣಿಗೆ ಮೇಲೊಬ್ಬ ಕೆಳಗೊಬ್ಬ ನಿಂತು(ಕೆಲವೊಮ್ಮೆ) ಕುಳಿತು ತಮಗೆ ಬೇಕಾದಂತೆ ಮರ ಕೊಯ್ಯುವುದು, ಹಲಗೆ ಮಾಡುವುದು ಒಂದು ಕೈ ಚಳಕವೇ ಸರಿ.
ಆದರೆ ಇದೀಗ ಮರದ ಮಿಲ್ಲುಗಳು ಬಂದು ಎಲ್ಲವೂ ಆಧುನಿಕ ತಂತ್ರಜ್ಞಾನದಲ್ಲಿ ಕೆತ್ತನೆಯಾಗುತ್ತಿದೆ, ಕ್ಷಣಮಾತ್ರದಲ್ಲಿ ಹಿರಿ ಮರ ದಿಮ್ಮಿಗಳು ನಾನಾ ರೂಪದಲ್ಲಿ ಕತ್ತರಿಸಿ, ಗ್ರಾಹಕರಿಗೆ ನೀಡಿ ಇಂದು ಮರ ಹೆಮ್ಮರಗಳು ಮರಣವಾಗಿ, ಮರದ ಉದ್ಯಮಿಗಳು ಹೆಮ್ಮರವಾಗಿದ್ದಾರೆ. ಇದರ ಮೂಲ ಕೆಲಸಗಾರರು ಮರೆಯಾಗುತ್ತಿದ್ದಾರೆ. ಗರಗಸ, ಕೀಲು, ಮಡು,ಕುದಣಿ,ಮರೆಯಾಗುತ್ತಿದೆ.