ಬಂಟ್ವಾಳ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ನಡೆಸಲ್ಪಡುವ ಚಾವಡಿ ತಮ್ಮನ ಬೊಕ್ಕ ಪಾತೆರಕತೆ ಕಾರ್ಯಕ್ರಮದ ಅಂಗವಾಗಿ ಸಾಹಿತಿ, ಸಂಘಟಕ, ಪತ್ರಕರ್ತ ಡಿ.ಎಂ.ಕುಲಾಲ್ ಅವರನ್ನು ಬಿ.ಸಿ.ರೋಡು ದೈಪಲದ ಮನೆಯಲ್ಲಿ ತುಳುಚಾವಡಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಸಮ್ಮಾನಿಸಿ ಮಾತನಾಡಿ, ಸಣ್ಣ ವಯಸ್ಸಿನಲ್ಲೇ ಡಿ.ಎಂ.ಕುಲಾಲ್ ಅವರು ತುಳು ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ತುಳು ಭಾಷೆಗೆ ಅವರ ಕೊಡುಗೆ ಇನ್ನೂ ಅಗತ್ಯವಿದ್ದು, ಅವರಿಗೆ ದೇವರು ಆರೋಗ್ಯ ನೀಡಲಿ ಎಂದು ಪ್ರಾರ್ಥಿಸೋಣ. ಅವರಲ್ಲಿ ಧೈರ್ಯ ಹಾಗೂ ವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಜೀವನ ಭಗವಂತನ ನಿಯಮವಾಗಿದ್ದು, ಅದಕ್ಕೆ ನಾವು ತಲೆ ಬಾಗಲೇಬೇಕು. ಭಾಷೆ, ಸಂಸ್ಕೃತಿಗೆ ದುಡಿಯುವವರು ಭಾಷಾ ಪ್ರೇಮಿಗಳಾಗಿದ್ದು, ತುಳು ಭಾಷೆಯ ಸೇವೆ ಮಾಡಿದ ಮಹನೀಯರಿಗೆ ಬಳಿಗೆ ತೆರಳಿ ಸಮ್ಮಿಸಿದ್ದೇವೆ. ಸರ್ವ ಸದಸ್ಯರು ಒಕ್ಕೊರಲಿನಿಂದ ನಿರ್ಣಯ ತೆಗೆದುಕೊಂಡು ಡಿ.ಎಂ.ಕುಲಾಲ್ ಅವರಿಗೆ ಗೌರವ ಸಲ್ಲಿಕೆ ಮಾಡಲಾಗಿದೆ. ಅಕಾಡೆಮಿಯು ತುಳುಲಿಪಿಗೆ ವಿಸ್ತಾರವಾದ ಕೆಲಸ ಮಾಡುತ್ತಿದ್ದು, ೧೫೦೦ ಶಿಕ್ಷಕರು ಸಿದ್ಧರಾಗಿದ್ದಾರೆ. ಯುವ ಸಮೂಹವೇ ಇದರ ಹಿಂದೆ ದೊಡ್ಡ ಕೆಲಸ ಮಾಡುತ್ತಿದೆ ಎಂದರು.
ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಸದಸ್ಯರಾದ ಮಲ್ಲಿಕಾ ಶೆಟ್ಟಿ, ನಿಟ್ಟೆ ಶಶಿಧರ್ ಶೆಟ್ಟಿ, ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಪುರಸಭಾ ಸದಸ್ಯ ಹರಿಪ್ರಸಾದ್ ಉಪಸ್ಥಿತರಿದ್ದರು.
ಸದಸ್ಯರಾದ ಚೇತಕ್ ಪೂಜಾರಿ ಸಮ್ಮಾನ ಪತ್ರ ವಾಚಿಸಿದರು. ನರೇಂದ್ರ ಕೆರೆಕಾಡು ಸ್ವಾಗತಿಸಿದರು. ಅಕಾಡೆಮಿಯ ರಿಜಿಸ್ಟ್ರಾರ್ ಕವಿತಾ ವಂದಿಸಿದರು. ನಾಗೇಶ್ ಕುಲಾಲ್ ಕುಳಾಯಿ ಕಾರ್ಯಕ್ರಮ ನಿರ್ವಹಿಸಿದರು.