ಕರಾವಳಿಯ ಮೀನುಗಾರರನ್ನು ಬಳಸಿಕೊಂಡು ಬಿಜೆಪಿ ಕರಾವಳಿಯುದ್ದಕ್ಕೂ ಗೆಲುವು ಕಂಡಿದೆ, ಇನ್ನು ಮೇಕೆದಾಟನ್ನು ಸುಮ್ಮನೆ ಕಗ್ಗಂಟು ಮಾಡಬೇಕಾಗಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು.
ಮೇಕೆದಾಟು ಯೋಜನೆಯಲ್ಲಿ ಭೂಮಿ ನಮ್ಮದು, ಹಣ ನಮ್ಮದು, ನೀರು ನಮ್ಮದು, ಕೆಲಸವೂ ನಮ್ಮದು. ಯಡಿಯೂರಪ್ಪ ಬದ್ಧತೆ ತೋರಿಸಿ ಅಣೆಕಟ್ಟು ಕೆಲಸ ಆರಂಭಿಸಲಿ. ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ನಮ್ಮದೇ ರಾಜ್ಯದೊಳಗಿನ ಕೆಲಸಕ್ಕೆ ದೊಣೆನಾಯಕರನ್ನು ಕೇಳಬೇಕಾಗಿಲ್ಲ. ಸುಪ್ರೀಂ ಕೋರ್ಟ್ ಆದೇಶವೂ ಹಾಗೇ ಇದೆ. ಮೇಕೆದಾಟು ಯೋಜನೆಯ ನದಿಯಾಚೆ ಹನೂರು ಕ್ಷೇತ್ರವಿದೆ. ಈಚೆ 90% ಭೂಮಿ ಮುಳುಗಡೆ ಆಗುವುದು ನನ್ನ ಕನಕಪುರ ವಿಧಾನ ಸಭಾ ಕ್ಷೇತ್ರದ್ದು. ನಾವು ಪರಿಸರ ಇಲಾಖೆಯ ಅನುಮತಿ ಕೇಳಿದ್ದೆವು. ಈಗ ಅದೂ ಅನುಮತಿ ನೀಡಿದ ಮೇಲೆ ಯಡಿಯೂರಪ್ಪ ತಮ್ಮ ಡಬಲ್ ಎಂಜಿನ್ ಸರಕಾರದಲ್ಲಿ ಈ ಕೆಲಸ ಆರಂಭಿಸಿದರೆ ಅವರಿಗೂ ಲಾಭ ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
ತಟ ಸಿಆರ್‌ಎಲ್ ಗೋವಾದಲ್ಲಿ, ಕೇರಳದಲ್ಲಿ 50 ಮೀಟರ್ ಇರುವಾಗ ಇಲ್ಲಿ 150 ಮೀಟರ್ ಏಕೆ? ಅದನ್ನು ಬದಲಿಸಬೇಕು. ನಮಗೇನೂ ಭೂಮಿ, ಸಾಧ್ಯವಾದಷ್ಟು ಬಡವರಿಗೂ ಭೂಮಿ ಹಂಚಿದ್ದೇವೆ. ಆದರೆ ಮೀನುಗಾರರಿಗೆ ಸಮುದ್ರದಲ್ಲಿ ಜಾಗದ ಪಟ್ಟಾ ಕೊಟ್ಟಿದ್ದೇವೆಯೇ ಇಲ್ಲ. ಅವರಿಗೆ ಸರಕಾರವೇ ಸಾಕ್ಷಿಗೆ ನಿಂತು ಸಾಲ ಕೊಡಿಸಬೇಕು ಎಂದರು. ಬಿಜೆಪಿ ಸರಕಾರ ಬಂದ ಮೇಲೆ ಇಂಧನ ದರ ಹೆಚ್ಚಳ, ಪೂರೈಕೆ ಕಡಿಮೆ, ಸಬ್ಸಿಡಿ ಕಡಿತ. ಅವರಿಗೆ ಸಹಾಯಧನ ಎಂದುದು ನಾಲ್ಕು ತಿಂಗಳುಗಳಿಂದ ಬಂದಿಲ್ಲ. ಮೀನುಗಾರರನ್ನು ಅಸಂಘಟಿತ ಕಾರ್ಮಿಕರು ಎಂದು ಮಾಡಿ, ಲಾಕ್‌ಡೌನ್ ಪ್ಯಾಕೇಜ್ ಕೊಡಬೇಕಿತ್ತು. ನಾನು ರಾಜಕೀಯೇತರನಾಗಿ ಕರಾವಳಿಯ ಎಲ್ಲ ಮೀನುಗಾರರಲ್ಲಿ ಮಾತನಾಡಲು ಬಂದಿದ್ದೇನೆ. ಎರಡು ದಿನ ಉಡುಪಿ, ಉತ್ತರ ಕನ್ನಡ ಎಂದು ಎಲ್ಲ ಆದ ಮೇಲೆ ಸಮಗ್ರ ಯೋಜನೆ ಒಂದನ್ನು ರೂಪಿಸಿ ಹೇಳುವೆ ಎಂದೂ ಡಿ. ಕೆ. ಶಿವಕುಮಾರ್ ತಿಳಿಸಿದರು.
ಆರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಎಲ್ಲರನ್ನೂ ಸ್ವಾಗತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ,ಶಾಸಕರಾದ ಯು. ಟಿ. ಖಾದರ್, ಶಾಲೆಟ್ ಪಿಂಟೋ, ಕವಿತಾ ಸನಿಲ್, ಬಾವಾ, ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.