ಒಂದು ಉದ್ಯಮ, ಸಂಸ್ಥೆ, ಅಂಗಡಿ ಅಂದಮೇಲೆ ಅಲ್ಲಿ ದೇವರ ಫೋಟೋ ಸಾಮಾನ್ಯವಾಗಿ ಇರುತ್ತದೆ. ಆದರೆ ಬಂಟ್ವಾಳ ಪೇಟೆಯ ಸನಿಹ ಜಕ್ರಿಬೆಟ್ಟು ಎಂಬಲ್ಲಿರುವ ದಿನೇಶ್ ಪೂಜಾರಿಯವರ ಶ್ರೀದುರ್ಗಾ ಎಂಬ ಹೆಸರಿನ ಸಣ್ಣ ಹೆಂಚಿನ ಛಾವಣಿಯ ಹೋಟೇಲಲ್ಲಿ ದೇವರ ಫೋಟೋ ಜೊತೆಗೆ ಮತ್ತೊಂದು ಮಗ್ಗುಲಲ್ಲಿ ಮಾಜಿ ಸಚಿವರು, ಮಂಗಳೂರು ಶಾಸಕರಾದ ಯು.ಟಿ.ಖಾದರ್ ಅವರ ಚಿತ್ರ ಕೂಡಾ ತೂಗು ಹಾಕಲಾಗಿದೆ.
ದಿನೇಶ್ ಅವರಿಗೆ ಖಾದರ್ ಅಂದ್ರೆ ಅಭಿಮಾನ. ದಿನೇಶ್ ಖಾದರ್ ಕ್ಷೇತ್ರದ ಕೊಣಾಜೆಯ ಪಾವೂರಿನವರು. ತನ್ನ ಪತ್ನಿಯ ತವರು ಮನೆಯ ಎದುರು ಬಂಟ್ವಾಳದ ಜಕ್ರಿಬೆಟ್ಟಿನಲ್ಲಿ 10 ವರ್ಷದಿಂದ ಸಣ್ಣ ಹೋಟೆಲ್ ಉದ್ಯಮದಲ್ಲಿ ತೊಡಗಿದ್ದಾರೆ. ಇಲ್ಲಿ ಕಟೀಲು ದುರ್ಗಾಪರಮೇಶ್ವರಿ ಅಮ್ಮ, ಗಣಪತಿ, ಅಯ್ಯಪ್ಪ ಸ್ವಾಮಿಯ ಫೋಟೋ ಇಟ್ಟು ಪೂಜಿಸ್ತಾರೆ. ಇನ್ನೊಂದು ಬದಿಯಲ್ಲಿ ಯು.ಟಿ.ಖಾದರ್ ಫೋಟೋ. ಜೊತೆಗೆ ಜನಾರ್ದನ ಪೂಜಾರಿಯವರದ್ದೂ ಇದೆ. ಖಾದರ್ ನನ್ನ ಪಾಲಿಗೆ ದೇವರಂತೆ ಎನ್ನುತ್ತಾರೆ ದಿನೇಶ್. ಖಾದರ್ ಪ್ರಥಮ ಬಾರಿ ಶಾಸಕರಾದಾಗ ಬೆಂಗಳೂರು ವಿಧಾನಸೌಧದಲ್ಲಿ 4 ವರ್ಷ ಹೋಟೆಲ್ ಕೆಲಸ ಮಾಡಿದ ಅನುಭವ ದಿನೇಶ್ ಅವರದ್ದು. ಎಲ್ಲಾ 224 ಶಾಸಕರ ಕೊಠಡಿಗೆ ದಿನಪತ್ರಿಕೆ ಕೂಡಾ ಹಾಕುತ್ತಿದ್ದರು. ಇವೆಲ್ಲವೂ ಖಾದರ್ ಕೃಪೆಯಿಂದ ಸಾಧ್ಯವಾಯಿತು. ಆನಂತರ ಊರಿಗೆ ಬಂದು ಹೋಟೆಲ್ ಆರಂಭಿಸಿದೆ. ಜೊತೆಗೆ ಜಾತಿ, ಪಕ್ಷ ಮರೆತು ಖಾದರ್ ಮೂಲಕ ಊರವರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದೇನೆ. ಎಷ್ಟೋ ಜನರಿಗೆ ನನ್ನ ಮೂಲಕ ಯು.ಟಿ.ಖಾದರ್ ಅವರಿಂದ ಉಪಕಾರವಾಗಿದೆ. ಈ ತನಕ ಖಾದರ್ ಉಪಕಾರ ಪಡೆದವರು ಯಾವ ಪಕ್ಷಕ್ಕೆ, ಜಾತಿಗೆ ಸೇರಿದವರೆಂದು ಕೇಳಿಲ್ಲ. ಸಿದ್ದರಾಮಯ್ಯ ಸರಕಾರದಲ್ಲಿ ನಂಬರ್ ವನ್ ಸಚಿವರಾಗಿದ್ದ ಖಾದರ್ ಎಲ್ಲ ಜಾತಿ, ಧರ್ಮ, ಪಕ್ಷದವರ ಪ್ರೀತಿಗೆ ಪಾತ್ರರಾದ ಅಪೂರ್ವ ವ್ಯಕ್ತಿ. ಇಂತಹ ಜನಪ್ರತಿನಿಧಿಯನ್ನು ಪಡೆದ ನಾವು ಧನ್ಯರು ಎನ್ನುತ್ತಾರೆ ದಿನೇಶ್.